ಕಸ್ಸಾಮ್ ರಾಕೆಟ್‌ಗಳು: ಅಭಿವೃದ್ಧಿ, ಸರಳತೆ ಹಾಗೂ ಇಸ್ರೇಲ್ - ಹಮಾಸ್ ಯುದ್ಧದ ಮೇಲಿನ ಪರಿಣಾಮ

Qassam Rockets: ಹಮಾಸ್ ಉಗ್ರರು ಇಸ್ರೇಲ್ ಮೇಲೆ ಪ್ರಯೋಗಿಸಿದ ಕಸ್ಸಾಮ್ ರಾಕೆಟ್‌ಗಳು ಅವುಗಳನ್ನು ಸರಳವಾಗಿ ನಿರ್ಮಿಸಲು ಹಾಗೂ ಉಡಾವಣೆಗೊಳಿಸಲು ಸಾಧ್ಯವಾಗುವುದರಿಂದ ಮತ್ತು ಅವುಗಳನ್ನು ಪ್ರತಿ ರಾಕೆಟ್‌ಗೆ ಕೇವಲ ಮೂರು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲು ಸಾಧ್ಯವಾಗುವುದರಿಂದ, ಪಶ್ಚಿಮ ಏಷ್ಯಾದ ಉಗ್ರಗಾಮಿ ಸಂಘಟನೆಗಳ ನಡುವೆ ಜನಪ್ರಿಯತೆ ಗಳಿಸುತ್ತಿವೆ. ಆದರೆ, ಅವುಗಳು ಅಷ್ಟೊಂದು ನಿಖರತೆಯನ್ನು ಹೊಂದಿರುವ ರಾಕೆಟ್‌ಗಳಲ್ಲ ಎನ್ನುವುದು ಪ್ರಸ್ತುತ ಇಸ್ರೇಲ್ - ಹಮಾಸ್ ಕದನದಲ್ಲಿ ಸಾಬೀತಾಗುತ್ತಿದೆ.

Written by - Girish Linganna | Last Updated : Oct 15, 2023, 10:10 AM IST
  • ಹಮಾಸ್ ಒಂದು ಪ್ಯಾಲೆಸ್ತೀನಿನ ಉಗ್ರಗಾಮಿ ಸಂಘಟನೆ
  • ಕಳೆದ ಬಹಳಷ್ಟು ವರ್ಷಗಳಿಂದ ಇಸ್ರೇಲ್ - ಪ್ಯಾಲೆಸ್ತೀನ್ ವಿವಾದದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾ ಬಂದಿದೆ
  • ಕಸ್ಸಾಮ್ ರಾಕೆಟ್‌ಗಳು ಅತ್ಯಂತ ಜನಪ್ರಿಯವಾಗಿವೆ.
ಕಸ್ಸಾಮ್ ರಾಕೆಟ್‌ಗಳು: ಅಭಿವೃದ್ಧಿ, ಸರಳತೆ ಹಾಗೂ ಇಸ್ರೇಲ್ - ಹಮಾಸ್ ಯುದ್ಧದ ಮೇಲಿನ ಪರಿಣಾಮ title=

Isreal-Hamas: ಹಮಾಸ್ ಒಂದು ಪ್ಯಾಲೆಸ್ತೀನಿನ ಉಗ್ರಗಾಮಿ ಸಂಘಟನೆಯಾಗಿದ್ದು, ಕಳೆದ ಬಹಳಷ್ಟು ವರ್ಷಗಳಿಂದ ಇಸ್ರೇಲ್ - ಪ್ಯಾಲೆಸ್ತೀನ್ ವಿವಾದದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾ ಬಂದಿದೆ. ಇಸ್ರೇಲ್ ವಿರುದ್ಧದ ತಮ್ಮ ಕದನದಲ್ಲಿ ಅವರು ಸಾಕಷ್ಟು ಮನೆಗಳಲ್ಲಿ ನಿರ್ಮಿಸುವಂತಹ ಆಯುಧಗಳನ್ನು ಪ್ರಯೋಗಿಸುತ್ತಾ ಬಂದಿದ್ದು, ಅವುಗಳಲ್ಲಿ ಕಸ್ಸಾಮ್ ರಾಕೆಟ್‌ಗಳು ಅತ್ಯಂತ ಜನಪ್ರಿಯವಾಗಿವೆ.

