ಮಂಡ್ಯ: ಸರ್ಕಾರದ ವತಿಯಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಲಾಗುತ್ತಿತ್ತು. ಆದರೆ ಕರೋನಾವೈರಸ್ ಬಿಕ್ಕಟ್ಟಿನಿಂದಾಗಿ ಮಾರ್ಚ್ ಕೊನೆಯ ವಾರದಿಂದ ಶಾಲೆಗಳನ್ನು ಮುಚ್ಚಲಾಗಿದ್ದು ಇತ್ತೀಚಿಗೆ ಆನ್ಲೈನ್ ತರಗತಿಗಳನ್ನು ಪ್ರಾರಂಭಿಸಿದ್ದಾರೆ. ಉಳ್ಳವರು ಶಿವಾಲಯವ ಮಾಡುವರಯ್ಯ ನಾನೇನು ಮಾಡಲಿ ಬಡವನಯ್ಯ ಎಂಬಂತೆ ಸ್ಲಂ ನಲ್ಲಿರುವ ಮಕ್ಕಳು ಆನ್ಲೈನ್ ತರಗತಿ (Online Class)ಗಳಿಂದ ವಂಚಿತರಾಗುತ್ತಿದ್ದಾರೆ.
ಹೌದು ಶಿಕ್ಷಣದಿಂದ ಮಕ್ಕಳು ವಂಚಿತರಾಗಿದ್ದು ಅಲ್ಲಿ ಇಲ್ಲಿ ಕಾಲ ಕಳೆಯುತ್ತಿದ್ದಾರೆ. ಕೆಲವರು ತಮ್ಮ ಪೋಷಕರಿಗೆ ಸಹಾಯಕರಾಗಿ ಕೂಲಿಗೆ ಹೋಗುತ್ತಿದ್ದಾರೆ.
ಮನೆಯೂ ಇಲ್ಲದೇ, ಕೊರೊನಾ ಸಂಕಷ್ಟದಲ್ಲಿ ಶಿಕ್ಷಣವೂ ಇಲ್ಲದೇ ಸ್ಲಂ ಮಕ್ಕಳು ಅತಂತ್ರರಾಗಿದ್ದಾರೆ. ಶಿಕ್ಷಣ (Education) ಎಲ್ಲ ಮಕ್ಕಳ ಮೂಲ ಹಕ್ಕು ಎನ್ನಲಾಗುತ್ತದೆ. ಆದರೆ, ಮಂಡ್ಯದ ಹಾಲಹಳ್ಳಿ ಸ್ಲಂ ಮಕ್ಕಳ ಗೋಳು ಕೇಳುವವರೇ ಇಲ್ಲದಂತಾಗಿದೆ.
ಹಾಲಹಳ್ಳಿ ಸ್ಲಂನಲ್ಲಿ ಸುಮಾರು 600ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಸರ್ಕಾರ ಇನ್ನೂ ಮನೆ ಕಟ್ಟಿಕೊಟ್ಟಿಲ್ಲ ಎಂಬ ಚಿಂತೆ ಒಂದು ಕಡೆಯಾದರೆ, ಇನ್ನೊಂದೆಡೆ ಮಕ್ಕಳಿಗೆ ಆನ್ಲೈನ್ ಶಿಕ್ಷಣವೂ ದೊರಕುತ್ತಿಲ್ಲ ಎಂಬ ನೋವು ಪೋಷಕರನ್ನು ಕಾಡುತ್ತಿದೆ.
ಇಲ್ಲಿ ಇರುವ ಎಲ್ಲರೂ ಕೂಲಿ ಕಾರ್ಮಿಕರೇ ಆಗಿದ್ದಾದ್ದು ಮಕ್ಕಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಚಂದನ ವಾಹಿನ ಪಾಠವೂ ಇಲ್ಲ, ಅತ್ತ ಆನ್ಲೈನ್ ಕ್ಲಾಸ್ಗೆ ಸ್ಮಾರ್ಟ್ ಫೋನ್ ಇಲ್ಲದೇ ಮಕ್ಕಳು ಕಂಗಾಲಾಗಿದ್ದಾರೆ. ಕೆಲವರು ತಮ್ಮ ಪೋಷಕರಿಗೆ ಸಹಾಯಕರಾಗಿ ಕೂಲಿಗೆ ಹೋಗುತ್ತಿದ್ದಾರೆ. ಶಿಕ್ಷಣದಿಂದ ಮಕ್ಕಳು ವಂಚಿತರಾಗಿದ್ದು, ಅಲ್ಲಲ್ಲಿ ಕಾಲ ಕಳೆಯುತ್ತಿದ್ದಾರೆ. ಮಕ್ಕಳಿಗೆ ಇನ್ನಾದರೂ ಶಿಕ್ಷಣದ ವ್ಯವಸ್ಥೆ ಮಾಡಿ ಎಂದು ಪೋಷಕರು ಮನವಿ ಮಾಡುತ್ತಿದ್ದಾರೆ.
ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಇನ್ನಾದರೂ ಈ ಬಗ್ಗೆ ಗಮನಹರಿಸಿ ಮಕ್ಕಳ ಭವಿಷ್ಯಕ್ಕಾಗಿ ಒಂದು ನಿರ್ಧಾರ ಕೈಗೊಳ್ಳಬೇಕಾಗಿದೆ. ಇಲ್ಲವಾದರೆ ಈ ಮಕ್ಕಳು ಶಾಲೆಯಿಂದ ದೂರವೇ ಉಳಿಯೋದರಲ್ಲಿ ಅನುಮಾನವೇ ಇಲ್ಲ.