ಜಗನ್ ಸಿಎಂ ಆಗಲು ಕಾಂಗ್ರೆಸ್ ಹೈಕಮ್ಯಾಂಡ್ ಗೆ 1,500 ಕೋಟಿ ರೂ. ನೀಡಲು ಸಿದ್ಧರಿದ್ದರು: ಫಾರೂಕ್ ಅಬ್ದುಲ್ಲಾ

ವೈ.ಎಸ್.ರಾಜಶೇಖರ ರೆಡ್ಡಿ ನಿಧನದ ಬಳಿಕ ತಮ್ಮ ಬಳಿ ಬಂದಿದ್ದ ಜಗನ್ ಮೋಹನ್ ರೆಡ್ಡಿ, ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಮಾಡುವುದಾದರೆ 1500 ಕೋಟಿ ರೂಪಾಯಿ ನೀಡುವುದಾಗಿ ಹೇಳಿದ್ದರು ಎಂದು ಫಾರೂಕ್ ಅಬ್ದುಲ್ಲಾ ಆರೋಪಿಸಿದ್ದಾರೆ.

Last Updated : Mar 27, 2019, 06:44 AM IST
ಜಗನ್ ಸಿಎಂ ಆಗಲು ಕಾಂಗ್ರೆಸ್ ಹೈಕಮ್ಯಾಂಡ್ ಗೆ 1,500 ಕೋಟಿ ರೂ. ನೀಡಲು ಸಿದ್ಧರಿದ್ದರು: ಫಾರೂಕ್ ಅಬ್ದುಲ್ಲಾ title=

ಕಡಪ: ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಲು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಜಗನ್ ಮೋಹನ್ ರೆಡ್ಡಿ ಅವರು ಈ ಹಿಂದೆ ಕಾಂಗ್ರೆಸ್ ಹೈಕಮ್ಯಾಂಡ್ ಗೆ 1,500 ಕೋಟಿ ರೂ ನೀಡಲು ಸಿದ್ಧರಿದ್ದರು ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಗಂಭೀರ ಆರೋಪ ಮಾಡಿದ್ದಾರೆ.

ಆಂಧ್ರಪ್ರದೇಶದ ಕಡಪದಲ್ಲಿ ಮಂಗಳವಾರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, "ವೈ.ಎಸ್.ರಾಜಶೇಖರ ರೆಡ್ಡಿ ನಿಧನದ ಬಳಿಕ ತಮ್ಮ ಬಳಿ ಬಂದಿದ್ದ ಜಗನ್ ಮೋಹನ್ ರೆಡ್ಡಿ, ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಮಾಡುವುದಾದರೆ 1500 ಕೋಟಿ ರೂಪಾಯಿ ನೀಡುವುದಾಗಿ ಹೇಳಿದ್ದರು" ಎಂದು ಆರೋಪಿಸಿದರು.

ಮುಂದುವರೆದು ಮಾತನಾಡಿದ ಅವರು, ಅಷ್ಟಕ್ಕೂ ಜಗನ್ ಮೋಹನ್ ರೆಡ್ಡಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು? ಭೂಮಿ ಒಳಗೆ ಏನಾದರೂ ನಿಧಿ ಇಟ್ಟುಕೊಂಡಿದ್ದಾರಾ" ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ ಫಾರೂಕ್ ಅಬ್ದುಲ್ಲಾ, ಬಹುಶಃ ಆ ಹಣ ಕೊಳ್ಳೆ ಹೊಡೆದಿರುವುದೇ ಆಗಿರಬೇಕು ಎಂದು ಆರೋಪಿಸಿದರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಈ ರೀತಿ ಗಂಭೀರ ಆರೋಪ ಮಾಡಿರುವ ಫಾರೂಕ್ ಅಬ್ದುಲ್ಲಾ, ಈ ಬಾರಿಗೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಆಂಧ್ರಪ್ರದೇಶದಲ್ಲಿ ಏಪ್ರಿಲ್ 11ರಂದು 175 ವಿಧಾನಸಭೆ ಸ್ಥಾನಗಳಿಗೆ ಹಾಗೂ 25 ಲೋಕಸಭಾ ಸ್ಥಾನಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದ್ದು, ಮೇ 23 ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

Trending News