ಹಮಾಸ್ ಉಗ್ರರು ಈ ಕಸ್ಸಾಮ್ ರಾಕೆಟ್‌ಗಳನ್ನು 2000ನೇ ದಶಕದ ಆರಂಭದಲ್ಲಿ ಪರಿಚಯಿಸಿದರು. ಈ ರಾಕೆಟ್‌ಗೆ ಶೇಖ್ ಇಜ್ಜ್ ಅದ್-ದಿನ್ ಅಲ್-ಕಸ್ಸಾಮ್ ಎಂಬ ಪ್ಯಾಲೆಸ್ತೀನ್ ರಾಷ್ಟ್ರೀಯವಾದಿ ಮತ್ತು ಧಾರ್ಮಿಕ ಮುಖಂಡನ ಹೆಸರನ್ನು ಇಡಲಾಗಿತ್ತು. ಆರಂಭದಲ್ಲಿ, ಈ ರಾಕೆಟ್‌ಗಳು ಅತ್ಯಂತ ಸರಳವಾದ ಮತ್ತು ಕನಿಷ್ಠ ವಿನ್ಯಾಸ ಹೊಂದಿದ ರಾಕೆಟ್‌ಗಳಾಗಿದ್ದವು. ಅವುಗಳನ್ನು ಪ್ರತಿಯೊಂದು ರಾಕೆಟ್‌ಗೆ ಅಂದಾಜು 800 ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿತ್ತು.

ಆದರೆ ಸಮಯ ಕಳೆಯುತ್ತಿದ್ದಂತೆ, ಈ ರಾಕೆಟ್‌ಗಳನ್ನು ವಿನ್ಯಾಸ ಮತ್ತು ಸಾಮರ್ಥ್ಯದ ವಿಚಾರದಲ್ಲಿ ಅಭಿವೃದ್ಧಿ ಪಡಿಸಲಾಯಿತು. ಪ್ರತಿಯೊಂದು ಹೊಸ ಆವೃತ್ತಿ ಬಂದಾಗಲೂ, ಹಮಾಸ್ ರಾಕೆಟ್‌ನ ವ್ಯಾಪ್ತಿಯನ್ನು ಹೆಚ್ಚಿಸಿತು. ತಜ್ಞರ ಅಂದಾಜಿನ ಪ್ರಕಾರ, ಈಗ ಪ್ರತಿಯೊಂದು ಕಸ್ಸಾಮ್ ರಾಕೆಟ್ ಬೆಲೆ 3,600 ಡಾಲರ್ ಅಥವಾ ಮೂರು ಲಕ್ಷ ರೂಪಾಯಿ ಆಗಿದೆ.

ಕಸ್ಸಾಮ್ ರಾಕೆಟ್‌ಗಳನ್ನು ಉದ್ದೇಶಪೂರ್ವಕವಾಗಿ ನಿರ್ದೇಶನಾ ವ್ಯವಸ್ಥೆ ರಹಿತವಾಗಿ ವಿನ್ಯಾಸಗೊಳಿಸಲಾಗಿದೆ. ಅವುಗಳನ್ನು ಯಾವತ್ತೂ ನಿಖರವಾದ ದಾಳಿಯನ್ನು ನಡೆಸುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲಾಗಿಲ್ಲ. ಹಮಾಸ್ ತನ್ನ ಕಸ್ಸಾಮ್ ರಾಕೆಟ್‌ಗಳನ್ನು ವಿವೇಚನಾರಹಿತವಾಗಿ ಇಸ್ರೇಲ್ ಮೇಲೆ ದಾಳಿ ನಡೆಸಲು ಬಳಸಿ, ಆ ಮೂಲಕ ಇಸ್ರೇಲ್‌ಗೆ ಅತ್ಯಧಿಕ ವಿನಾಶವನ್ನು ತಂದೊಡ್ಡುವ ಉದ್ದೇಶ ಹೊಂದಿದೆ. ಈ ರಾಕೆಟ್‌ಗಳು ನಾಗರಿಕರಿಗೆ ಅಪ್ಪಳಿಸುತ್ತವೆಯೋ, ಅಥವಾ ಸೇನಾ ನೆಲೆಗಳ ಮೇಲೆ ದಾಳಿ ನಡೆಸುತ್ತವೆಯೋ ಎನ್ನುವುದು ಹಮಾಸ್‌ಗೆ ತಲೆ ಕೆಡಿಸಿಕೊಳ್ಳುವ ವಿಚಾರವೇ ಆಗಿಲ್ಲ.

