ಲೋಕಸಭೆ ಚುನಾವಣೆ ಜೊತೆಗೆ ವಿಧಾನಸಭಾ ಚುನಾವಣೆ ಸಾಧ್ಯವಿಲ್ಲ: ಚುನಾವಣಾ ಆಯೋಗ

ಒಂದೇ ಬಾರಿಗೆ ಲೋಕಸಭೆ ಹಾಗೂ 11 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸಲು ಸಾಧ್ಯವಿಲ್ಲ- ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಓ.ಪಿ. ರಾವತ್

Last Updated : Aug 14, 2018, 01:20 PM IST
ಲೋಕಸಭೆ ಚುನಾವಣೆ ಜೊತೆಗೆ ವಿಧಾನಸಭಾ ಚುನಾವಣೆ ಸಾಧ್ಯವಿಲ್ಲ: ಚುನಾವಣಾ ಆಯೋಗ title=

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯ ಜೊತೆಗೆ 11 ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ನಡೆಸುವಂತೆ ಬಿಜೆಪಿ ಮಾಡಿದ್ದ ಮನವಿಯನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ. 

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೇ 11 ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಆಯೋಗಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಓಂ ಪ್ರಕಾಶ್ ರಾವತ್, ಈಗಿನ ಪರಿಸ್ಥಿತಿಯಲ್ಲಿ ಲೋಕಸಭೆಯ ಜೊತೆಗೆ ವಿಧಾನಸಭಾ ಚುನಾವಣೆಯನ್ನು ನಡೆಸಲು ಸಾಧ್ಯವಿಲ್ಲ. ಈ ರೀತಿ ಮಾಡಲು ಸಾಕಷ್ಟು ಪ್ರಕ್ರಿಯೆ ನಡೆಸಬೇಕಾದ ಅಗತ್ಯವಿದೆ. ಅಲ್ಲದೆ ಒಂದೇ ಬಾರಿಗೆ ಲೋಕಸಭೆ ಹಾಗೂ 11 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸಲು ಬೇಕಾದಷ್ಟು ವಿವಿ ಪ್ಯಾಟ್ ಗಳು ನಮ್ಮ ಬಳಿ ಇಲ್ಲ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್ ಮತ್ತು ಮಿಜೋರಾಂಗಳಲ್ಲಿ ಸೆಪ್ಟೆಂಬರ್ ನಿಂದ ಡಿಸೆಂಬರ್ ಅವಧಿಯಲ್ಲಿ ಚುನಾವಣೆ ನಡೆಯಬೇಕಿದೆ. ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳ ವಿಧಾನಸಭೆಯ ಕಾಲಾವಧಿ 2019 ರ ಜನವರಿಯಲ್ಲಿ ಮುಕ್ತಾಯವಾಗಲಿದೆ. ಅಲ್ಲದೆ ಏಪ್ರಿಲ್-ಮೇ ತಿಂಗಳಿನಲ್ಲಿ ಆಂಧ್ರಪ್ರದೇಶ, ಒಡಿಶಾ, ತೆಲಂಗಾಣಗಳಲ್ಲಿ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆ ಸಹ ಇದೇ ಅವಧಿಯಲ್ಲಿ ನಡೆಯಲಿರುವುದರಿಂದ ಈ ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಲೋಕಸಭಾ ಚುನಾವಣೆಯ ಒಟ್ಟಿಗೆ ನಡೆಸಬೇಕು. ಇದರಿಂದ ಹಣ ಹಾಗೂ ಸಮಯ ವ್ಯರ್ಥವಾಗುವುದನ್ನು ತಡೆಯಬಹುದು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.

Trending News