Hindu Temple: ಇಲ್ಲಿ ಪ್ರತಿವರ್ಷ ಸಾವಿರಾರು ಹೊಸ ವಾಚ್‌ಗಳನ್ನು ನದಿಯಲ್ಲಿ ಎಸೆಯಲಾಗುತ್ತದೆ!

ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ವಿಚಿತ್ರವಾದ ದೇವಾಲಯವಿದೆ. ಈ ದೇವಾಲಯದಲ್ಲಿ ಯಾವುದೇ ದೇವರ ವಿಗ್ರಹವಾಗಲಿ ಅಥವಾ ಯಾವುದೇ ಪಂಡಿತ, ಅರ್ಚಕ ಅಥವಾ ಋಷಿ-ಸಂತರು ನೆಲೆಸಿಲ್ಲ. ಆದರೂ ಜನರು ದೂರದೂರುಗಳಿಂದ ಇಲ್ಲಿಗೆ ಬಂದು ತಮ್ಮ ಇಷ್ಟಾರ್ಥಗಳನ್ನು ಪೂರೈಸುವಂತೆ ದೇವರಲ್ಲಿ ಬೇಡಿಕೊಳ್ಳುತ್ತಾರೆ.

Written by - Puttaraj K Alur | Last Updated : Mar 8, 2022, 04:44 PM IST
  • ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿರುವ ಸಾಗಸ್ ಬಾವ್ಜಿ ದೇವಸ್ಥಾನವು ತುಂಬಾ ವಿಚಿತ್ರವಾಗಿದೆ
  • ಈ ದೇವಾಲಯಕ್ಕೆ ಬರುವ ಸಾವಿರಾರು ಭಕ್ತರು ದೇವರಿಗೆ ಗಡಿಯಾಗಳನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ
  • ಪ್ರತಿ ವರ್ಷ ಸಂಗ್ರಹವಾಗುವ ರಾಶಿ ರಾಶಿ ಕೈಗಡಿಯಾರಗಳನ್ನು ಸಮೀಪದ ನದಿಯಲ್ಲಿ ಎಸೆಯಲಾಗುತ್ತದೆ
Hindu Temple: ಇಲ್ಲಿ ಪ್ರತಿವರ್ಷ ಸಾವಿರಾರು ಹೊಸ ವಾಚ್‌ಗಳನ್ನು ನದಿಯಲ್ಲಿ ಎಸೆಯಲಾಗುತ್ತದೆ!  title=
ಮಂದಸೌರ್ ಜಿಲ್ಲೆಯಲ್ಲಿ ವಿಚಿತ್ರವಾದ ದೇವಾಲಯವಿದೆ

ನವದೆಹಲಿ: ಭಾರತವು ಅನೇಕ ವಿಚಿತ್ರ ಮತ್ತು ನಿಗೂಢ ದೇವಾಲಯಗಳ ತವರೂರು. ಕೆಲ ದೇವಾಲಯಗಳಲ್ಲಿ ವಿಚಿತ್ರ ಸಂಪ್ರದಾಯಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹೆಚ್ಚಿನ ಜನರು ಈ ದೇವಾಲಯಗಳಿಗೆ ವಿವಿಧ ರೀತಿಯ ವಸ್ತುಗಳನ್ನು ಅರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ಇಷ್ಟಾರ್ಥಗಳು ಈಡೇರುತ್ತವೆಂದು ಅವರು ನಂಬಿದ್ದಾರೆ. ಹೀಗಾಗಿ ಚಿತ್ರ-ವಿಚಿತ್ರ ಸಂಪ್ರದಾಯಗಳನ್ನು ಅನೇಕ ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದಾರೆ.

