ಕುಶಿ ನಗರ: ಶಾಲಾ ಮಕ್ಕಳಿದ್ದ ಶಾಲಾ ವಾಹನ ಮತ್ತು ರೈಲು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 13 ಮಕ್ಕಳು ಸಾವಿಗೀಡಾದ ದುರ್ಘಟನೆ ಉತ್ತರ ಪ್ರದೇಶದ ಕುಶಿನಗರದಲ್ಲಿ ಇಂದು(ಗುರುವಾರ) ಬೆಳಿಗ್ಗೆ ಸಂಭವಿಸಿದೆ. ಘಟನೆಯಲ್ಲಿ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಥೇವ್-ಕಪಟಂಗಂಜ್ ಪ್ಯಾಸೆಂಜರ್ ರೈಲು (55075) ರೈಲ್ವೆ ಕ್ರಾಸಿಂಗ್ ಹಾದುಹೋಗುವ ಸಂದರ್ಭದಲ್ಲಿ ರೈಲು ಮತ್ತು ಶಾಲಾ ವಾಹನದ ನಡುವೆ ಗುರುವಾರ ಬೆಳಿಗ್ಗೆ ಅಪಘಾತ ಸಂಭವಿಸಿದೆ. ವಾಹನದಲ್ಲಿ ಕನಿಷ್ಠ 25 ಜನರಿದ್ದರು, ಅದರಲ್ಲಿ ಹೆಚ್ಚಾಗಿ ಶಾಲಾ ಮಕ್ಕಳಿದ್ದರು, ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ ಮರಣ ಹೊಂದಿದ ಮಕ್ಕಳು 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರೆಂದು ಹೇಳಲಾಗಿದೆ.
ರೈಲ್ವೆ ಕ್ರಾಸಿಂಗ್ ಬಳಿ ಈ ಘಟನೆ ನಡೆದಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ಆಡಳಿತವನ್ನು ದೂಷಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ವಾಹನವು ಕುಶಿ ನಗರದಲ್ಲಿರುವ ಡಿವೈನ್ ಪಬ್ಲಿಕ್ ಶಾಲೆಗೆ ಸೇರಿದೆ ಎಂದು ತಿಳಿದುಬಂದಿದೆ.
ಘಟನೆಯ ವಿವರಗಳನ್ನು ಕೊಡುತ್ತಾ, ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. "ವ್ಯಾನ್ನಲ್ಲಿ ಸುಮಾರು 25 ಶಾಲಾ ಮಕ್ಕಳು ಇದ್ದರು. ಘಟನೆಯಲ್ಲಿ ವಾಹನದಲ್ಲಿ ಸಾಗುತ್ತಿದ್ದ ಮಕ್ಕಳು ತಮ್ಮ ಶಾಲೆಗೆ ಹೋಗುತ್ತಿದ್ದರು. ಈ ಘಟನೆಯು ರೈಲ್ವೆ ಕ್ರಾಸಿಂಗ್ ಬಳಿ ನಡೆದಿದ್ದು ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ತೀವ್ರ ಸಂತಾಪ ಸೂಚಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಕ್ಕೆ ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ಈ ವಿಷಯದ ಬಗ್ಗೆ ತಕ್ಷಣದ ತನಿಖೆಗೆ ಆದೇಶಿಸಿದ್ದಾರೆ. ಸಂತ್ರಸ್ತರಿಗೆ ಸಂಭಾವ್ಯ ಸಹಾಯ ಮತ್ತು ವೈದ್ಯಕೀಯ ನೆರವು ಒದಗಿಸಲು ಜಿಲ್ಲೆಯ ಆಡಳಿತ ನಿರ್ದೇಶಿಸಿದ್ದಾರೆ.