ನವದೆಹಲಿ: ಪಾಕ್ ವಶದಲ್ಲಿರುವ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ವೀಡಿಯೋ ಲಿಂಕ್'ಗಳನ್ನು ಕೂಡಲೇ ಡಿಲೀಟ್ ಮಾಡುವಂತೆ ಭಾರತೀಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಯುಟ್ಯೂಬ್‌ಗೆ ಸೂಚನೆ ನೀಡಿದೆ.
ಪಾಕ್ ವಾಯು ಪಡೆಯ ಮೂರು ಫೈಟರ್ ಜೆಟ್ ವಿಮಾನ ಗಳು ಬುಧವಾರ ಭಾರತೀಯ ವಾಯು ಗಡಿಯನ್ನು ಉಲ್ಲಂಘಿಸಿ ಒಳನುಗ್ಗಿ ಬಂದಾಗ ಅವುಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮಿಗ್ 21 ಫೈಟರ್ ಜೆಟ್ ವಿಮಾನಗಳ ಪೈಕಿ ಒಂದು ವಿಮಾನದ ಪೈಲಟ್ ಆಗಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರು ತಮ್ಮ ವಿಮಾನ ಪತನಗೊಂಡಾಗ ಪಿಓಕೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಆಗ ಪಾಕ್ ಸೇನೆ ಅವರನ್ನು ಬಂಧಿಸಿ ತನ್ನ ವಶಕ್ಕೆ ತೆಗೆದುಕೊಂಡಿತ್ತು.
ಬಳಿಕ ಅಭಿನಂದನ್ ಅವರನ್ನು ಪಾಕ್ ಸೈನಿಕರು ಪ್ರಶ್ನಿಸುತ್ತಿರುವ, ಹೊಡೆಯುತ್ತಿರುವ, ಕಣ್ಣಿಗೆ ಬಟ್ಟೆ ಕಟ್ಟಿ ಪ್ರಶ್ನೆಗಳನ್ನು ಕೇಳುತ್ತಿರುವ ವೀಡಿಯೋಗಳೂ ಸೇರಿದಂತೆ ಅವರ ಹಣೆಯಲ್ಲಿ, ಮೈಯಲ್ಲಿ ರಕ್ತ ಸುರಿಯುತ್ತಿರುವ 9 ವೀಡಿಯೋಗಳನ್ನು ಪಾಕ್ ಬಿಡುಗಡೆ ಮಾಡಿತ್ತು. ಈ ವೀಡಿಯೋಗಳನ್ನು ಯೂಟ್ಯೂಬ್ ನಲ್ಲಿ ಶೇರ್ ಮಾಡಲಾಗಿತ್ತು. ಇದನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿತ್ತು.
ಆದರೆ ಅಭಿನಂದನ್ ಅವರನ್ನು ನಾಳೆ ಬಿಡುಗಡೆ ಮಾಡಲು ಪಾಕ್ ಒಪ್ಪಿದೆ. ಆದರೆ ಅಭಿನಂದನ್ ಅವರ ವಿಡಿಯೋ ಬಿಡುಗಡೆ ಮಾಡುವ ಮೂಲಕ ಅದು ಜಿನೆವಾ ಒಪ್ಪಂದವನ್ನು ಉಲ್ಲಂಘನೆ ಮಾಡಿದೆ ಎಂದು ಭಾರತ ಆರೋಪಿಸಿದ್ದು, ಈ ಕೂಡಲೇ ಒಟ್ಟು 11 ವೀಡಿಯೋಗಳನ್ನು ಡಿಲೀಟ್ ಮಾಡುವಂತೆ ಭಾರತದ ಮಾಹಿತಿ ತಂತ್ರಜ್ಞಾನ ಇಲಾಖೆ ಯೂಟ್ಯೂಬ್'ಗೆ ಸೂಚಿಸಿದೆ.