ಇದನ್ನೂ ಓದಿ-ಮುಂದಿನ 2 ದಿನ ಈ ಭಾಗಗಳಲ್ಲಿ ಕುಂಭದ್ರೋಣ ಮಳೆ! ಗುಡುಗು-ಮಿಂಚು ಜೊತೆ ಸುಳಿಗಾಳಿ ಬೀಸುವ ಮುನ್ಸೂಚನೆ

ಕಸ್ಸಾಮ್ ರಾಕೆಟ್‌ನ ಘಟಕಗಳು
1. ಕಸ್ಸಾಮ್ ರಾಕೆಟ್ ನಾಲ್ಕು ಪ್ರಾಥಮಿಕ ಘಟಕಗಳನ್ನು ಒಳಗೊಂಡಿರುತ್ತದೆ. ಮೊದಲನೆಯದು ಲಾಂಚ್ ಟ್ಯೂಬ್. ಇದು ಉಕ್ಕು ಅಥವಾ ಲೋಹದ ಕೊಳವೆಯಾಗಿರುತ್ತದೆ. ಈ ಕೊಳವೆಗಳು ಸಾಮಾನ್ಯವಾಗಿ ಮೂರರಿಂದ ನಾಲ್ಕು ಇಂಚು ಉದ್ದವಾಗಿದ್ದು, ಲಾಂಚರ್ ಆಗಿ ಬಳಸುವ ಸಲುವಾಗಿ ಬಹುಪಾಲು ನೆಲದಲ್ಲಿ ಹೂಳಲಾಗುತ್ತದೆ.

2. ರಾಕೆಟ್‌ನ ಅತ್ಯಂತ ಮೇಲಿನ ವಿಭಾಗದಲ್ಲಿ, ಒಂದು ಸರಳ ಸಿಡಿತಲೆ ಇರುತ್ತದೆ. ಇದು ವಿವಿಧ ರೀತಿಯ ಸರಳವಾಗಿ ತಯಾರಿಸಿದ ಸ್ಫೋಟಕಗಳನ್ನು ಹೊಂದಿರುತ್ತದೆ. ಸಿಡಿತಲೆಯ ಗಾತ್ರ ಮತ್ತು ಸ್ಫೋಟಕಗಳು ಬದಲಾಗಬಹುದಾದರೂ, ಇದನ್ನು ಸಾಮಾನ್ಯವಾಗಿ ಸಣ್ಣದಾಗಿರುವಂತೆ, ಸಣ್ಣ ವ್ಯಾಪ್ತಿಯ ದಾಳಿಗಳಿಗೆ ಅನುಕೂಲವಾಗುವಂತೆ ನಿರ್ಮಿಸಲಾಗುತ್ತದೆ.

3. ಇನ್ನು ರಾಕೆಟ್‌ನ ತಳಭಾಗಕ್ಕೆ ಸನಿಹವಾಗಿ ಅದನ್ನು ಸ್ಥಿರವಾಗಿಸುವ ಸಲುವಾಗಿ ರೆಕ್ಕೆಗಳನ್ನು ಅಳವಡಿಸಲಾಗುತ್ತದೆ. ಇವುಗಳು ರಾಕೆಟ್‌ನ ಹಾರಾಟದ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತವೆ. ಈ ರೆಕ್ಕೆಗಳನ್ನು ಸರಳವಾದ ಲೋಹದ ಶೀಟ್ ಅಥವಾ ಲೋಹದ ರಾಡ್‌ಗಳಿಂದ ನಿರ್ಮಿಸಲಾಗುತ್ತದೆ.

