ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ದಿನಗಣನೆ ಆಗುತ್ತಿದ್ದಂತೆ ಅರುಣಾಚಲ ಪ್ರದೇಶದಲ್ಲಿ ಬಿಜೆಪಿಯ 18 ಮಂದಿ ಹಿರಿಯ ನಾಯಕರು ಎನ್‌ಪಿಪಿ ಸೇರ್ಪಡೆಗೊಂಡಿದ್ದಾರೆ. ಇದರಿಂದ ಆಡಳಿತಾತ್ಮಕ ಬಿಜೆಪಿಗೆ ಭಾರಿ ಹಿನ್ನಡೆ ಉಂಟಾಗಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಜರ್ಪುಮ್ ಗಂಬಿನ್, ಗೃಹ ಸಚಿವ ಕುಮಾರ್ ವಾಯ್ ಮತ್ತು ಪ್ರವಾಸೋದ್ಯಮ ಸಚಿವ ಜಾರ್ಕರ್ ಗಾಮ್ಲಿನ್ ಮತ್ತು ಇತರೆ ಆರು ಜನರಿಗೆ ಲೋಕಸಭಾ ಚುನಾವಣಾ ಟಿಕೆಟ್ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ 18 ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿ ಕಾನ್ರಾಡ್ ಸಂಗ್ಮಾ ಅವರ ರಾಷ್ಟ್ರೀಯ ಪೀಪಲ್ಸ್ ಪಕ್ಷ(NPP)ಕ್ಕೆ ಸೇರ್ಪಡೆಯಾಗಿದ್ದಾರೆ.
ಅಸ್ಸಾಂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಗೃಹ ಸಚಿವ ಕುಮಾರ್ ವಾಯ್, ಪ್ರವಾಸೋದ್ಯಮ ಸಚಿವ ಜರ್ಕರ್ ಗಮ್ಲಿನ್ ಸೇರಿದಂತೆ, ಶಾಸಕರಾಗಿದ್ದ ಥಂಗ್‌ವಾಂಗ್ ವಂಘಮ್, ತಾಪುಕ್ ತಾಕು, ಪನಿ ತರಾಮ್, ಪಂಗ್ಕಾ ಬಾಗೆ, ವಾಂಗ್ಲಿಂಗ್ ಲೊವಂಡೊಂಗ್ ಮತ್ತು ಕಾರ್ದೊ ನ್ಯಿಗ್ಯೊರ್ ಮತ್ತು ಮಾಜಿ ಸಚಿವ ಸೆರಿಂಗ್ ಜರ್ಮಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.
ಒಟ್ಟಾರೆ 60 ವಿಧಾನಸಭೆ ಕ್ಷೇತ್ರಗಳಲ್ಲಿ ಕನಿಷ್ಟ 30 – 40 ಸೀಟುಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಎಲ್ಲ ಸೀಟುಗಳನ್ನು ಗೆಲ್ಲುವ ಮೂಲಕ ನಾವೇ ಸರ್ಕಾರವನ್ನು ರಚಿಸುತ್ತೇವೆ ಎಂದು ಎನ್‌ಪಿಪಿ ನಾಯಕ ಥಾಮಸ್ ಸಂಗ್ಮಾ ತಿಳಿಸಿದ್ದಾರೆ.