ಮುಂಬೈ : ಹಿಂದಿ ಹಿರಿಯ ಚಿತ್ರ ನಟಿ ಹಾಗೂ ರಾಜಕಾರಣಿ ಹೇಮಮಾಲಿನಿ ಅವರು, ಮಹಾನಗರದ ಲೋವರ್ ಪರೇಲ್ನ ಕಮಲಾ ಮಿಲ್ಸ್ ಆವರಣದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತಕ್ಕೆ ನಗರದ ಜನಸಂಖ್ಯೆ ಹೆಚ್ಚುತ್ತಿರುವುದು ಮತ್ತು ಭಾರೀ ಸಂಖ್ಯೆಯಲ್ಲಿ ವಲಸಿಗರು ಈ ನಗರದತ್ತ ಹರಿದು ಬರುತ್ತಿರುವುದೇ ಕಾರಣ ಹೇಳಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ಹದಿನಾಲ್ಕು ಅಮಾಯಕ ಜೀವಗಳನ್ನು ಬಲಿ ಪಡೆದಿರುವ ಮುಂಬಯಿಯ ಕಮಲಾ ಮಿಲ್ಸ್ ಅಗ್ನಿ ದುರಂತಕ್ಕೆ ವಲಸಿಗರೇ ಕಾರಣ ಎಂದು ದೂರಿರುವ 65 ವರ್ಷದ ಮಥುರಾ ಕ್ಷೇತ್ರದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು, "ಮುಂಬಯಿ ನಗರಾಡಳಿತವು ಎಲ್ಲ ವಲಸಿರಗರಿಗೆ ಇಲ್ಲಿ ನೆಲೆಸಲು ಅವಕಾಶ ಮಾಡಿಕೊಟ್ಟಿದೆ; ಆದರೆ, ಈ ಮಹಾನಗರದಲ್ಲಿ ಒಂದೇ ಸಮನೆ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಅನುಲಕ್ಷಿಸಿ ನಗರಾಡಳಿತವು ವಲಸಿಗರ ಸಂಖ್ಯೆಯನ್ನು ನಿರ್ಬಂಧಿಸಬೇಕಾಗಿತ್ತು' ಎಂದು ಹೇಳಿದ್ದಾರೆ.
"ಪ್ರತೀ ನಗರಕ್ಕೂ ಜನಸಂಖ್ಯೆಯ ವಿಚಾರದಲ್ಲಿ ಒಂದು ಮಿತಿ ಎಂಬುದು ಇರಲೇಬೇಕು. ಆ ಮಿತಿ ಮೀರಿದ ಸಂದರ್ಭದಲ್ಲಿ ವಲಸಿಗರಿಗೆ ಬೇರೆ ನಗರಕ್ಕೆ ಹೋಗುವಂತೆ ಹೇಳಬೇಕು' ಎಂದು ಹೇಮಾ ಪ್ರತಿಕ್ರಿಯಿಸಿದ್ದಾರೆ.
ಗುರುವಾರ ರಾತ್ರಿ 12.30 ರ ವೇಳೆಗೆ ಕಮ್ಲಾ ಮಿಲ್ ಕಂಪೆನಿಯಲ್ಲಿ ಮೊಸೊಜ್ ಬಿಸ್ಟ್ರೋ ಲೌಂಜ್ನಲ್ಲಿ ಘಟನೆ ನಡೆದಿತ್ತು. ನಂತರ, ಅಗ್ನಿಶಾಮಕ ಯಂತ್ರಗಳು, ನೀರಿನ ಟ್ಯಾಂಕ್ಗಳು ಸೇರಿದಂತೆ ರಕ್ಷಣಾ ಸಿಬ್ಬಂದಿ ತಕ್ಷಣವೇ ಸ್ಥಳವನ್ನು ತಲುಪಿ ಬೆಂಕಿ ನಂದಿಸುವಲ್ಲಿ ಶ್ರಮಿಸಿದರು.
ಈ ಘಟನೆ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಟ್ವೀಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆಯ ಆಳವಾದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬಿಎಂಸಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.