4. ಕೊನೆಯದಾದ, ಮಹತ್ತರವಾದ ಘಟಕವೆಂದರೆ, ಈ ರಾಕೆಟ್‌ನಲ್ಲಿರುವ ಇಂಧನ. ಕಸ್ಸಾಮ್ ರಾಕೆಟ್‌ನ ಪ್ರೊಪಲ್ಷನ್ ವ್ಯವಸ್ಥೆ ಘನ ಇಂಧನ ಆಧಾರಿತವಾಗಿರುತ್ತದೆ. ಹಮಾಸ್ ತನ್ನ ರಾಕೆಟ್‌ನ ವ್ಯಾಪ್ತಿ ಮತ್ತು ನಿಖರತೆಯನ್ನು ಹೆಚ್ಚಿಸಲು ಪ್ರಯತ್ನ ನಡೆಸಿರುವುದರಿಂದ, ಕಾಲ ಕ್ರಮೇಣ ಈ ಇಂಧನದ ಸಂಯೋಜನೆಯೂ ಅಭಿವೃದ್ಧಿ ಹೊಂದುತ್ತಾ ಬಂದಿದೆ.

ಸರಳವಾದ ಉಡಾವಣಾ ಪ್ರಕ್ರಿಯೆ: ಪಶ್ಚಿಮ ಏಷ್ಯಾದ ಉಗ್ರಗಾಮಿಗಳ ನೆಚ್ಚಿನ ಆಯ್ಕೆ
ಕಸ್ಸಾಮ್ ರಾಕೆಟ್ ಅನ್ನು ಹಮಾಸ್ ಸಂಘಟನೆ ಅಭಿವೃದ್ಧಿ ಪಡಿಸಿದ್ದರೂ, ಇದನ್ನು ಉಡಾವಣೆಗೊಳಿಸುವಲ್ಲಿನ ಸರಳತೆಯ ಕಾರಣದಿಂದ ಇದು ಈ ಪ್ರದೇಶದ ಹಲವು ಉಗ್ರಗಾಮಿ ಸಂಘಟನೆಗಳ ನೆಚ್ಚಿನ ಆಯ್ಕೆಯ ಆಯುಧವಾಗಿದೆ.

ಸಾಮಾನ್ಯವಾಗಿ, ಹಮಾಸ್ ಉಗ್ರರು ಈ ರಾಕೆಟ್ ಉಡಾವಣೆಗೆ ಸಿದ್ಧಗೊಳಿಸಲು ಅವಶ್ಯಕವಾದ ಕ್ರಮಗಳನ್ನು ಕೈಗೊಳ್ಳುತ್ತಾರೆ. ಇಸ್ರೇಲ್ ಭದ್ರತಾ ಪಡೆಗಳ ಗಮನಕ್ಕೆ ಬೀಳದ ರೀತಿಯಲ್ಲಿ ಈ ರಾಕೆಟ್‌ಗಳು ಮತ್ತು ಅವುಗಳ ಲಾಂಚ್ ಟ್ಯೂಬ್‌ಗಳನ್ನು ನೆಲದಾಳದಲ್ಲಿ ಅಥವಾ ಜನರಹಿತ ಪ್ರದೇಶಗಳಲ್ಲಿ ಜಾಗರೂಕತೆಯಿಂದ ಸಂಗ್ರಹಿಸಿಡಲಾಗುತ್ತದೆ.

ಉಡಾವಣೆಗೆ ಸರಿಯಾದ ಸಮಯ ಬಂದಾಗ, ರಾಕೆಟ್‌ನ ಘನ ಇಂಧನವನ್ನು ದಹಿಸಲಾಗುತ್ತದೆ. ಈ ಇಂಧನ ಅತ್ಯಂತ ವೇಗವಾಗಿ ದಹಿಸುತ್ತಾ, ಹೆಚ್ಚಿನ ಒತ್ತಡದ ಅನಿಲವನ್ನು ಉತ್ಪಾದಿಸಿ, ರಾಕೆಟ್ ಮೇಲ್ಮುಖವಾಗಿ ಚಲಿಸುವಂತೆ ಮಾಡುತ್ತದೆ.

