Parliament Attack: ಲೋಕಸಭೆಯಲ್ಲಿ ಭದ್ರತಾ ಲೋಪ, ಬಂಧಿತ ನಾಲ್ವರ ಪೈಕಿ ಇಬ್ಬರಿಗೆ ಮೈಸೂರಿನ ಲಿಂಕ್!

Lok Sabha security breach: ಮಾಹಿತಿ ಪ್ರಕಾರ ಆರೋಪಿಗಳನ್ನು ಮೈಸೂರು ಮೂಲದ ಇಂಜಿನಿಯರ್​ ಮನೋರಂಜನ್​ ಡಿ ಮತ್ತು ಸಾಗರ್​ ಶರ್ಮಾ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಮೈಸೂರು-ಕೊಡಗು ಸಂಸದ ಪ್ರತಾಪ್​ ಸಿಂಹ ಅವರ ಕಚೇರಿಯಿಂದ ವಿಸಿಟಿಂಗ್ ಪಾಸ್ ಪಡೆದು ಸದನ ಪ್ರವೇಶಿಸಿ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಬಳಿಕ ಆತಂಕ ಸೃಷ್ಟಿಸುವ ಘಟನೆಗೆ ಸಾಕ್ಷಿಯಾಗಿದ್ದಾರೆ.

Written by - Puttaraj K Alur | Last Updated : Dec 13, 2023, 06:59 PM IST
  • ಇತ್ತೀಚೆಗಷ್ಟೇ ಉದ್ಘಾಟನೆಯಾಗಿದ್ದ ನೂತನ ಸಂಸತ್​ ಭವನದಲ್ಲಿ ಭಾರೀ ಭದ್ರತಾ ಲೋಪ
  • ಮೈಸೂರು ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ವಿಸಿಟಿಂಗ್ ಪಾಸ್ ಪಡೆದಿದ್ದ ಇಬ್ಬರು ಆರೋಪಿಗಳು
  • ಸದನದಲ್ಲಿ ನಡೆದಿರುವ ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದ ಸ್ಪೀಕರ್ ಓಂ ಬಿರ್ಲಾ
Parliament Attack: ಲೋಕಸಭೆಯಲ್ಲಿ ಭದ್ರತಾ ಲೋಪ, ಬಂಧಿತ ನಾಲ್ವರ ಪೈಕಿ ಇಬ್ಬರಿಗೆ ಮೈಸೂರಿನ ಲಿಂಕ್!  title=
ಸಂಸತ್​ ಭವನದಲ್ಲಿ ಭಾರೀ ಭದ್ರತಾ ಲೋಪ!

ನವದೆಹಲಿ: 2001ರ ಡಿಸೆಂಬರ್ 13ರಂದು ಸಂಸತ್​ ಭವನದ ಮೇಲೆ ಉಗ್ರರ ದಾಳಿ ನಡೆದಿತ್ತು. ದೇಶದ ಇತಿಹಾಸದಲ್ಲಿ ಅಂತ್ಯಂತ ಭೀಕರ ಘಟನೆ ನಡೆದು ಇಂದಿಗೆ 22 ವರ್ಷಗಳು ಕಳೆದಿವೆ.  ಇದೀಗ ಇದೇ ದಿನ ಇಡೀ ದೇಶವೇ ಮತ್ತೊಂದು ಕರಾಳ ಘಟನೆಗೆ ಸಾಕ್ಷಿಯಾಗಿದೆ. ಇತ್ತೀಚೆಗಷ್ಟೇ ಉದ್ಘಾಟನೆಯಾಗಿದ್ದ ನೂತನ ಸಂಸತ್​ ಭವನದಲ್ಲಿ ಬುಧವಾರ ಭಾರೀ ಭದ್ರತಾ ಲೋಪವಾಗಿದೆ.

ಹೌದು, 2 ಪ್ರತ್ಯೇಕ ಘಟನೆಯಲ್ಲಿ ನಾಲ್ವರು ಅಪರಿಚಿತರು ಸದನದ ಒಳಗೆ ಮತ್ತು ಹೊರಗೆ ಭಯದ ವಾತಾವರಣ ಸೃಷ್ಟಿ ಮಾಡಿರುವ ಘಟನೆ ನಡೆದಿದೆ. ಕಲಾಪ ನಡೆಯುತ್ತಿದ್ದ ವೇಳೆಯೇ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತುಕೊಂಡಿದ್ದ ಇಬ್ಬರು ಯುವಕರು ಸದನದ ಒಳಪ್ರವೇಶಿಸಿ ಸಂಸದರು ಕೂರುವ ಬೆಂಚುಗಳ ಮೇಲೆ ಓಡಾಡಿದ್ದಾರೆ. ಬಳಿಕ ಹಳದಿ ಬಣ್ಣ ಹೊರಸೂಸುವ ವಸ್ತು(ಕಲರ್ ಗ್ಯಾಸ್)ವನ್ನು ಹಿಡಿದು ಸ್ಪೀಕರ್​ ಓಂ ಬಿರ್ಲಾ ಕಚೇರಿಯತ್ತ ನುಗ್ಗಿದ್ದಾರೆ.

