ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ರೆಡ್ಡಿ ನೇತೃತ್ವದ ಸರ್ಕಾರ ಸರ್ವಾಧಿಕಾರಿ ಆಡಳಿತ ನಡೆಸಿದ್ದು, ಪ್ರಜಾಪ್ರಭುತ್ವವನ್ನೇ ಕೊಲೆ ಮಾಡಿದೆ ಎಂದು ಟಿಡಿಪಿ ಮುಖಂಡ ನಾರಾ ಲೋಕೇಶ್ ಬುಧವಾರ ಟೀಕಿಸಿದ್ದಾರೆ.
ಬುಧವಾರ ಜಗನ್ಮೋಹನ್ ರೆಡ್ಡಿ ಸರಕಾರದ ವಿರುದ್ಧ 'ಚಲೋ ಪಲ್ನಾಡು' ಹೆಸರಿನಲ್ಲಿ ಟಿಡಿಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಆಂಧ್ರ ಪ್ರದೇಶದ ಮಾಜಿ ಸಿಎಂ, ತೆಲುಗು ದೇಶಂ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಮತ್ತು ಅವರ ಪುತ್ರ ಮಾಜಿ ಸಚಿವ ನಾರಾ ಲೋಕೇಶ್ರನ್ನು ಪೊಲೀಸರು ಗೃಹ ಬಂಧನಕ್ಕೆ ತಳ್ಳಿದ್ದು, ಈ ಬಳಿಕ ನಾರಾ ಲೋಕೇಶ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಇದು ಸರ್ವಾಧಿಕಾರಿ ಸರ್ಕಾರ. ತುಘಲಕ್ ನಂತೆ ವರ್ತಿಸುತ್ತಿದೆ. ನಮ್ಮ ಹೋರಾಟವನ್ನು ಪ್ರಜಾಪ್ರಭುತ್ವ ವಿರೋಧಿಗಳ ರೀತಿಯಲ್ಲಿ ನಿಲ್ಲಿಸಲಾಗಿದೆ. ಈ ಸರ್ಕಾರದ 100 ದಿನಗಳ ಆಡಳಿತವನ್ನು ನಾವು ನೋಡಿದ್ದೇವೆ"ಎಂದು ನಾರಾ ಲೋಕೇಶ್ ಹೇಳಿದರು.
ವೈಎಸ್ಆರ್ ಕಾಂಗ್ರೆಸ್ ಪಕ್ಷ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಬಳಿಕ ರಾಜಕೀಯ ಹಿಂಸಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿರುವ ಟಿಡಿಪಿ, ವೈಎಸ್ಆರ್ಸಿಪಿಯ ಕಾರ್ಯಕರ್ತರು ಟಿಡಿಪಿಯ ಎಂಟು ಕಾರ್ಯಕರ್ತರನ್ನು ಹತ್ಯೆ ಮಾಡಿದ್ದು, ಹಲವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದೆ.
"ಆಡಳಿತ ಪಕ್ಷವು ಆಂಧ್ರಪ್ರದೇಶದಾದ್ಯಂತ ನಮ್ಮ ಪಕ್ಷವನ್ನು ಅಂತ್ಯಗೊಳಿಸಲು ಪ್ರಯತ್ನಿಸುತ್ತಿದೆ. ನಾವು ಪ್ರಜಾಪ್ರಭುತ್ವದ ರೀತಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದರೂ ನಮ್ಮನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಇದು ಪ್ರಜಾಪ್ರಭುತ್ವದ ಕೊಲೆ" ಎಂದು ನಾರಾ ಹೇಳಿದರು.