ಕೊಲಂಬೊ: ಶ್ರೀಲಂಕಾದಲ್ಲಿ ಬಾಂಬ್ ದಾಳಿ ಮಾಡುವ ಮೊದಲು ಕೆಲವು ಆತ್ಮಹತ್ಯಾ ಬಾಂಬರ್ ಗಳು ಕಾಶ್ಮೀರ ಮತ್ತು ಕೇರಳಕ್ಕೆ ತರಬೇತಿಗಾಗಿ ಭೇಟಿ ನೀಡಿದ್ದರು ಎನ್ನುವ ಸಂಗತಿಯನ್ನು ಶ್ರೀಲಂಕಾ ಸೇನಾ ಮುಖ್ಯಸ್ಥರು ಬಹಿರಂಗಪಡಿಸಿದ್ದಾರೆ.
ಇದೇ ಮೊದಲ ಬಾರಿಗೆ ಶ್ರೀಲಂಕಾ ಭದ್ರತಾ ಅಧಿಕಾರಿಯೊಬ್ಬರು ಕೊಲಂಬೊದೊಂದಿಗೆ ಗುಪ್ತಚರ ಮಾಹಿತಿಗಳು ಹಂಚಿಕೊಂಡಿದ್ದ ಸಂಗತಿಯಲ್ಲಿ ಭಾರತಕ್ಕೆ ಉಗ್ರಗಾಮಿಗಳ ಭೇಟಿ ನೀಡಿರುವುದನ್ನು ದೃಢಪಡಿಸಿದ್ದಾರೆ. ಏಪ್ರಿಲ್ 21 ರಂದು ಶ್ರೀಲಂಕಾದಲ್ಲಿ ಸಂಭವಿಸಿದ್ದ ದಾಳಿಯಲ್ಲಿ ಸುಮಾರು 253 ಜನರು ಮೃತಪಟ್ಟು 500ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.
ಈಗ ಬಿಬಿಸಿಯ ಸಂದರ್ಶನವೊಂದರಲ್ಲಿ, ತಿಳಿಸಿರುವ ಶ್ರೀಲಂಕಾ ಸೈನ್ಯದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮಹೇಶ್ ಸೇನನಾಯಕೆ ಉಗ್ರರು ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಹೊಂದಿರುವ ಬಗ್ಗೆ ಮಾತನಾಡುತ್ತಾ "ಉಗ್ರರು (ಶಂಕಿತ) ಭಾರತಕ್ಕೆ ಹೋಗಿದ್ದಾರೆ, ಕಾಶ್ಮೀರ, ಬೆಂಗಳೂರು ಮತ್ತು ಕೇರಳಕ್ಕೆ ಪ್ರಯಾಣ ಮಾಡಿರುವ ಬಗ್ಗೆ ನಮ್ಮಲ್ಲಿ ಮಾಹಿತಿ ಇದೆ" ಎಂದು ಹೇಳಿದರು.
ಇದೇ ವೇಳೆ ಕಾಶ್ಮೀರ ಮತ್ತು ಕೇರಳದಲ್ಲಿ ಅವರು ಯಾವ ಚಟುವಟಿಕೆಗಳನ್ನು ಮಾಡುತ್ತಿದ್ದರು ಎಂದು ಪ್ರಶ್ನಿಸಿದಾಗ ಅವರು ತರಬೇತಿಗಾಗಿ ಮತ್ತು ಅಂತರಾಷ್ಟ್ರೀಯ ಸಂಪರ್ಕವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಅಲ್ಲಿಗೆ ಭೇಟಿ ನೀಡಿದ್ದಾರೆ ಎಂದು ಉತ್ತರಿಸಿದರು.ಶ್ರೀಲಂಕಾದಲ್ಲಿನ ದಾಳಿಯ ಹೊಣೆಯನ್ನು ಇಸ್ಲಾಮಿಕ್ ರಾಜ್ಯ ಭಯೋತ್ಪಾದಕ ಗುಂಪೊಂದು ಹೊತ್ತುಕೊಂಡಿದೆ. ಆದರೆ ಸರ್ಕಾರವು ಸ್ಥಳೀಯ ಇಸ್ಲಾಮಿ ಉಗ್ರಗಾಮಿ ಗುಂಪು ನ್ಯಾಷನಲ್ ಥೌಹೇಥ್ ಜಮಾತ್ (ಎನ್ ಟಿಜೆ) ಎಂದು ಹೇಳಿದೆ.