ನವದೆಹಲಿ:ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಮುಖಾಮುಖಿಯಲ್ಲಿ ಒಟ್ಟು ನಾಲ್ವರು ಉಗ್ರರನ್ನು ಹತ್ಯೆಗೈಯಲಾಗಿದ್ದು, ಓರ್ವ ಉಗ್ರನನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ. ಉಳಿದ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಗುಪ್ತಚರ ಮಾಹಿತಿಯ ಮೇರೆಗೆ ಕಿಲುರಾ ಪ್ರಾಂತ್ಯದಲ್ಲಿ ಕಾರ್ಯಾಚರಣೆಗೆ ಇಳಿದ ಭದ್ರತಾಪಡೆ
ಈ ಕುರಿತು ಮಾಹಿತಿ ನೀಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಶೋಪಿಯಾನ್ ಜಿಲ್ಲೆಯ ಕಿಲುರಾ ಬಳಿ ಸುಮಾರು 4-5 ಉಗ್ರರು ಅವಿತು ಕುಳಿತಿರುವ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪೊಲೀಸಲು ಹಾಗೂ CRPF ಸಿಬ್ಬಂದಿಗಳು ಈ ಜಂಟಿ ಕಾರ್ಯಾಚರಣೆಯನ್ನು ನಡೆಸಿವೆ.
ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಒಟ್ಟು ನಾಲ್ವರು ಉಗ್ರರ ಹತ್ಯೆ, ಓರ್ವ ಉಗ್ರ ಜೀವಂತ ಸೆರೆ
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಪ್ರದೇಶವನ್ನು ಸುತ್ತುವರೆದ ಭದ್ರತಾಪಡೆ ಯೋಧರು ಹುಡುಕು ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ಸುರಿಮಳೆಗೈದಿದ್ದಾರೆ. ಇದಕ್ಕೆ ಭದ್ರತಾ ಪಡೆಯ ಯೋಧರು ಕೂಡ ತಕ್ಕ ಪ್ರತ್ಯುತ್ತರ ನೀಡಿದ್ದು, ಈ ದಾಳಿಯಲ್ಲಿ ಒಟ್ಟು ನಾಲ್ವರು ಉಗ್ರರು ಹತ್ಯೆಯಾಗಿದ್ದಾರೆ. ಇದೇ ವೇಳೆ ಓರ್ವ ಉಗ್ರನನ್ನು ಜೀವಂತ ಸೆರೆಹಿಡಿಯಲಾಗಿದೆ. ಈ ಉಗ್ರನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ ಯಾವೊಬ್ಬ ಯೋಧನು ಕೂಡ ಹುತಾತ್ಮನಾದ ವರದಿಯಾಗಿಲ್ಲ.
ಘಟನೆಯ ಕುರಿತು ಟ್ವೀಟ್ ಮಾಡಿರುವ ಕಾಶ್ಮೀರದ IG ವಿಜಯ್ ಕುಮಾರ್, ದಾಳಿಯಲ್ಲಿ ಹತ್ಯೆಗೀಡಾದ ಉಗ್ರರನ್ನು ಅಲ್-ಬದ್ರ್ ಸಂಘಟನೆಯ ಜಿಲ್ಲಾ ಕಮಾಂಡರ್ ಶಾಕುರ್ ಪರ್ರೆ ಹಾಗೂ ಸುಹೈಲ್ ಭಟ್ ಎಂದು ಗುರಿತಿಸಲಾಗಿದೆ. ಈ ಇಬ್ಬರು ಉಗ್ರರು ಜಮ್ಮು ಕಾಶ್ಮೀರದ ಗ್ರಾಮ ಪಂಚಾಯ್ತಿ ಮುಖ್ಯಸ್ಥನ ಹತ್ಯೆಯಲ್ಲಿಯೂ ಕೂಡ ಶಾಮೀಲಾಗಿದ್ದರು ಎನ್ನಲಾಗಿದೆ.
#Terrorist Shakoor Parray Al Badr District commander and another #terrorist Suhail Bhat who #abducted and #killed Khanmoh’s Panch #neutralised in today’s #encounter: IGP Kashmir @JmuKmrPolice https://t.co/8VEBBtdDOr
— Kashmir Zone Police (@KashmirPolice) August 28, 2020