ಈ ರಾಕೆಟ್‌ನಲ್ಲಿ ಯಾವುದೇ ನಿರ್ದೇಶನ ವ್ಯವಸ್ಥೆಗಳನ್ನು ಅಳವಡಿಸಿರದ ಕಾರಣದಿಂದ, ಇವುಗಳಿಗೆ ಯಾವುದೇ ನಿಖರ ಗುರಿಗಳಿರುವುದಿಲ್ಲ. ಅವುಗಳನ್ನು ಸಾಮಾನ್ಯವಾಗಿ ಒಂದು ಗುರಿಯ ದಿಕ್ಕಿನಲ್ಲಿ, ಅಂದರೆ ಇಸ್ರೇಲ್ ದಿಕ್ಕಿನಲ್ಲಿ ಇಟ್ಟು, ಬಳಿಕ ಉಡಾಯಿಸಲಾಗುತ್ತದೆ. ರಾಕೆಟ್‌ಗಳಲ್ಲಿರುವ ಸ್ಥಿರತೆ ಒದಗಿಸುವ ರೆಕ್ಕೆಗಳು ಅವುಗಳ ಹಾರಾಟದ ಪಥವನ್ನು ನಿಯಂತ್ರಿಸುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಿ, ರಾಕೆಟ್‌ಗಳು ತಮ್ಮ ಉದ್ದೇಶಿತ ಗುರಿಯೆಡೆಗೆ ಸಾಧ್ಯವಾದಷ್ಟೂ ನೇರವಾದ ಪಥದಲ್ಲಿ ಚಲಿಸುವಂತೆ ಮಾಡುತ್ತವೆ.

ರಾಕೆಟ್ ಸಿಡಿತಲೆಯಲ್ಲಿರುವ ಸ್ಫೋಟಕಗಳನ್ನು ಅಪ್ಪಳಿಸಿದ ತಕ್ಷಣವೇ ಸ್ಫೋಟಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ. ಅವುಗಳು ಬಿದ್ದ ಸ್ಥಳದಲ್ಲಿ ಅತ್ಯಧಿಕ ಹಾನಿಯನ್ನು ಉಂಟುಮಾಡುತ್ತವೆ. ಐತಿಹಾಸಿಕ, ಕಸ್ಸಾಮ್ ರಾಕೆಟ್‌ಗಳು ಕನಿಷ್ಠ ನಿಖರತೆ ಹೊಂದಿದ್ದರಿಂದ ಅವುಗಳನ್ನು ನಿಖರ ಆಯುಧಗಳು ಎನ್ನುವುದಕ್ಕಿಂತ, ಭಯಪಡಿಸಬಲ್ಲ ಮಾನಸಿಕ ಆಯುಧಗಳು ಎನ್ನಬಹುದಾಗಿತ್ತು.

