ಕೊಲ್ಕತ್ತಾ: ಕೊಲ್ಕತ್ತಾದಲ್ಲಿನ ಉಪಾಹಾರ ಗೃಹದ ಮಾಲೀಕರು ತಮ್ಮ ಗ್ರಾಹಕರಿಗೆ ಬಿರಿಯಾನಿಯ ಹಣ ಪಾವತಿಸುವಂತೆ ಕೇಳಿದ್ದಕ್ಕೆ ಗುಂಡು ಹಾರಿಸಿರುವ ಘಟನೆ ಭಾನುವಾರ ಸಂಜೆ ಪಶ್ಚಿಮ ಬಂಗಾಳದ ಉತ್ತರ 24 ಪರಗಾನ ಜಿಲ್ಲೆಯಲ್ಲಿ ನಡೆದಿದೆ.
ಹೋಟೆಲ್ ನಲ್ಲಿ ಬಿರಿಯಾನಿ ತಿಂದ ನಾಲ್ಕು ಜನರ ಬಳಿ ಮಾಲೀಕ 190 ರೂಪಾಯಿಗಳನ್ನು ಕೇಳಿದಕ್ಕೆ ಗ್ರಾಹಕರು ಮತ್ತು ಮಾಲೀಕನ ನಡುವೆ ಜಗಳ ಆರಂಭವಾಗಿದೆ. ಏತನ್ಮಧ್ಯೆ ಓರ್ವ ಗ್ರಾಹಕ ಹೋಟೆಲ್ ಮಾಲೀಕನಿಗೆ ಗುಂಡು ಹಾರಿಸಿದ್ದಾನೆ.
ಮೃತರನ್ನು ಸಂಜಯ್ ಮೊಂಡಲ್ ಎಂದು ಗುರುತಿಸಲಾಗಿದೆ. ಆರೋಪಿಗಳಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳನ್ನು ಹುಡುಕುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗ್ರಾಹಕರಿಂದ ಹಲ್ಲೆಗೊಳಗಾದ ಮಾಲೀಕ ಸಂಜಯ್ ಮೊಂಡಲ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಸಂಜಯ್ ಮೊಂಡಲ್ ಮೃತಪಟ್ಟಿರುವುದಾಗಿ ಘೋಷಿಸಿದರು. ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದ್ದು, ಆರೋಪಿ ಮೊಹಮ್ಮದ್ ಫಿರೋಜ್ನನ್ನು ನಾವು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿರಿಯಾನಿಯ ಹಣ ಪಾವತಿಸುವಂತೆ ಕೇಳಿದ್ದಕ್ಕೆ ಈ ಘಟನೆ ನಡೆದಿದೆ ಎಂದು ಮೇಲ್ನೋಟಕ್ಕೆ ಭಾಸವಾಗುತ್ತಿದೆ. ಆದರೆ ತನಿಖೆ ನಂತರ ಘಟನೆಯ ಬಗ್ಗೆ ಮಾಹಿತಿ ಬೆಳಕಿಗೆ ಬರಲಿದೆ ಎಂದು ಅವರು ಹೇಳಿದರು.
ರಾಜಾ, ಫಿರೋಜ್, ಮೊಗ್ರಿ ಮತ್ತು ಸಲ್ಮಾನ್ ಎಂಬ ನಾಲ್ವರು ಗೂಂಡಾಗಳು. ಫಿರೋಜ್ ನನ್ನ ಸಹೋದರನನ್ನು ಗುಂಡಿಕ್ಕಿ ಕೊಂದಿದ್ದಾನೆ. ನಮ್ಮೆಲ್ಲರಿಗೂ ಗಾಬರಿಯಾಗಿದೆ. ಮುಂದೆ ನಮ್ಮ ವ್ಯವಹಾರವನ್ನು ಶಾಂತಿಯುತವಾಗಿ ಹೇಗೆ ನಡೆಸುವುದೋ ಎಂಬುದು ತಿಳಿಯುತ್ತಿಲ್ಲ ಎಂದು ಮಾಲೀಕ ಸಂಜಯ್ ಮೊಂಡಲ್ ಅವರ ಸಹೋದರ ತಿಳಿಸಿದ್ದಾರೆ.