ಇಂದು ನಾವು ನಿಮಗೆ ಮಧ್ಯಪ್ರದೇಶ(Madhya Pradesh)ದ ಮಂದಸೌರ್‌ನಲ್ಲಿರುವ ಅಂತಹ ವಿಚಿತ್ರ ದೇವಾಲಯದ ಬಗ್ಗೆ ತಿಳಿಸುತ್ತೇವೆ. ಇದು ತುಂಬಾ ವಿಚಿತ್ರ ಸಂಪ್ರದಾಯ ಹೊಂದಿರುವ ದೇವಸ್ಥಾನವಾಗಿದೆ. ಏಕೆಂದರೆ ಈ ದೇವಾಲಯದಲ್ಲಿ ಯಾವುದೇ ದೇವತೆ ಅಥವಾ ಯಾವುದೇ ಪಂಡಿತ-ಪುರೋಹಿತರು ಕುಳಿತುಕೊಳ್ಳುವುದಿಲ್ಲ. ಆದರೂ ಜನರು ಇಲ್ಲಿಗೆ ಬಂದು ತಲೆಬಾಗಿ ನಮಿಸುತ್ತಾ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ಈ ದೇವಾಲಯದ ಹೆಸರು ಸಾಗಸ್ ಬಾವ್ಜಿ ದೇವಾಲಯ(Sagas bavji Hindu Temple).

ಇದನ್ನೂ ಓದಿ: ಮನೆಗೆ ಬೆಂಕಿ ತಗುಲಿ ಮಗು ಸೇರಿ ಒಂದೇ ಕುಟುಂಬದ ಐವರು ಸಜೀವ ದಹನ

ದಾರಿ ತಪ್ಪಿದ ಜನರಿಗೆ ದಾರಿ ತೋರುವ ದೇವರು   

ಸಾಗಸ್ ಬಾವ್ಜಿ(Sagas bavji) ಎಂದರೆ ಯಕ್ಷ. ಸಾಗಸ್ ಬಾವ್ಜಿಯನ್ನು ಧರ್ಮಗ್ರಂಥಗಳಲ್ಲಿ ಯಕ್ಷ ಎಂದು ಕರೆಯಲಾಗಿದೆ ಎಂದು ಸ್ಥಳೀಯ ಜನರು ನಂಬುತ್ತಾರೆ. ಯಕ್ಷನು ಹಣವನ್ನು ಕಾಪಾಡುತ್ತಾರೆಂಬ ನಂಬಿಕೆ ಇಲ್ಲಿದೆ. ಇಲ್ಲಿ ಯಕ್ಷರು ಶಾರೀರಿಕ ರೂಪದಲ್ಲಿ ಕಾಣಿಸಿಕೊಂಡು ದಾರಿ ತಪ್ಪಿದ ಜನರಿಗೆ ದಾರಿ ತೋರಿಸುತ್ತಾರೆ ಎನ್ನುತ್ತಾರೆ ಇಲ್ಲಿನ ಜನ. ಆದ್ದರಿಂದಲೇ ದೂರದೂರುಗಳಿಂದ ಇಲ್ಲಿಗೆ ಬರುವ ಜನರಿಗೆ ಸರಿಯಾದ ದಿಕ್ಕು ಸಿಗುತ್ತದೆ ಮತ್ತು  ಜೀವನದ ದುಃಖಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.  

