ಪುಲ್ವಾಮಾ ಭಯೋತ್ಪಾದಕ ದಾಳಿ: 10 ಕಿ.ಮೀ.ವರೆಗೂ ಕೇಳಿತ್ತು ಭೀಕರ ಸ್ಫೋಟದ ಸದ್ದು

ಜೈಷ್‌-ಎ-ಮೊಹಮ್ಮದ್‌ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೊವನ್ನು ಡಿಕ್ಕಿ ಹೊಡೆಸಿದ್ದರಿಂದ 44 ಯೋಧರು ಹುತಾತ್ಮರಾಗಿದ್ದಾರೆ. ಬಸ್‌ನಲ್ಲಿ ಇದ್ದ ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟಗೊಂಡ ಬಸ್‌ನಲ್ಲಿ 44 ಸಿಬ್ಬಂದಿ ಇದ್ದರು.

Last Updated : Feb 15, 2019, 09:53 AM IST
ಪುಲ್ವಾಮಾ ಭಯೋತ್ಪಾದಕ ದಾಳಿ: 10 ಕಿ.ಮೀ.ವರೆಗೂ ಕೇಳಿತ್ತು ಭೀಕರ ಸ್ಫೋಟದ ಸದ್ದು title=
Pic Courtesy: PTI

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಪ್ರದೇಶದಲ್ಲಿ ಗುರುವಾರ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆಸಿದ ಉಗ್ರರ ದಾಳಿಯಲ್ಲಿ ಕನಿಷ್ಠ 44 ಮಂದಿ ಹುತಾತ್ಮರಾಗಿದ್ದಾರೆ. ಈ ದಾಳಿ ಅದೆಷ್ಟು ಭಯಂಕರವಾಗಿತ್ತು ಎಂದರೆ ಸುಮಾರು 10 ಕಿ.ಮೀ.ದೂರದವರೆಗೂ ಭೀಕರ ಸ್ಫೋಟದ ಸದ್ದು ಕೇಳಿಸಿತ್ತು!

ಶ್ರೀನಗರ ಸುತ್ತಮುತ್ತಲ ಪ್ರದೇಶಗಳಲ್ಲಿಯೂ ಸಹ ಪುಲ್ವಾಮಾದೊಂದಿಗೆ ಸಂಪರ್ಕ ಹೊಂದಿದ್ದ 10-12 ಕಿ.ಮೀ ದೂರದಲ್ಲಿ ಅದರ ಧ್ವನಿ ಕೇಳಿತ್ತು. ಸ್ಥಳೀಯ ನಿವಾಸಿಗಳಿಗೆ ಘಟನೆಯಲ್ಲಿ ಹುತಾತ್ಮರಾದ ಯೋಧರ ಶವ ಜಮ್ಮು ಕಾಶ್ಮೀರ ಹೆದ್ದಾರಿಯಲ್ಲಿ ಕಂಡು ಬಂದಿದೆ. ಕೆಲವು ದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿದ್ದು, ಗುರುತಿಸುವಿಕೆಗೆ ಸಾಕಷ್ಟು ಸಮಯ ತೆಗೆದುಕೊಳ್ಳಬಹುದು ಎನ್ನಲಾಗಿದೆ. ಭೀಕರ ಸ್ಫೋಟದ ಸದ್ದು ಕೇಳಿದೊಡನೆಯೇ ಜನರು ಓಡಲು ಪ್ರಾರಂಭಿಸಿದ್ದಾರೆ. ಸ್ಫೋಟ ಸಂಭವಿಸುತ್ತಿದ್ದಂತೆಯೇ ಘಟನಾ ಸ್ಥಳದ 300 ಮೀಟರ್ ಆಸುಪಾಸಿನಲ್ಲಿದ್ದ ಅಂಗಡಿ ಮಾಲಿಕರು ಭಯಗೊಂಡು ಬಾಗಿಲು ಕೆಳಗೆಳೆದಿದ್ದರೆ ಇನ್ನೂ ಕೆಲವರು ರಕ್ಷಣೆಗಾಗಿ ದಿಕ್ಕಾಪಾಲಾಗಿ ಓಡಲು ಪ್ರಾರಂಭಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. 

ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್ -ಇ-ಮೊಹಮ್ಮದ್ (ಜೆಇಎಂ) ಈ ಕ್ರೂರ ಭಯೋತ್ಪಾದಕ ದಾಳಿಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಆಕ್ರಮಣಕಾರರನ್ನು ಕಮಾಂಡರ್ ಆದಲ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ.

