ಪಾಟ್ನಾ: ಲೋಕಸಭಾ ಚುನಾವಣೆಗೆ ಬಿಹಾರ ಮಹಾಘಟಬಂಧನ್ ಸೀಟು ಹಂಚಿಕೆ ವಿಚಾರ ಫೈನಲ್ ಆಗಿದ್ದು, 20+9+5+3+3 ಸೂತ್ರಕ್ಕೆ ಅಸ್ತು ಎಂದಿವೆ.
ಈ ಬಗ್ಗೆ ಶುಕ್ರವಾರ ನಗರದ ಹೋಟೆಲ್ ಮಯೂರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮೈತ್ರಿ ಪಕ್ಷಗಳು ರಾಷ್ಟ್ರೀಯ ಜನತಾ ದಳ ಕನಿಷ್ಠ 20 ಸೀಟುಗಳಲ್ಲಿ, ಕಾಂಗ್ರೆಸ್ 9 ಸೀಟುಗಳಲ್ಲಿ, ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್ಎಲ್ಎಸ್ಪಿ) ಐದು ಸೀಟುಗಳಲ್ಲಿ, ಹಿಂದುಸ್ಥಾನ ಆವಾಮ್ ಮೋರ್ಚಾ (ಎಚ್ಎಎಂ) ಮತ್ತು ವಿಕಾಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ತಲಾ ಮೂರು ಸೀಟುಗಳಲ್ಲಿ ಮತ್ತು ಸಿಪಿಐ ಲಿಬರೇಶನ್ ಒಂದು ಸೀಟಿನಲ್ಲಿ (ಆರ್ಜೆಡಿ ಕೋಟಾದಡಿ) ಸ್ಪರ್ಧಿಸುತ್ತಿರುವುದಾಗಿ ಘೋಷಿಸಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಜೆಡಿ ರಾಷ್ಟ್ರೀಯ ವಕ್ತಾರ ಮನೋಜ್ ಝಾ, ಶರದ್ ಯಾದವ್ ಅವರು ಆರ್ ಜೆ ಡಿ ಚಿಹ್ನೆಯಡಿ ಸ್ಪರ್ಧಿಸಲಿದ್ದಾರೆ ಮತ್ತು ಲೋಕಸಭಾ ಚುನಾವಣೆಯ ಬಳಿಕ ತಮ್ಮ ಲೋಕತಾಂತ್ರಿಕ ಜನತಾ ದಳವನ್ನು ಆರ್ಜೆಡಿ ಜತೆಗೆ ವಿಲೀನಗೊಳಿಸಲಿದ್ದಾರೆ ಎಂದು ತಿಳಿಸಿದರು.
Manoj Jha, RJD on seat sharing: RJD on 20, Congress on 9, HAM-3, RLSP on 5, VIP on 3 and CPI-1 in RJD quota.#LokSabhaElections2019 pic.twitter.com/LlLOqxoqB9
— ANI (@ANI) March 22, 2019
ಇದೇ ಸಂದರ್ಭದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ಜಮುಯೀ, ಗಯಾ, ಔರಂಗಾಬಾದ್ ಮತ್ತು ನವಾದಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಯಿತು. ಗಯಾ ಕ್ಷೇತ್ರದಿಂದ ಎಚ್ಎಎಂ ಮುಖ್ಯಸ್ಥ ಜೀತನ್ ರಾಮ್ ಮಾಂಜಿ, ಔರಂಗಾಬಾದ್ ನಿಂದ ಉಪೇಂದ್ರ ಪ್ರಸಾದ್, ಜಮೂಯಿ ಕ್ಷೇತ್ರದಿಂದ ಭೂದೇವ್ ಚೌದರಿ ಸ್ಪರ್ಧಿಸಲಿದ್ದಾರೆ ಎಂದು ಮನೋಜ್ ಝಾ ತಿಳಿಸಿದರು.
ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಘೋಷಣೆಯೊಂದಿಗೆ ವಿಹಾರ ವಿಧಾನಸಭೆ ಉಪಚುನಾವಣೆಗೂ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ನವಾಡಾ ಕ್ಷೇತ್ರದಿಂದ ಧೀರೇಂದ್ರ ಕುಮಾರ್ ಮತ್ತು ಡೆಹರಿ ಕ್ಷೇತ್ರದಿಂದ ಆರ್ಜೆಡಿ ಪಕ್ಷದ ಮೊಹಮ್ಮದ್ ಫಿರೋಜ್ ಸ್ಪರ್ಧಿಸುತ್ತಿದ್ದಾರೆ.