ಇದನ್ನೂ ಓದಿ-ಮುಂದುವರಿದ ಇಸ್ರೇಲ್ - ಹಮಾಸ್ ಯುದ್ಧ: ಏಳನೇ ದಿನದ ಬೆಳವಣಿಗೆಗಳು

ಕಸ್ಸಾಮ್ ರಾಕೆಟ್: ಕಾಲದೊಂದಿಗೆ ಅಭಿವೃದ್ಧಿ

ಹಮಾಸ್ ನಿರಂತರವಾಗಿ ತನ್ನ ಕಸ್ಸಾಮ್ ರಾಕೆಟ್‌ನ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನ ನಡೆಸುತ್ತಾ ಬಂದಿದೆ. ಕಳೆದ ಹಲವು ವರ್ಷಗಳಲ್ಲಿ, ಹಮಾಸ್ ಈ ನಿಟ್ಟಿನಲ್ಲಿ ಹಲವಾರು ಅಭಿವೃದ್ಧಿಗಳನ್ನು ಸಾಧಿಸಿದೆ. ಆರಂಭಿಕ ಹಂತದಲ್ಲಿ, ಕಸ್ಸಾಮ್ ರಾಕೆಟ್‌ಗಳು ಅತ್ಯಂತ ಕಡಿಮೆ ವ್ಯಾಪ್ತಿ ಹೊಂದಿದ್ದರಿಂದ ಅವುಗಳ ಪರಿಣಾಮವೂ ಕಡಿಮೆಯಾಗಿತ್ತು. ಆದರೆ ಹಮಾಸ್ ಕಾಲಕ್ರಮೇಣ ಅದರ ವ್ಯಾಪ್ತಿಯನ್ನು ಹೆಚ್ಚಿಸಿ, ಇಸ್ರೇಲ್ ಒಳಗೆ ವಿವಿಧ ಪ್ರದೇಶಗಳ ಮೆಲೆ ದಾಳಿ ನಡೆಸುವ ಮಟ್ಟಿಗೆ ಅದನ್ನು ಅಭಿವೃದ್ಧಿ ಪಡಿಸಿತು. ಅದರೊಡನೆ ಹಮಾಸ್ ಕಸ್ಸಾಮ್ ಸಿಡಿತಲೆಗಳ ಸ್ಫೋಟಕ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿ, ರಾಕೆಟ್‌ಗಳನ್ನು ಹೆಚ್ಚು ವಿನಾಶಕಾರಿಯಾಗಿ ರೂಪಿಸಿತು.

ಹಮಾಸ್ ತನ್ನ ಕಸ್ಸಾಮ್ ರಾಕೆಟ್‌ನ ವಿವಿಧ ಆವೃತ್ತಿಗಳನ್ನು ಅಭಿವೃದ್ಧಿ ಪಡಿಸಿದ್ದು, ಅವುಗಳಲ್ಲಿ ಕಸ್ಸಾಮ್-2, ಕಸ್ಸಾಮ್-3, ಹಾಗೂ ಕಸ್ಸಾಮ್-4 ರಾಕೆಟ್‌ಗಳು ಸೇರಿವೆ. ಈ ಎಲ್ಲ ರಾಕೆಟ್‌ಗಳು ಒಂದೇ ಮೂಲಭೂತ ವೈಶಿಷ್ಟ್ಯಗಳನ್ನು ಹೊಂದಿದ್ದು, ಪ್ರಮುಖ ಬದಲಾವಣೆಗಳನ್ನು ರಾಕೆಟ್‌ನ ಉದ್ದದಲ್ಲಿ ತರಲಾಗಿದೆ. ಆ ಮೂಲಕ ಹೆಚ್ಚು ಘನ ಇಂಧ‌ನ ಅಳವಡಿಸಿ, ರಾಕೆಟ್ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ.

ಕಸ್ಸಾಮ್ ರೀತಿಯ ಗೃಹ ನಿರ್ಮಾಣದಂತಹ ಕಚ್ಚಾ ರಾಕೆಟ್‌ಗಳ ಬಳಕೆ ಇಸ್ರೇಲ್ - ಪ್ಯಾಲೆಸ್ತೀನ್ ಕದನದಲ್ಲಿ ಮಹತ್ವದ ಸವಾಲುಗಳನ್ನು ಒಡ್ಡಿದೆ. ಅವುಗಳ ನಿಖರತೆಯಿಲ್ಲದೆ ಚಲಿಸುವಿಕೆ ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ಎರಡೂ ಬದಿಗಳ ನಾಗರಿಕರಿಗೂ ಅಪಾಯಕಾರಿಯಾಗಿ ಪರಿಣಮಿಸಿದೆ.

ಕೆಲವು ವಿಶಿಷ್ಟ ಅಂಶಗಳು
ಕಸ್ಸಾಮ್ ರಾಕೆಟ್‌ನ ಘನ ಇಂಧನವನ್ನು ಸಕ್ಕರೆ ಮತ್ತು ಸುಲಭವಾಗಿ ಸಿಗುವ ರಸಗೊಬ್ಬರವಾದ ಪೊಟ್ಯಾಸಿಯಮ್‌ ನೈಟ್ರೇಟ್ ಬಳಸಿ ನಿರ್ಮಿಸಲಾಗುತ್ತದೆ.

