ಗುಜರಾತ್ ಚುನಾವಣೆ ಬಿಜೆಪಿ-ಕಾಂಗ್ರೇಸ್ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆ...

2012 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆದ್ದುಕೊಂಡಿತು. 

Last Updated : Dec 14, 2017, 09:12 AM IST
  • ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸೇರಿದಂತೆ ಗಣ್ಯರು ಇಂದು ತಮ್ಮ ಮತ ಚಲಾಯಿಸಲಿದ್ದಾರೆ
  • 2012 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆದ್ದುಕೊಂಡಿತು.
  • 2012 ರ ಚುನಾವಣೆಯಲ್ಲಿ ಕಾಂಗ್ರೆಸ್ 61 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.
ಗುಜರಾತ್ ಚುನಾವಣೆ ಬಿಜೆಪಿ-ಕಾಂಗ್ರೇಸ್ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆ... title=
Pic: ANI

ಅಹ್ಮದಾಬಾದ್: ಇಡೀ ದೇಶಾದ್ಯಂತ ಕುತೂಹಲ ಮೂಡಿಸಿರುವ ಗುಜರಾತ್ ಚುನಾವಣೆಯ ಎರಡನೇ ಹಂತದ ಮತದಾನ ಇಂದು ನಡೆಯಲಿದೆ. 14 ಜಿಲ್ಲೆಗಳಲ್ಲಿ 93 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸೇರಿದಂತೆ ಗಣ್ಯರು ಇಂದು ತಮ್ಮ ಮತ ಚಲಾಯಿಸಲಿದ್ದಾರೆ. ಈ ಚುನಾವಣೆಯು ಬಿಜೆಪಿ ಹಾಗೂ ಕಾಂಗ್ರೇಸ್ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. 

ಗುಜರಾತ್ ಚುನಾವಣೆಯ ಎರಡನೇ ಹಂತದಲ್ಲಿ ನಡೆಯುತ್ತಿರುವ ಮತದಾನದಲ್ಲಿ 851 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 2.22 ಕೋಟಿ ಜನ ಮತದಾನ ಮಾಡಲು ಅರ್ಹರಾಗಿದ್ದಾರೆ.  ಕಳೆದ 22 ವರ್ಷಗಳಿಂದ ಅಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಒಂದೆಡೆಯಾದರೆ, ಮತ್ತೊಂದೆಡೆ ಹೇಗಾದರೂ ಈ ಬಾರಿ ಗುಜರಾತ್ ನಲ್ಲಿ ತನ್ನ ಅಧಿಕಾರ ಸ್ಥಾಪಿಸಲು ಕಾಂಗ್ರೇಸ್  ಹರ ಸಾಹಸ ಮಾಡುತ್ತಿದೆ.

ಅದರಲ್ಲೂ ಬಿಜೆಪಿಗೆ ಗುಜರಾತ್ ಚುನಾವಣೆ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಕಾರಣ ಗುಜರಾತ್ನಲ್ಲಿ 2001 ರಿಂದ 2014ರವಗೆ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಸ್ವಂತ ನಾಡು ಗುಜರಾತ್. ಒಂದು ವೇಳೆ ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲದಿದ್ದರೆ ಅದು ಮುಂಬರುವ ಇತರ ರಾಜ್ಯಗಳ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ. ಇನ್ನು ಎರಡು ದಶಕಗಳಿಂದ ಗುಜರಾತ್ ನಲ್ಲಿ ಅಧಿಕಾರ ಸ್ಥಾಪಿಸಲು ಸಾಧ್ಯವಾಗದ ಗುಜರಾತ್ನಲ್ಲಿ ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿ ಯುವಕರು ಮತ್ತು ಒಬಿಸಿ ಸಮುದಾಯದ ಮನವೊಲಿಸಿ ಈ ಚುನಾವಣೆಯಲ್ಲಿ ತಾವು ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸವನ್ನು ಹೊಂದಿದ್ದಾರೆ. ಕೆಲವೇ ರಾಜ್ಯಗಳಲ್ಲಿ ಮಾತ್ರ ಅಧಿಕಾರ ಹೊಂದಿರುವ ಕಾಂಗ್ರೇಸ್ ಗೆ ಒಂದು ವೇಳೆ ಗುಜರಾತ್ ಜನತೆ ಕಾಂಗ್ರೇಸ್ ಕೈ ಹಿಡಿದರೆ ಕಾಂಗ್ರೇಸ್ಗೆ ಸಂಜೀವಿನಿ ದೊರೆತಂತಾಗುತ್ತದೆ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಇದರ ಛಾಯೆ ಗೋಚರಿಸಲಿದೆ.

2012 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆದ್ದುಕೊಂಡಿತು. ಕಾಂಗ್ರೆಸ್ 61 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಈಗಾಗಲೇ ಮತದಾನ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, 2017ರ ಈ ಚುನಾವಣೆಯಲ್ಲಿ ಗುಜರಾತ್ ಜನತೆ ಯಾರ ಕೈಹಿಡಿಯಲಿದ್ದಾರೆ ಎಂಬುದು ಡಿ. 18ರಂದು ತಿಳಿಯಲಿದೆ.

Trending News