ನವದೆಹಲಿ: ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ 74 ನೇ ಜನ್ಮದಿನದಂದು ಅವರ ಮಗ ಕಾರ್ತಿ ಚಿದಂಬರಂ, ತಿಹಾರ್ ಜೈಲಿನಲ್ಲಿರುವ ತಮ್ಮ ತಂದೆಗೆ ಪತ್ರ ಬರೆದಿದ್ದಾರೆ.
"ಇಂದು ನಿಮಗೆ 74 ವರ್ಷ, ಆದರೂ '56 ಇಂಚು' ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ನೀವೆಂದೂ ನಿಮ್ಮ ಹುಟ್ಟುಹಬ್ಬವನ್ನು ದೊಡ್ಡದಾಗಿ ಆಚರಿಸಿಕೊಂಡವರಲ್ಲ. ಆದರೂ ಇತ್ತೀಚಿಗೆ ನಿಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬಂದಿದ್ದೇವೆ. ಈ ಬಾರಿಯ ಹುಟ್ಟುಹಬ್ಬ ಎಂದಿನಂತಿಲ್ಲ. ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಮ್ಮೊಂದಿಗೆ ಕೇಕ್ ಕತ್ತರಿಸಲು ನೀವು ಮನೆಗ್ ಬರಬೇಕು ಎಂದು ನಾವು ಆಶಿಸುತ್ತೇವೆ" ಎಂದು ಕಾರ್ತಿ ತನ್ನ ತಂದೆಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ತಮ್ಮ ಸುದೀರ್ಘ ಪತ್ರದುದ್ದಕ್ಕೂ ಕಾರ್ತಿ ಚಿದಂಬರಂ ಅವರು ಮೋದಿ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜಿಡಿಪಿ ಬೆಳವಣಿಗೆ ಬಗ್ಗೆ ಮೋದಿ ಸರ್ಕಾರವನ್ನು ಟೀಕಿಸುವಾಗ ಪಿಯೂಷ್ ಗೋಯಲ್ ಅವರ ಇತ್ತೀಚಿನ ಐನ್ಸ್ಟೈನ್ ಪ್ರತಿಕ್ರಿಯೆಯನ್ನು ಕೆದಕಿರುವ ಕಾರ್ತಿ ಅವರ ಪತ್ರದಲ್ಲಿ ಕಾಶ್ಮೀರ ವಿಷಯದ ಬಗ್ಗೆಯೂ ಉಲ್ಲೇಖವಿದೆ.
1945 ರಲ್ಲಿ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕನಡುಕಥನ್ನಲ್ಲಿ ಜನಿಸಿದ ಮಾಜಿ ಕೇಂದ್ರ ಸಚಿವ ಚಿದಂಬರಂ ಅವರು, ಸದ್ಯ ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸೆಪ್ಟೆಂಬರ್ 19 ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಿಬಿಐ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಸೆಪ್ಟೆಂಬರ್ 23 ರಂದು ಚಿದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.