ಭಿವಾಂಡಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಹಡಗು ಮುಳುಗಿದಾಗ ಅದರ ಕ್ಯಾಪ್ಟನ್ ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸುತ್ತಾನೆ. ಆದರೆ ಗಾಂಧಿ ಕಾಂಗ್ರೆಸ್ ಹಡಗು ಮುಳುಗಿಗುತ್ತಿರುವುದನ್ನು ನೋಡಿಯೂ ಹೊರನಡೆದ ನಾಯಕ ಎಂದು ಟೀಕಿಸಿದ್ದಾರೆ.
ಭಿವಾಡಿ ಪಶ್ಚಿಮದಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಓವೈಸಿ, "ಒಂದು ಹಡಗು ಸಮುದ್ರದ ಮಧ್ಯದಲ್ಲಿ ಮುಳುಗಿದಾಗ, ಕ್ಯಾಪ್ಟನ್ ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸುತ್ತಾನೆ. ಆದರೆ ರಾಹುಲ್ ಗಾಂಧಿ ಕಾಂಗ್ರೆಸ್ ಮುಳುಗುತ್ತಿರುವುದನ್ನು ನೋಡಿದ ನಂತರ ಸ್ವತಃ ಹೊರನಡೆದ ಕ್ಯಾಪ್ಟನ್. ದೇಶದಲ್ಲಿ ಮುಸ್ಲಿಮರು ಜೀವಂತವಾಗಿರಲು 70 ವರ್ಷಗಳಿಂದ ಕಾಂಗ್ರೆಸ್ ನಮ್ಮ ಮೇಲೆ ಕರುಣೆ ತೋರಿಸಿದ್ದು ಕಾರಣವಲ್ಲ, ಬದಲಿಗೆ ನಾವು ಜೀವಂತವಾಗಿದ್ದೇವೆ ಎಂದರೆ ಅದಕ್ಕೆ ಸಂವಿಧಾನ ಮತ್ತು ದೇವರ ಅನುಗ್ರಹ ಕಾರಣ" ಎಂದು ಓವೈಸಿ ಹೇಳಿದ್ದಾರೆ.
ತ್ರಿವಳಿ' ತಲಾಖ್ ಕಾನೂನಿನ ಬಗ್ಗೆ ಪ್ರಸ್ತಾಪಿಸಿದ ಓವೈಸಿ, "ಟ್ರಿಪಲ್ ತಲಾಖ್ ಕಾನೂನು ಎಲ್ಲಾ ಮುಸ್ಲಿಂ ಮಹಿಳೆಯರ ವಿರುದ್ಧವಾಗಿದೆ. ಬಿಜೆಪಿ ದೀರ್ಘಕಾಲೀನ ಸರ್ಕಾರವಾಗಿದೆ, ಹಾಗಾಗಿ ಈ ಕತ್ತಲೆ ದೀರ್ಘಕಾಲ ಉಳಿಯುತ್ತದೆ" ಎಂದು ಹೇಳುವ ಮೂಲಕ ಎಐಐಎಂ ನಾಯಕ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಮರಾಠರಿಗೆ ನೀಡಿದಂತೆಯೇ ಮುಸ್ಲಿಮರಿಗೂ ಸರ್ಕಾರ ಮೀಸಲಾತಿ ನೀಡಬೇಕು ಎಂದು ಓವೈಸಿ ಒತ್ತಾಯಿಸಿದ್ದಾರೆ.