ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಮಮಂದಿರ ನಿರ್ಮಾಣಕ್ಕೆ ಉಂಟಾಗಿರುವ ತೊಡಕುಗಳನ್ನು ನಾವು ಮಾತುಕತೆಯಿಂದ ಬಗೆಹರಿಸಿಕೊಳ್ಳಬಹುದೆಂದು ತಿಳಿಸಿದ್ದಾರೆ.
ಝೀ ನ್ಯೂಸ್ ನೊಂದಿಗಿನ ವಿಶೇಷ ಮಾತುಕತೆಯಲ್ಲಿ ಭಾಗಿಯಾಗಿದ್ದ ಯೋಗಿ ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪಿಸುವ ವಿಷಯವಾಗಿ ಮಾತನಾಡುತ್ತಾ ರಾಮಮಂದಿರ ನಿರ್ಮಾಣಕ್ಕೆ ಉಂಟಾಗಿರುವ ತೊಡಕುಗಳನ್ನು ನಾವು ಮಾತುಕತೆಯಿಂದ ಬಗೆಹರಿಸಿಕೊಳ್ಳಬಹುದೆಂದು ಹೇಳಿದ್ದಾರೆ.
ರಾಮ ಮಂದಿರ ಸ್ಥಾಪಿಸುವ ವಿಷಯಕ್ಕೆ ಮತ್ತೆ ಜೀವ ಬಂದಿದ್ದು, ಈ ಸಂಧರ್ಭದಲ್ಲಿ ರವಿಶಂಕರ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಭೇಟಿ ಮಹತ್ವ ಪಡೆದಿದೆ. ಈ ಬಗ್ಗೆ ಯೋಗಿ ಮಾತನಾಡುತ್ತಾ ಮಾತುಕತೆಯ ಮೂಲಕ ವಿಷಯವನ್ನು ಪರಿಹರಿಸಿಕೊಳ್ಳಲು ಸರ್ಕಾರ ಆದ್ಯತೆ ನೀಡುತ್ತದೆ. ಒಂದುವೇಳೆ ಮಾತುಕತೆಯಿಂದ ಇದಕ್ಕೆ ಪರಿಹಾರ ದೊರಕದಿದ್ದರೆ ಈ ಸಮಸ್ಯೆಯನ್ನು ನ್ಯಾಯಾಂಗವು ಪರಿಹರಿಸುತ್ತದೆ ಎಂದರಲ್ಲದೆ, ಈ ವಿಷಯವಾಗಿ ಎರಡು ಪಕ್ಷಗಳ ಕಡೆಯಿಂದ ಬರುವ ಸಲಹೆಗಳನ್ನು ಸರ್ಕಾರವು ಆಲಿಸಲು ಸಿದ್ದವಿದೆ ಎಂದು ವಿವರಿಸಿದರು.
ಬುಧವಾರ ಲಕ್ನೋದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಭೇಟಿ ಮಾಡಿದ ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕ ರವಿಶಂಕರ್ ರವರು ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಮಾತುಕತೆಯೊಂದೇ ಪರಿಹಾರ ಮಾರ್ಗ. ಒಂದುವೇಳೆ ಅದು ಸಾಧ್ಯವಾಗದಿದ್ದರೆ ನ್ಯಾಯಾಂಗದ ಮೂಲಕ ಬಗೆಹರಿಸಬಹುದು. ಆದರೂ ಕೂಡ ನಾವು ಸಮಾಲೋಚನೆಯ ಮೂಲಕವೇ ಪರಿಹಾರ ಕಂಡುಕೊಂಡರೆ ಚೆನ್ನಾಗಿರುತ್ತದೆ ಎಂದು ರವಿಶಂಕರ್ ಯವರು ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.
ಅಲ್ಲದೆ ಯೋಗಿ ಮುಂದುವರೆದು ಹೇಳುತ್ತಾ ಮಾತುಕತೆಯಿಂದ ಈ ವಿಷಯ ಇತ್ಯರ್ಥಗೊಳ್ಳದಿದ್ದಲ್ಲಿ ಡಿಸೆಂಬರ್ 5 ರಿಂದ ಸುಪ್ರಿಂಕೋರ್ಟ್ ನಲ್ಲಿ ವಿಚಾರಣೆ ಇದೆ. ಆಗ ಉಭಯ ಪಕ್ಷಗಳಿಗೆ ಸಮರ್ಪಕವಾದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ನೀಡಲಿದೆ ಎಂಬ ವಿಶ್ವಾಸವಿದೆ ಎಂದರು. ಈ ಕುರಿತಾದ ವಿಷಯವನ್ನು ಗುಜರಾತ್ ಚುನಾವಣೆ ಹಿನ್ನಲೆಯಲ್ಲಿ ಚರ್ಚಿಸುವ ಅಗತ್ಯವಿಲ್ಲ ಎಂದ ಅವರು ಈ ಮಾತುಕತೆಯ ವಿಷಯವಾಗಿ ಶ್ರೀಗಳನ್ನು ಯಾರೂ ಆಹ್ವಾನಿಸಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಶ್ರೀ ರವಿಶಂಕರ್ ನವೆಂಬರ್ 16 ರಂದು ರಸ್ತೆ ಮೂಲಕ ಅಯೋಧ್ಯೆಗೆ ಭೇಟಿ ಮಾಡಲಿದ್ದಾರೆ. ಆ ಸಮಯದಲ್ಲಿ ರಾಮ ಮಂದಿರ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಪಕ್ಷಗಳನ್ನು ಭೇಟಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.