ಇವುಗಳ ಸಿಡಿತಲೆ ಅತ್ಯಂತ ಸರಳವಾಗಿದ್ದು, ಕಳ್ಳ ಸಾಗಾಣಿಕೆ ನಡೆಸಿದ ಅಥವಾ ಕಸಿದುಕೊಂಡ ಟಿಎನ್‌ಟಿ ಹಾಗೂ ಇನ್ನೊಂದು ಸಾಮಾನ್ಯ ರಸಗೊಬ್ಬರವಾದ ಯೂರಿಯಾ ನೈಟ್ರೇಟ್ ಹೊಂದಿರುತ್ತವೆ. ಈ ಸಿಡಿತಲೆಗಳು ಗಾತ್ರದಲ್ಲಿ ಸಣ್ಣವಾಗಿದ್ದು, ಸಣ್ಣ ವ್ಯಾಪ್ತಿಯ ದಾಳಿಗಳಿಗೆ ಸೂಕ್ತವಾಗಿರುತ್ತವೆ.

ಕಸಿದುಕೊಂಡ ಟಿಎನ್‌ಟಿ ಎಂದರೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ಟ್ರೈನೈಟ್ರೋಟಾಲ್ಯುಯೀನ್ (ಟಿಎನ್‌ಟಿ) ಆಗಿದ್ದು, ಸಾಮಾನ್ಯವಾಗಿ ಉತ್ಪಾದಿಸುವ ಅಥವಾ ಕಾನೂನು ಪ್ರಕಾರ ಪಡೆದುಕೊಳ್ಳುವ ಬದಲು ಅಕ್ರಮವಾಗಿ ಸಂಪಾದಿಸಿರುವುದಾಗಿರುತ್ತದೆ.

ಟ್ರೈನೈಟ್ರೋಟಾಲ್ಯುಯೀನ್ (ಟಿಎನ್‌ಟಿ) ಎನ್ನುವುದು ಒಂದು ಸ್ಫೋಟಕ ಸಂಯುಕ್ತವಾಗಿದ್ದು, ಸಾಮಾನ್ಯವಾಗಿ ವಿವಿಧ ಮಿಲಿಟರಿ ಹಾಗೂ ಔದ್ಯಮಿಕ ಉದ್ದೇಶಗಳಿಗೆ ಬಳಸಲಾಗುತ್ತದೆ. ಇವುಗಳನ್ನು ಬಾಂಬ್, ಶೆಲ್‌ಗಳು, ಹಾಗೂ ಲ್ಯಾಂಡ್ ಮೈನ್‌ಗಳಂತಹ ಆಯುಧಗಳ ನಿರ್ಮಾಣದಲ್ಲಿ ಸ್ಫೋಟಕವಾಗಿ ಬಳಸಲಾಗುತ್ತದೆ. ಟಿಎನ್‌ಟಿಯನ್ನು ಕಟ್ಟಡಗಳು, ಸೇತುವೆಗಳು ಹಾಗೂ ಇತರ ನಿರ್ಮಾಣಗಳನ್ನು ನಾಶಪಡಿಸಲು ಬಳಸಲಾಗುತ್ತದೆ. ಅದರೊಡನೆ, ಟಿಎನ್‌ಟಿಯನ್ನು ಗಣಿಗಾರಿಕೆ ಉದ್ಯಮದಲ್ಲಿ ಸ್ಫೋಟಕವಾಗಿ ಬಳಸಲಾಗುತ್ತದೆ. ಟಿಎನ್‌ಟಿ ತನ್ನ ಸ್ಥಿರತೆ ಮತ್ತು ನಂಬಿಕಾರ್ಹ ಸ್ಫೋಟಕ್ಕೆ ಹೆಸರಾಗಿದ್ದು, ಇದು ಸಾಮಾನ್ಯವಾಗಿ ಬಳಕೆಯಾಗುವ ಸ್ಫೋಟಕ ಉತ್ಪನ್ನವಾಗಿದೆ.

