ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ: ತ್ರಿವಳಿ ತಲಾಖ್ ರದ್ದು ಮಸೂದೆ ಅಂಗೀಕಾರಕ್ಕೆ ಪಣತೊಟ್ಟ ಸರ್ಕಾರ

ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣಾವಧಿಯ ಬಜೆಟ್ ಇದಾಗಿದೆ.

Last Updated : Jan 29, 2018, 09:00 AM IST
ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ: ತ್ರಿವಳಿ ತಲಾಖ್ ರದ್ದು ಮಸೂದೆ ಅಂಗೀಕಾರಕ್ಕೆ ಪಣತೊಟ್ಟ ಸರ್ಕಾರ title=

ನವದೆಹಲಿ: ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಪ್ರಾರಂಭವಾಗಲಿದ್ದು, ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣಾವಧಿಯ ಬಜೆಟ್ ಅಧಿವೇಶನ ಇದಾಗಿದೆ. ಈ ಬಾರಿಯ ಅಧಿವೇಶನದಲ್ಲಿ ಮುಸ್ಲಿಂ ಮಹಿಳಾ ರಕ್ಷಣೆ (ಮದುವೆ ಹಕ್ಕುಗಳ ರಕ್ಷಣೆ) ಗಾಗಿ ತ್ರಿವಳಿ ತಲಾಖ್ ರದ್ದು ಮಸೂದೆ ಅಂಗೀಕಾರಕ್ಕೆ ಕೇಂದ್ರ ಸರ್ಕಾರ ಪಣತೊಟ್ಟಿದೆ. ಈ ನಿಟ್ಟಿನಲ್ಲಿ ಸಹಮತ ಮೂಡಿಸುವ ಸಲುವಾಗಿ ಎಲ್ಲಾ ರಾಜಕೀಯ ಪಕ್ಷಗಳ ಮನವೊಲಿಸಲು ಸರ್ಕಾರ ತೀರ್ಮಾನಿಸಿದೆ.

ನಿನ್ನೆ ನಡೆದ ಸರ್ವಪಕ್ಷ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಸಭೆಯ ಬಗ್ಗೆ ವಿವರಿಸಿದ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್, ಎಲ್ಲಾ ನಾಯಕರು ಈ ಅಧಿವೇಶನವು ಯಶಸ್ವಿಯಾಗಲು ತಮ್ಮ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಸರ್ಕಾರ ಈ ಎಲ್ಲಾ ಸಲಹೆಗಳ ಬಗ್ಗೆ ಸಮಾಲೋಚನೆ ನಡೆಸುತ್ತಿದೆ. ಆದರೆ, ತ್ರಿವಳಿ ತಲಾಖ್ ಮಸೂದೆಯನ್ನು ಸಂಸತ್ತಿನ ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂಬ ವಿರೋಧ ಪಕ್ಷಗಳ ಆಗ್ರಹವನ್ನು ಸರ್ಕಾರ ತಿರಸ್ಕರಿಸಿದೆ. ಈ ಬಾರಿಯ ಅಧಿವೇಶನದಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ರಾಜ್ಯ ಸಭೆಗೆ ರವಾನಿಸಲಾಗುವುದು. ಜಿಎಸ್ಟಿ ಮಸೂದೆಯಂತೆ ಈ ಮಸೂದೆಯನ್ನೂ ಒಮ್ಮತದಿಂದ ಅಂಗೀಕರಿಸಲಾಗುವುದು ಎಂದು ಭರವಸೆ ನೀಡಿದರು.

ಇದು ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣಾವಧಿಯ ಬಜೆಟ್...
ವಿತ್ತ ಸಚಿವ ಅರುಣ್ ಜೇಟ್ಲಿ ಫೆಬ್ರವರಿ 1 ರಂದು ರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣಾವಧಿಯ ಬಜೆಟ್ ಮಂಡಿಸಲಿದ್ದಾರೆ. ಪ್ರತ್ಯೇಕವಾಗಿ ಮಂಡಿಸಲಾಗುತ್ತಿದ್ದ ರೈಲ್ವೇ ಬಜೆಟ್ ಅನ್ನು ಕಳೆದ ವರ್ಷದಿಂದ ಸಾಮಾನ್ಯ ಬಜೆಟ್ ನೊಂದಿಗೆ ಸೇರಿಸಲಾಗಿದೆ. ಈ ಬಾರಿಯ ಬಜೆಟ್ ಬಲವಾದ ರಾಜಕೀಯ ಸಂದೇಶವನ್ನು ನೀಡುವ ನಿರೀಕ್ಷೆ ಇದೆ. ಏಕೆಂದರೆ ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದೆ. ಈ ಬಜೆಟ್ ನಲ್ಲಿ ರೈತರು ಮತ್ತು ಬಡವರ ಬಗ್ಗೆ ಗಮನಹರಿಸುವ ನಿರೀಕ್ಷೆ ಇದೆ. ಮತ್ತೊಂದೆಡೆ ಈ ವರ್ಷ ವಿಧಾನಸಭಾ ಹೊಸ್ತಿಲಿನಲ್ಲಿರುವ ರಾಜ್ಯಗಳಿಗೆ ಬಜೆಟ್ ನಲ್ಲಿ ವಿಶೇಷ ಸ್ಥಾನ ದೊರೆಯುವ ಸಾಧ್ಯತೆ ಕೂಡ ದಟ್ಟವಾಗಿದೆ.

ಅಧಿವೇಶನದ ವಿವರ...
ಬಜೆಟ್ ಅಧಿವೇಶನದ ಮೊದಲ ಭಾಗವು ಇಂದಿನಿಂದ ಪ್ರಾರಂಭವಾಗಿ ಫೆಬ್ರವರಿ 9ರವರೆಗೆ ಎಂಟುದಿನಗಳು ನಡೆಯಲಿದೆ. ಅಧಿವೇಶನದ ಎರಡನೇ ಭಾಗವು ಮಾರ್ಚ್ 5 ರಿಂದ ಏಪ್ರಿಲ್ 9ರವರೆಗೆ ನಡೆಯಲಿದೆ.

Trending News