ನವದೆಹಲಿ: 2008 ರಲ್ಲಿ ನಡೆದ ಮಾಲೆಂಗಾವ್ ಸ್ಫೊಟ ಪ್ರಕರಣದ ನಾಲ್ವರು ಆರೋಪಿಗಳಿಗೆ ಶುಕ್ರವಾರ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.
ನ್ಯಾಯಮೂರ್ತಿಗಳಾದ ಐ.ಎ.ಮಹಂತಿ ಮತ್ತು ಎ.ಎಂ.ಬದಾರ್ ಅವರಿದ್ದ ವಿಭಾಗೀಯ ಪೀಠ ಆರೋಪಿಗಳಾದ ಧನ್ ಸಿಂಗ್, ಲೋಕೇಶ್ ಶರ್ಮಾ, ಮನೋಹರ್ ನರ್ವಾರಿಯಾ ಮತ್ತು ರಾಜೇಂದ್ರ ಚೌಧರಿ ಅವರಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ.
"ಆರೋಪಿಗಳ ಮನವಿಯನ್ನು ಪುರಸ್ಕರಿಸಲಾಗಿದೆ. ಆರೋಪಿಗಳನ್ನು 50,000 ರೂ.ಗಳ ನಗದು ಜಾಮೀನಿನ ಮೇಲೆ ಬಿಡುಗಡೆಗೆ ಆದೇಶಿಸಲಾಗಿದ್ದು, ಪ್ರತಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಕ್ಕೆ ಹಾಜರಾಗಬೇಕು. ಸಾಕ್ಷಿಗಳನ್ನು ನಾಶಪಡಿಸಲು ಅಥವಾ ತಿರುಚಲು ಪ್ರಯತ್ನಿಸಬಾರದು" ಎಂದು ನ್ಯಾಯಾಲಯ ಹೇಳಿದೆ.
2013ರಲ್ಲಿ ಬಂಧಿತರಾದ ಈ ನಾಲ್ವರು ಆರೋಪಿಗಳು ವಿಶೇಷ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದ ಬಳಿಕ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
2008ರ ಸೆಪ್ಟೆಂಬರ್ 8ರಂದು ನಾಸಿಕ್ ಸಮೀಪದ ಮಾಲೆಗಾಂವ್ನಲ್ಲಿರುವ ಹಮೀದಿಯಾ ಮಸೀದಿ ಬಳಿಯ ಸ್ಮಶಾನದ ಹೊರಗೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ 37 ಜನ ಮೃತಪಟ್ಟಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.