ಉಡುಗೊರೆಯಾಗಿ ಕೈಗಡಿಯಾರ ನೀಡುವ ಜನರು   

ಈ ದೇವಾಲಯ(Sagas Bavji Temple)ಕ್ಕೆ ಸಂಬಂಧಿಸಿದ ಕುತೂಹಲಕಾರಿ ಸಂಗತಿಗಳು ಇಲ್ಲಿಗೇ ಮುಗಿಯುವುದಿಲ್ಲ. ಈ ದೇವಾಲಯಕ್ಕೆ ಬರುವ ಭಕ್ತರು ನೀಡುವ ಕಾಣಿಕೆಗಳು ತುಂಬಾ ವಿಚಿತ್ರವಾಗಿವೆ. ಜನರು ಇಲ್ಲಿಗೆ ಬಂದು ಸಾಗಸ್ ಬಾವ್ಜಿಗೆ ಗಡಿಯಾರ ಮತ್ತು ವಾಚ್ ಗಳನ್ನು ಕಾಣಿಕೆಯಾಗಿ ಸಮರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ಅವರ ಕೆಟ್ಟ ದಿನಗಳು ದೂರವಾಗುತ್ತವೆ ಮತ್ತು ಜೀವನದಲ್ಲಿ ಸಂತೋಷ ಬರುತ್ತದೆ ಎಂಬ ನಂಬಿಕೆ ಇದೆ. ಈ ದೇವಾಲಯದಲ್ಲಿ ಗಡಿಯಾರಗಳ ರಾಶಿಯೇ ಇರುತ್ತದೆ. ಅಷ್ಟೇ ಅಲ್ಲ ಇಲ್ಲಿಂದ ವಾಚ್ ಕದ್ದೊಯ್ದರೆ ಆ ಸಮಯದಿಂದ ಆತನ ಕೆಟ್ಟ ಕಾಲ ಶುರುವಾಗುತ್ತದೆ ಎಂದೂ ಹೇಳಲಾಗುತ್ತದೆ. ಆದುದರಿಂದಲೇ ಯಾರೂ ಇಲ್ಲಿನ ವಾಚ್ ಗಳನ್ನು ಅಪ್ಪಿತಪ್ಪಿಯೂ ಮನೆಗೆ ತೆಗೆದುಕೊಂಡು ಹೋಗುವುದಿಲ್ಲ.

ಇದನ್ನೂ ಓದಿ: Russia-Ukraine Crisis: ಬನ್ನಿ.. ನಮ್ಮನ್ನು ರಕ್ಷಿಸಿ ಎಂದಿದ್ದ‘ಜಾಗ್ವಾರ್’ ಕುಮಾರ್ ಈಗ ಬರೋಲ್ಲ ಅಂತಿದ್ದಾನೆ!

ಗಡಿಯಾರಗಳನ್ನು ನದಿಯಲ್ಲಿ ಎಸೆಯಲಾಗುತ್ತದೆ

ಗಡಿಯಾರಗಳ ರಾಶಿಯಿಂದ ದೇವಾಲಯ(Hindu Temple) ತುಂಬಿದ್ದಾಗ ಅವುಗಳನ್ನು ಹತ್ತಿರದ ನದಿಗೆ ಎಸೆಯಲಾಗುತ್ತದೆ. ಈ ದೇವಾಲಯದಲ್ಲಿ ಗಡಿಯಾರಗಳ ರಾಶಿ ಸಂಗ್ರಹವಾದರೂ ಇಲ್ಲಿ ಎಂದಿಗೂ ಬೀಗ ಹಾಕಲಾಗಿಲ್ಲ. ಒಮ್ಮೆ ಒಬ್ಬ ವ್ಯಕ್ತಿ ಇಲ್ಲಿಂದ 5 ವಾಚ್‌ಗಳನ್ನು ಕದ್ದಿದ್ದನಂತೆ. ನಂತರ ಆತ ತನ್ನ ಕಣ್ಣುಗಳನ್ನೇ ಕಳೆದುಕೊಂಡಿದ್ದನಂತೆ. ಬಳಿಕ ಆತ ದೇವಾಲಯಕ್ಕೆ 10 ವಾಚ್‌ಗಳನ್ನು ಸಮರ್ಪಿಸಿದಾಗ ವಾಪಸ್ ಆತನಿಗೆ ಕಣ್ಣುಗಳು ಬಂದವಂತೆ. ಸಂತಾನ ಭಾಗ್ಯದಿಂದ ಹಿಡಿದು ಕಳೆದುಹೋದ ವಸ್ತುಗಳನ್ನು ವಾಪಸ್ ಪಡೆಯುವವರೆಗೆ ಇಲ್ಲಿನ ದೇವರು ಬೇಡಿಕೊಂಡ ವರವನ್ನು ದಯಪಾಲಿಸುತ್ತಾನೆಂಬ ನಂಬಿಕೆ ಇಲ್ಲಿನ ಜನರಲ್ಲಿದೆ.

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News