ಸ್ಫೋಟಗೊಂಡ ಬಸ್ ನಲ್ಲಿ 44 ಸಿಬ್ಬಂದಿ ಇದ್ದರು. ಸ್ಫೋಟದ ಸಂದರ್ಭದಲ್ಲಿ ಹೆದ್ದಾರಿಯ ವಿವಿಧೆಡೆ ಬೇರೆ ಬೇರೆ ಬಸ್ ಗಳಲ್ಲಿ ಸಿಆರ್‌ಪಿಎಫ್‌ನ 2,547 ಸಿಬ್ಬಂದಿ ಸಂಚರಿಸುತ್ತಿದ್ದರು. ಇವರಲ್ಲಿ ಹೆಚ್ಚಿನವರು ರಜೆ ಕಳೆದು ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್‌ಗೆ ಜೈಷ್‌-ಎ-ಮೊಹಮ್ಮದ್‌ ಉಗ್ರನೊಬ್ಬ ಸುಮಾರು 200 ಕೆಜಿ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೊವನ್ನು ಡಿಕ್ಕಿ ಹೊಡೆಸಿದ್ದರಿಂದ 44 ಯೋಧರು ಹುತಾತ್ಮರಾಗಿದ್ದಾರೆ. ಬಸ್‌ನಲ್ಲಿ ಇದ್ದ ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಈ ಘಟನೆಯನ್ನು ಭಯೋತ್ಪಾದಕರು ನಡೆಸಿರುವ ಸ್ಥಳ ಲಾಥೋರಾ ಕಮಾಂಡೋ ತರಬೇತಿ ಕೇಂದ್ರದಿಂದ ಬಹಳ ದೂರದಲ್ಲೇನು ಇಲ್ಲ. ಡಿಸೆಂಬರ್ 31, 2017 ರಂದು ಸಹ ಭಯೋತ್ಪಾದಕರು ದಾಳಿ ನಡೆಸಿದರು. ಇದರಲ್ಲಿ ಐದು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು.

ಮತ್ತೊಂದೆಡೆ, ನಿನ್ನೆ ನಡೆದ ಪುಲ್ವಾಮಾ ದಾಳಿಯ ನಂತರ ದಕ್ಷಿಣ ಕಾಶ್ಮೀರದಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇಂದು ಸಂಪುಟದ ಭದ್ರತಾ ಸಮಿತಿಯ ಸಭೆ ಕರೆಯಲಾಗಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ (ಎನ್ಐಎ) ತಂಡವು ಆವಂತಿಪುರಾಗೆ ತೆರಳಿದೆ.

2001ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಕಟ್ಟಡಕ್ಕೆ ಸ್ಫೋಟಕ ತುಂಬಿದ ವಾಹನ ನುಗ್ಗಿಸಿ ದಾಳಿ ಮಾಡಲಾಗಿತ್ತು. ಈ ಘಟನೆಯಲ್ಲಿ 38 ಜನರು ಮೃತಪಟ್ಟಿದ್ದರು. 2016ರ ಸೆಪ್ಟೆಂಬರ್‌ನಲ್ಲಿ ಕಾಶ್ಮೀರದ ಉರಿಯಲ್ಲಿರುವ ಸೇನಾ ಶಿಬಿರದ ಮೇಲೆ ನಾಲ್ವರು ಉಗ್ರರು ನುಸುಳಿ ದಾಳಿ ನಡೆಸಿದ್ದರು. ಇದರಲ್ಲಿ 18 ಮಂದಿ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ, ಗಡಿ ದಾಟಿ ಹೋಗಿದ್ದ ಭಾರತದ ಯೋಧರು ನಿರ್ದಿಷ್ಟ ದಾಳಿ ನಡೆಸಿ ಉಗ್ರರ ಹಲವು ಶಿಬಿರಗಳನ್ನು ನಾಶ ಮಾಡಿದ್ದಾರೆ. ಇದೀಗ 2019ರ ಫೆ.14ರಂದು ಜೈಷ್‌-ಎ-ಮೊಹಮ್ಮದ್ ಉಗ್ರ ಸಂಘಟನೆ ಸೇನಾ ವಾಹನದ ಮೇಲೆ ದಾಳಿ ಮಾಡಿದೆ. 2001ರ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅತಿದೊಡ್ಡ ದಾಳಿ ಇದಾಗಿದೆ.

Trending News