ಉತ್ತರಾಖಂಡ, ಮಧ್ಯಪ್ರದೇಶದಲ್ಲೂ ಮೈತ್ರಿ ಘೋಷಿಸಿದ ಎಸ್​ಪಿ-ಬಿಎಸ್​ಪಿ

ಉತ್ತರಖಂಡದ 5 ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಸ್ಥಾನದಲ್ಲಿ ಎಸ್​ಪಿ ಮತ್ತು 4 ಸ್ಥಾನಗಳಲ್ಲಿ ಬಿಎಸ್​ಪಿ ಸ್ಪರ್ಧಿಸಲಿದೆ.  

Last Updated : Feb 25, 2019, 04:04 PM IST
ಉತ್ತರಾಖಂಡ, ಮಧ್ಯಪ್ರದೇಶದಲ್ಲೂ ಮೈತ್ರಿ ಘೋಷಿಸಿದ ಎಸ್​ಪಿ-ಬಿಎಸ್​ಪಿ title=

ಲಕ್ನೋ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಮೈತ್ರಿ ಘೋಷಿಸಿರುವ ಸಮಾಜವಾದಿ(ಎಸ್​ಪಿ) ಮತ್ತು ಬಹುಜನ ಸಮಾಜವಾದಿ(ಬಿಎಸ್​ಪಿ) ಪಕ್ಷಗಳು ಇದೀಗ ಉತ್ತರಾಖಂಡ ಮತ್ತು ಮಧ್ಯಪ್ರದೇಶದಲ್ಲಿ ಮೈತ್ರಿ ಘೋಷಿಸಿವೆ.

ಉತ್ತರಖಂಡದ 5 ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಸ್ಥಾನದಲ್ಲಿ ಎಸ್​ಪಿ ಮತ್ತು 4 ಸ್ಥಾನಗಳಲ್ಲಿ ಬಿಎಸ್​ಪಿ ಸ್ಪರ್ಧಿಸಲಿದೆ. ಅದೇ ರೀತಿ ಮಧ್ಯಪ್ರದೇಶದ 29 ಲೋಕಸಭಾ ಕ್ಷೇತ್ರಗಳಲ್ಲಿ 3 ಸ್ಥಾನಗಳಲ್ಲಿ ಎಸ್​ಪಿ ಮತ್ತು ಇನ್ನುಳಿದ 26 ಸ್ಥಾನಗಳಲ್ಲಿ ಬಿಎಸ್​ಪಿ ಸ್ಪರ್ಧಿಸಲಿದೆ.

ಲೋಕಸಭಾ ಕ್ಷೇತ್ರದ ಬಗ್ಗೆ ಮಾತನಾಡುವುದಾದರೆ ಉತ್ತರಾಖಂಡದ ಪೌರಿ-ಗಡ್ವಾಲ್ ಕ್ಷೇತ್ರವು ಎಸ್​ಪಿ ಪಾಲಾಗಿದೆ. ಮತ್ತೊಂದೆಡೆ, ಮಧ್ಯಪ್ರದೇಶದ ಬಾಲಾಘಾಟ್, ಟಿಕಾಮ್ಗಾರ್, ಖಜುರಾಹೋದಲ್ಲಿ ಎಸ್​ಪಿ ಸ್ಪರ್ಧಿಸಲಿದೆ ಎನ್ನಲಾಗಿದೆ.

ಉತ್ತರಪ್ರದೇಶದಲ್ಲಿ ಸೀಟು ಹಂಚಿಕೆ:
ಉತ್ತರಪ್ರದೇಶದಲ್ಲಿರುವ 80 ಲೋಕಸಭಾ ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ 37 ಮತ್ತು ಬಹುಜನ ಸಮಾಜ ಪಕ್ಷ 38 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಎರಡೂ ಪಕ್ಷಗಳು ಒಮ್ಮತದ ನಿರ್ಧಾರ ಪ್ರಕಟಿಸಿವೆ. ಈಗಾಗಲೇ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಗಾಂಧೀ ಕುಟುಂಬದ ಭದ್ರಕೋಟೆಯಾದ ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ನಿರ್ಧರಿಸಿದ್ದು, ಉಳಿದ ಮೂರು ಸ್ಥಾನಗಳು ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕ ದಳಕ್ಕೆ  ಸಲ್ಲಲಿದೆ. 

ಎಸ್​ಪಿ ಸ್ಪರ್ಧಿಸಲಿರುವ ಕ್ಷೇತ್ರಗಳು:
ಎಸ್​ಪಿ ಪಾಲಾಗಿರುವ 37 ಕ್ಷೇತ್ರಗಳಲ್ಲಿ ಕೈರಾನಾ, ಮೊರಾದಾಬಾದ್, ಸಂಭಲ್, ರಾಮ್ಪುರ್, ಮೇನ್ಪುರಿ, ಫಿರೋಜಾಬಾದ್, ಬದಾಯುನ್, ಬರೇಲಿ, ಲಕ್ನೋ, ಇಟಾವಾಹ್, ಅಲಹಾಬಾದ್, ಕೌಶಾಂಬಿ, ಫುಲ್ಪುರ್, ಫೈಜಾಬಾದ್, ಗೊಂಡಾ, ಗೋರಖ್ಪುರ್, ಅಜಗಢ್, ವಾರಣಾಸಿ ಮತ್ತು ಮಿರ್ಜಾಪುರ ಕ್ಷೇತ್ರಗಳು ಸೇರಿವೆ.

ಈ ಸ್ಥಾನಗಳಲ್ಲಿ ಬಿಎಸ್​ಪಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ:
ಸಹರಾನ್ಪುರ್, ಬಿಜ್ನೋರ್, ನಗೀನಾ, ಅಲಿಗಢ್, ಆಗ್ರಾ, ಫತೇಪುರ್ ಸಿಕ್ರಿ, ಧೌರಾಹಾರ, ಸಿಟಾಪುರ್, ಸುಲ್ತಾನ್ಪುರ್, ಪ್ರತಾಪ್ಗಡ್, ಕೈಸರ್ಗಂಜ್, ಬಸ್ತಿ, ಸೇಲಂಪುರ್, ಜೌನ್ಪುರ್, ಭೋಧೋಯಿ ಮತ್ತು ಡಿಯೋರಿಯಾ ಸೇರಿ ಒಟ್ಟು 38 ಕ್ಷೇತ್ರಗಳಲ್ಲಿ ಬಿಎಸ್​ಪಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.

Trending News