ಅಪರಿಚಿತ ವ್ಯಕ್ತಿಗಳ ಈ ನಡೆಯಿಂದ ಭಯಭೀತರಾದ ಸಂಸದರು ದಿಕ್ಕಾಪಾಲಾಗಿ ಓಡಿದ್ದಾರೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.   ನೂತನ ಸಂಸತ್ ಭವನದಲ್ಲಿ ಉಂಟಾದ ಈ ಭದ್ರತಾ ಲೋಪದ ಬಗ್ಗೆ ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ. ಇಬ್ಬರೂ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯಿಂದ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಭಾರೀ ಭದ್ರತಾ ವ್ಯವಸ್ಥೆ ಹೊಂದಿರುವ ಲೋಕಸಭೆಯ ಒಳಗೆ ಅಪರಿಚಿತರು ಏಕಾಏಕಿ ನುಗ್ಗಿ ಈ ರೀತಿ ವರ್ತಿಸಲು ಹೇಗೆ ಸಾಧ್ಯವಾಯಿತು ಅನ್ನೋ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ಪ್ರಥಮ ಬಾರಿಗೆ ಶಾಸಕನಾದ ವ್ಯಕ್ತಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ ಬಿಜೆಪಿ..! ಏಕೆ ಗೊತ್ತೆ..?

ಪ್ರತಾಪ್ ಸಿಂಹ ಹೆಸರಲ್ಲಿ ವಿಸಿಟಿಂಗ್ ಪಾಸ್!

ಮಾಹಿತಿ ಪ್ರಕಾರ ಆರೋಪಿಗಳನ್ನು ಮೈಸೂರು ಮೂಲದ ಇಂಜಿನಿಯರ್​ ಮನೋರಂಜನ್​ ಡಿ ಮತ್ತು ಸಾಗರ್​ ಶರ್ಮಾ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಮೈಸೂರು-ಕೊಡಗು ಸಂಸದ ಪ್ರತಾಪ್​ ಸಿಂಹ ಅವರ ಕಚೇರಿಯಿಂದ ವಿಸಿಟಿಂಗ್ ಪಾಸ್ ಪಡೆದು ಸದನ ಪ್ರವೇಶಿಸಿ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಬಳಿಕ ಆತಂಕ ಸೃಷ್ಟಿಸುವ ಘಟನೆಗೆ ಸಾಕ್ಷಿಯಾಗಿದ್ದಾರೆ. ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಉಚ್ಛಾಟಿತ ಬಿಎಸ್​ಪಿ ಸಂಸದ ಡ್ಯಾನಿಶ್​ ಅಲಿ, ‘ಆರೋಪಿಗಳಿಬ್ಬರು ಸಂಸದ ಪ್ರತಾಪ್​ ಸಿಂಹ ಅವರ ಹೆಸರಿನಲ್ಲಿ ವಿಸಿಟಿಂಗ್ ಪಾಸ್​ ಪಡೆದಿದ್ದಾರೆ ಎಂದು ಹೇಳಿದ್ದಾರೆ.  

ಸಂಸತ್ತಿನ ಹೊರಭಾಗದಲ್ಲಿಯೂ ಪ್ರತಿಭಟನೆ

ಸದನದೊಳಗೆ ಇಬ್ಬರು ಯುವಕರು ಆತಂಕ ಸೃಷ್ಟಿಸುವ ಘಟನೆಗೆ ಸಾಕ್ಷಿಯಾದರೆ, ಅತ್ತ ಸಂಸತ್ತಿನ ಹೊರಭಾಗದಲ್ಲಿ ಓರ್ವ ಪುರುಷ ಮತ್ತು ಮಹಿಳೆ ಹಳದಿ ಬಣ್ಣ ಹೊರಸಸೂಸುವ ವಸ್ತುವನ್ನು ಹಿಡದು ಪ್ರತಿಭಟನೆ ನಡೆಸಿದ್ದಾರೆ. ಈ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಹಾರಾಷ್ಟ್ರದ ಲಾತೂರ್ ನಿವಾಸಿ ಅಮೋಲ್ ಶಿಂಧೆ(25) ಮತ್ತು ಹರಿಯಾಣದ ಹಿಸಾರ್ ನಿವಾಸಿ ನೀಲಂ(25) ಎಂದು ಗುರುತಿಸಲಾಗಿದೆ. ಈ ಪ್ರಕರಣ ಸಂಬಂಧ ಆರೋಪಿಗಳ ವಿಚಾರಣೆ ನಡೆಯುತ್ತಿದೆ.  

ಸ್ಪೀಕರ್ ಓಂ ಬಿರ್ಲಾ ಹೇಳಿದ್ದೇನು..?

ಘಟನೆಯ ಬಗ್ಗೆ ಮಾತನಾಡಿದ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ‘ಶೂನ್ಯ ಸಮಯದ ವೇಳೆ ನಡೆದ ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ದೆಹಲಿ ಪೊಲೀಸರಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇದು ಕೇವಲ ಹೊಗೆ ಎಂಬುದು ತಿಳಿದುಬಂದಿದೆ. ಈ ಹೊಗೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಸದ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಲ್ಲಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಾರೂ ಸಹ ಆತಂಕಪಡುವ ಅಗತ್ಯವಿಲ್ಲ’ವೆಂದು ಹೇಳಿದ್ದಾರೆ.   

ಇದನ್ನೂ ಓದಿ: ಭಜನ್‌ಲಾಲ್‌ ಶರ್ಮಾಗೆ ರಾಜಸ್ಥಾನದ ಸಿಎಂ ಪಟ್ಟ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News