ನವದೆಹಲಿ: ಲಂಡನ್ನಿನ ಟೆಸ್ಕೋ ಸೂಪರ್ ಮಾರ್ಕೆಟ್'ನಲ್ಲಿ ಕೆಲಸ ಮಾಡುತ್ತಿದ್ದ ಹೈದರಾಬಾದ್ ಮೂಲದ ಯುವಕನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬುಧವಾರ ನಡೆದಿದೆ.
ಕಳೆದ 6 ವರ್ಷಗಳಿಂದ ಲಂಡನ್ನಿನ ಟೆಸ್ಕೋ ಸೂಪರ್ ಮಾರ್ಕೆಟ್ನ ಮಾಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮೊಹಮದ್ ನದೀಮುದ್ದೀನ್ ಎಂಬಾತನನ್ನು ನೆಲಮಳಿಗೆಯ ಕಾರ್ ಪಾರ್ಕಿಂಗ್ ಬಳಿ ಚಾಕುವಿನಿಂದ ಇರಿದ ದುರ್ಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೂಡಲೇ ಅಲ್ಲಿದ್ದವರು ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಈ ಬಗ್ಗೆ ಥೇಮ್ಸ್ ವ್ಯಾಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಸದ್ಯ ನದೀಮುದ್ದೀನ್ ಕುಟುಂಬದ ಸದಸ್ಯರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸಂಪರ್ಕಿಸಿದ್ದು, ಮೃತದೇಹವನ್ನು ಭಾರತಕ್ಕೆ ತರಲು ಸಹಕರಿಸುವಂತೆ ಕೋರಿದ್ದಾರೆ ಎನ್ನಲಾಗಿದೆ.