ರಫೇಲ್ ಡೀಲ್ ತೀರ್ಪಿನ ಮರುಪರಿಶೀಲನೆಗೆ ವಿಶೇಷ ದಾಖಲೆಗಳ ಪರಿಗಣನೆಗೆ ಸುಪ್ರೀಂ ಅಸ್ತು; ಕೇಂದ್ರಕ್ಕೆ ಹಿನ್ನೆಡೆ

ರಫೇಲ್​ ಡೀಲ್​ ಗೆ ಸಂಬಂಧಿಸಿದಂತೆ ಸೋರಿಕೆಯಾಗಿರುವ ದಾಖಲೆಗಳನ್ನು ಸಾಕ್ಷಿಯಾಗಿ ಪರಿಗಣಿಸದಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯನ್ನು ಬುಧವಾರ ಸುಪ್ರೀಂಕೋರ್ಟ್ ವಜಾಗೊಳಿಸಿದೆ.

Last Updated : Apr 10, 2019, 12:26 PM IST
ರಫೇಲ್ ಡೀಲ್ ತೀರ್ಪಿನ ಮರುಪರಿಶೀಲನೆಗೆ ವಿಶೇಷ ದಾಖಲೆಗಳ ಪರಿಗಣನೆಗೆ ಸುಪ್ರೀಂ ಅಸ್ತು; ಕೇಂದ್ರಕ್ಕೆ ಹಿನ್ನೆಡೆ title=

ನವದೆಹಲಿ: ರಫೇಲ್​ ಡೀಲ್​ ಗೆ ಸಂಬಂಧಿಸಿದಂತೆ ಸೋರಿಕೆಯಾಗಿರುವ ದಾಖಲೆಗಳನ್ನು ಸಾಕ್ಷಿಯಾಗಿ ಪರಿಗಣಿಸದಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯನ್ನು ಬುಧವಾರ ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ತೀವ್ರ ಹಿನ್ನೆಡೆಯಾಗಿದೆ.

ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆ ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮೇಲ್ಮನವಿಗಳ ಬಗೆಗಿನ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಕೆ ಎಂ ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠ, "ಪುನರ್ ಪರಿಶೀಲನಾ ಅರ್ಜಿಯ ಸಮರ್ಥನೆಯನ್ನು ಪ್ರಶ್ನಿಸುವ ಕೇಂದ್ರ ಸರ್ಕಾರದ ಪ್ರಾಥಮಿಕ ಆಕ್ಷೇಪವನ್ನು ನಾವು ನಿರಾಕರಿಸುತ್ತಿದ್ದೇವೆ" ಎಂದು ತಿಳಿಸಿದೆ.

ಅಷ್ಟೇ ಅಲ್ಲದೆ, ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅಕ್ರಮವಾಗಿದೆ ಎಂದು ಸಲ್ಲಿಸಲಾಗಿದ್ದ ಎಲ್ಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿವರವಾದ ವಿಚಾರಣೆಗೆ  ದಿನಾಂಕವನ್ನೂ ನಿಗದಿಪಡಿಸುವುದಾಗಿ ಹೇಳಿದೆ. 

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದ ಅರುಣ್ ಶೌರಿ, ನಾವು ಹಾಜರುಪಡಿಸಿರುವ ದಾಖಲೆಗಳು ಸೇನೆಗೆ ಸಂಬಂಧಿಸಿದ್ದಾದ್ದರಿಂದ ಅವನ್ನು ಪರಿಗಣಿಸಲೇಬೇಕೆಂದು ನಾವು ವಾದ ಮಂಡಿಸಿದ್ದೆವು. ಹಾಗಾಗಿ ಸುಪ್ರೀಂ ಕೋರ್ಟ್​ ಅವನ್ನು ಪರಿಗಣಿಸಲು ಒಪ್ಪಿದೆ ಹಾಗೂ ಸರ್ಕಾರದ ವಾದವನ್ನು ತಿರಸ್ಕರಿಸಿದೆ ಎಂದು  ಹೇಳಿದರು.

ರಫೇಲ್ ಒಪ್ಪಂದದ ಜಂಟಿ ಸಂಸದೀಯ ಸಮಿತಿ ತನಿಖೆಗೆ ನಿರಾಕರಿಸಿ ಎಲ್ಲ ಅರ್ಜಿಗಳನ್ನು ವಜಾಗೊಳಿಸಿದ್ದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರದ ಮಾಜಿ ಸಚಿವರಾದ ಅರುಣ್ ಶೌರಿ ಮತ್ತು ಯಶವಂತ್ ಸಿನ್ಹಾ ಅವರೊಂದಿಗೆ ವಕೀಲ ಪ್ರಶಾಂತ್ ಭೂಷಣ್ ಅವರು ಸೋರಿಕೆ ದಾಖಲೆಗಳೊಂದಿಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಸರ್ಕಾರ ಇದಕ್ಕೆ ಪ್ರಾಥಮಿಕ ಆಕ್ಷೇಪಣೆ ಸಲ್ಲಿಸಿದ್ದು, ರಫೇಲ್ ಬಗೆಗಿನ ತೀರ್ಪಿನ ಮರುಪರಿಶೀಲನೆಗೆ ವಿಶೇಷ ದಾಖಲೆಗಳನ್ನು ಪರಿಗಣಿಸಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿತ್ತು.

Trending News