ಕಸ್ಸಾಮ್ ರಾಕೆಟ್‌ಗಳು ಯಾವುದೇ ನಿರ್ದೇಶನ ವ್ಯವಸ್ಥೆಗಳನ್ನು ಹೊಂದಿಲ್ಲ. ಅವುಗಳನ್ನು ಸಾಮಾನ್ಯವಾಗಿ ಇಸ್ರೇಲ್ ದಿಕ್ಕಿಗೆ ಗುರಿಯಾಗಿಸಿ, ಅತ್ಯಧಿಕ ಅವ್ಯವಸ್ಥೆ, ಹಾನಿ ಉಂಟುಮಾಡುವ ಸಲುವಾಗಿ ಉಡಾವಣೆಗೊಳಿಸಲಾಗುತ್ತದೆ. ಕಸ್ಸಾಮ್ ರಾಕೆಟ್‌ಗಳು ನಾಗರಿಕ ಪ್ರದೇಶಗಳಲ್ಲಿ ಮಿಲಿಟರಿ ಉದ್ದೇಶಗಳನ್ನು ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ಅವುಗಳ ಬಳಕೆಯನ್ನು ಯುದ್ಧಾಪರಾಧ ಹಾಗೂ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದೇ ಪರಿಗಣಿಸಲಾಗುತ್ತದೆ.

ವರ್ಷಗಳು ಕಳೆದಂತೆ, ಕಸ್ಸಾಮ್ ರಾಕೆಟ್‌ಗಳ ವಿನ್ಯಾಸ ಮತ್ತು ಸಾಮರ್ಥ್ಯಗಳು ಅಭಿವೃದ್ಧಿ ಕಂಡಿವೆ. ಪ್ರತಿಯೊಂದು ಹೊಸ ಆವೃತ್ತಿಯೂ ಹೆಚ್ಚಿನ ವ್ಯಾಪ್ತಿ ಹೊಂದಿವೆ. ಇತ್ತೀಚಿನ ಆವೃತ್ತಿಯಾದ ಕಸ್ಸಾಮ್-4 ರಾಕೆಟ್ 16 ಕಿಲೋಮೀಟರ್‌ಗಳ ವ್ಯಾಪ್ತಿ ಹೊಂದಿದೆ.

ರಾಕೆಟ್‌ನ ಮಾದರಿಯ ಅನುಸಾರವಾಗಿ ಸಿಡಿತಲೆಯ ಭಾರವೂ ಬದಲಾಗುತ್ತದೆ. ಕಸ್ಸಾಮ್-1ರ ಸಿಡಿತಲೆಯ ಭಾರ 5 ಕೆಜಿ ಆಗಿದ್ದರೆ, ಕಸ್ಸಾಮ್-4ರ ಸಿಡಿತಲೆ 20 ಕೆಜಿ ತೂಕ ಹೊಂದಿದೆ.

ಕಸ್ಸಾಮ್-1ರಿಂದ ನಾಲ್ಕರ ತನಕ ಪ್ರತಿಯೊಂದು ಆವೃತ್ತಿಯ ರಾಕೆಟ್‌ನ ತೂಕ ಈ ಕೆಳಗಿನಂತಿದೆ.

ಕಸ್ಸಾಮ್-1: 35 ಕೆಜಿ
ಕಸ್ಸಾಮ್-2: 40 ಕೆಜಿ
ಕಸ್ಸಾಮ್-3: 50 ಕೆಜಿ
ಕಸ್ಸಾಮ್-4: 40-45 ಕೆಜಿ

ನಾಲ್ಕೂ ಆವೃತ್ತಿಗಳ ಕಸ್ಸಾಮ್ ರಾಕೆಟ್‌ಗಳ ಒಟ್ಟು ತೂಕ 165ರಿಂದ 175 ಕೆಜಿ ಆಗಿರುತ್ತದೆ. ಇದು ರಾಕೆಟ್‌ನ ದೇಹ, ಇಂಧನ ಹಾಗೂ ಸಿಡಿತಲೆಗಳ ಒಟ್ಟು ತೂಕವಾಗಿದೆ. ಸಿಡಿತಲೆಯ ತೂಕ ಅದರಲ್ಲಿ ಬಳಕೆಯಾಗಿರುವ ಸ್ಫೋಟಕಗಳ ವಿಧ ಹಾಗೂ ಪ್ರಮಾಣದ ಆಧಾರದಲ್ಲಿ ಬದಲಾಗುತ್ತದೆ.

ಲೇಖಕರು 
ಗಿರೀಶ್ ಲಿಂಗಣ್ಣ
( ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News