ನವದೆಹಲಿ: ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ ಮೂಲಕ ಹಣ ವರ್ಗಾವಣೆಗೆ ಯಾವುದೇ ಶುಲ್ಕ ವಿಧಿಸದಿರಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದ್ದು, ಈ ನಿರ್ಣಯ ಇಂದಿನಿಂದ(ಜುಲೈ 1)ಲೇ ಜಾರಿಯಾಗಲಿದೆ.
ಎನ್ಇಎಫ್ಟಿ ಮೂಲಕ 2 ಲಕ್ಷ ರೂ.ವರೆಗೆ ಹಣ ವರ್ಗಾವಣೆ
ಸದ್ಯ ಬ್ಯಾಂಕುಗಳಲ್ಲಿ ಎನ್ಇಎಫ್ಟಿ(ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್) ಮೂಲಕ ಗರಿಷ್ಠ 2 ಲಕ್ಷ ರೂ.ಗಳ ವರೆಗೆ ಹಣ ವರ್ಗಾವಣೆ ಮಾಡಬಹುದಾಗಿದೆ. ಅಂತೆಯೇ ಆರ್ಟಿಜಿಎಸ್ ಮೂಲಕ 2 ಲಕ್ಷಕ್ಕೂ ಅಧಿಕ ಮೊತ್ತದ ಹಣ ವರ್ಗಾವಣೆ ಮಾಡಬಹುದಾಗಿದೆ.
ಎಸ್ಬಿಐ ಈ ಶುಲ್ಕ ವಿಧಿಸುತ್ತದೆ
ಭಾರತೀಯ ಬ್ಯಾಂಕ್ ಅಸೋಸಿಯೇಶನ್ ಅಧ್ಯಕ್ಷ ಸುನಿಲ್ ಮೆಹ್ತಾ ಮಾತನಾಡಿ, “ಡಿಜಿಟಲ್ ವಹಿವಾಟನ್ನು ಹೆಚ್ಚಿಸುವ ಸಲುವಾಗಿ, ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ ಮೂಲಕ ಹಣ ವರ್ಗಾವಣೆ ಮಾಡುವಾಗ ಬ್ಯಾಂಕುಗಳ ಮೇಲೆ ಯಾವುದೇ ಶುಲ್ಕ ವಿಧಿಸದಿರಲು ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಈ ನಿರ್ಧಾರವು ಬ್ಯಾಂಕುಗಳಿಗೆ ಈ ಡಿಜಿಟಲ್ ಮಾಧ್ಯಮಗಳಿಂದ ಹಣವನ್ನು ವರ್ಗಾವಣೆ ಮಾಡುವ ಶುಲ್ಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎನ್ಇಎಫ್ಟಿ ಮೂಲಕ ಹಣ ಕಳುಹಿಸಲು 1 ರಿಂದ 5 ರೂಪಾಯಿ ಮತ್ತು ಆರ್ಟಿಜಿಎಸ್ನಲ್ಲಿ 5 ರಿಂದ 50 ರೂಪಾಯಿಗಳನ್ನು ವಿಧಿಸುತ್ತದೆ.
ದೇಶದಲ್ಲಿ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಬ್ಯಾಂಕ್ ನಂದನ್ ನಿಲೇಕಣಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಆನ್ಲೈನ್ ವಹಿವಾಟಿನ ಮೇಲಿನ ಇಂಥ ಶುಲ್ಕಗಳನ್ನು ವಿಧಿಸದಿರಲು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಬ್ಯಾಂಕ್ ಈ ಶಿಫಾರಸನ್ನು ಅನುಮೋದಿಸಿದೆ. ಅಲ್ಲದೆ, ಎಟಿಎಂ ವಹಿವಾಟಿನಲ್ಲಿ ಬ್ಯಾಂಕುಗಳು ವಿಧಿಸುವ ಶುಲ್ಕವನ್ನು ಪರಿಶೀಲಿಸಲು ಭಾರತೀಯ ಬ್ಯಾಂಕ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿ.ಜಿ.ಕನ್ನನ್ ಅವರ ಅಧ್ಯಕ್ಷತೆಯಲ್ಲಿ ರಿಸರ್ವ್ ಬ್ಯಾಂಕ್ ಒಂದು ಸಮಿತಿಯನ್ನು ರಚಿಸಿದೆ. ಇದರ ವರದಿಯನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಮೆಹ್ತಾ ಹೇಳಿದ್ದಾರೆ.