ಪಣಜಿ:ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಸಾವಿನ ಬಳಿಕ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಈ ಹಿನ್ನೆಲೆಯಲ್ಲಿ ಗೋವಾ ಸಚಿವರು ನೀಡಿರುವ ಈ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ. “ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆಯೇ ಮತ್ತು ನಾಲ್ಕು ತಿಂಗಳ ಅವಧಿಯಲ್ಲಿ ಸಂತ್ರಸ್ತ ಪೀಡಿತರಿಗೆ ನ್ಯಾಯ ದೊರಕುತ್ತಿದೆಯೇ ಎಂಬುದನ್ನು ನಿಗಾವಹಿಸಲು ಸಂಸತ್ತು IPC ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ " ಎಂದು ಲೋಬೊ ANI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
"ಇಂತಹ ಪ್ರಕರಣಗಳಲ್ಲಿ ಅಂತಿಮ ತೀರ್ಪಿಗೆ ನಿಗದಿಪಡಿಸಿದ ಗರಿಷ್ಟ ಸಮಯ ಐದು ತಿಂಗಳು ಮೀರಬಾರದು ಮತ್ತು ಬ್ರಿಟಿಶ್ ಆಳ್ವಿಕೆಯಲ್ಲಿ ಭಾರತದ ಕೆಲ ಸ್ಥಳಗಳಲ್ಲಿ ಅಸ್ತಿತ್ವದ್ದ ಮತ್ತು ಇಂದಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲ ಸ್ಥಳಗಳಲ್ಲಿ ಜಾರಿಯಲ್ಲಿರುವ ಸಾರ್ವಜನಿಕ ಗಲ್ಲು ಶಿಕ್ಷೆಯನ್ನು ಕೂಡಲೇ ಜಾರಿಗೆ ತರಬೇಕು" ಎಂದು ಅವರು ಆಗ್ರಹಿಸಿದ್ದಾರೆ.
ಗುರುವಾರ ಬೆಳಗ್ಗೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ತೆರಳುತ್ತಿದ್ದ ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ದುರುಳರು ಬೆಂಕಿ ಇಟ್ಟಿದ್ದು, ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ 11.40ಕ್ಕೆ ಕೊನೆಯುಸಿರೆಳೆದಿದ್ದಾಳೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಈ ಪ್ರತಿಕ್ರಿಯೆ ನೀಡಿದ್ದಾರೆ.
"ಅಂತಹ ಮನಸ್ಥಿತಿ ಹೊಂದಿರುವ ಅಪರಾಧಿಗಳು ಮತ್ತು ಇತರರಿಗೆ ಬಲವಾದ ಸಂದೇಶವನ್ನು ರವಾನಿಸಲು ಇಂತಹ ಮರಣದಂಡನೆಗಳನ್ನು ಕಡ್ಡಾಯಗೊಳಿಸಬೇಕು" ಎಂದು ಗೋವಾ ಗ್ರಾಮೀಣಾಭಿವೃದ್ಧಿ ಸಚಿವರು ಹೇಳಿದ್ದಾರೆ . "ಅದರಲ್ಲೂ ವಿಶೇಷವಾಗಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾದರೆ, ಅಂತಹ ಆರೋಪಿಗಳನ್ನು ಬಹಿರಂಗವಾಗಿ ಕ್ರೀಡಾಂಗಣದಲ್ಲಿ ಗಲ್ಲಿಗೇರಿಸಿ, ಇಂತಹ ಅಪರಾಧಗಳಲ್ಲಿ ಕೃತ್ಯಗಳಲ್ಲಿ ಭಾಗಿಯಾಗುವ ಕ್ರಿಮಿನಲ್ ಗಳಿಗೆ ಬಲವಾದ ಸಂದೇಶ ರವಾನಿಸಬೇಕು ಎಂದು ಲೋಬೊ ಹೇಳಿದ್ದಾರೆ.