ನವದೆಹಲಿ: ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ವಿರುದ್ದ ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ಚಾರ್ಜ್ ಶೀಟ್ ದಾಖಲಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಆರೋಪಪಟ್ಟಿ ಸಲ್ಲಿಸಿರುವ ಇಡಿ ಚಿದಂಬರಂ ಆರೋಪಿ ನಂಬರ್ ಒನ್ ಎಂದು ಉಲ್ಲೇಖಿಸಿದೆ. ಅವರ ಜತೆಗೆ ಇತರ ಎಂಟು ಮಂದಿ ಪ್ರಮುಖರು ಮತ್ತು ಸಂಸ್ಥೆಗಳ ಹೆಸರುಗಳನ್ನೂ ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಚಿದಂಬರಂನ ಅವರ ಎಫ್ಐಪಿಬಿ ಅಕ್ರಮ ಅನುಮೋದನೆ ಕುರಿತಂತೆ ಇದರಲ್ಲಿ ವಿವರಗಳಿದೆ. 2006 ರ ಮಾರ್ಚ್ ನಲ್ಲಿ ಎಫ್ಐಪಿಬಿ ಅನುಮೋದನೆಯನ್ನು ನೀಡಿದ್ದಾರೆ ಮಾರಿಶಸ್ ಮೂಲದ ಗ್ಲೋಬಲ್ ಕಮ್ಯುನಿಕೇಷನ್ ಸರ್ವಿಸಸ್ ಹೋಲ್ಡಿಂಗ್ಸ್ ಲಿಮಿಟೆಡ್ನ ಅಂಗಸಂಸ್ಥೆ ಮ್ಯಾಕ್ಸಿಸ್ ಗೆ ಅನುಮೋದನೆ ದೊರಕಿದೆ ಎಂದು ಇಡಿ ಆರೋಪಿಸಿದೆ. ವಿಶೇಷ ಕೋರ್ಟ್ ನ್ಯಾಯಾಧೀಶ ಓ.ಪಿ.ಸೈನಿ ಅವರಿಗೆ ಈ ಆರೋಪ ಪಟ್ಟಿ ಸಲ್ಲಿಸಲಾಗಿದೆ. ನ.26ರಂದು ಅದರ ಪರಿಶೀಲನೆ ನಡೆಯಲಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಎರಡು ಆರೋಪಪಟ್ಟಿ ಸಲ್ಲಿಕೆ ಆಗಿದ್ದರೂ, ಚಿದಂಬರಂ ಹೆಸರು ಉಲ್ಲೇಖವಾಗಿರಲಿಲ್ಲ. ಪುತ್ರ ಕಾರ್ತಿ ಚಿದಂಬರಂ, ಮಾಜಿ ಸಚಿವ ದಯಾನಿಧಿ ಮಾರನ್ ಅವರ ಹೆಸರು ಇತ್ತು. ಇದೀಗ ಪಿ. ಚಿದಂಬರಂ ಅವರನ್ನೇ ಮೊದಲ ಆರೋಪಿ ಎಂದು ಕೇಂದ್ರ ತನಿಖಾ ಸಂಸ್ಥೆ ಬೊಟ್ಟು ಮಾಡಿದ್ದು, ಚಿದಂಬರಂಗೆ ಕಾನೂನು ಸಂಕಷ್ಟ ಎದುರಾಗಿದೆ. ಒಂದು ವೇಳೆ ಅವರ ವಿರುದ್ಧದ ಆರೋಪ ಸಾಬೀತಾದರೆ ದಂಡ ಸಹಿತ ಏಳು ವರ್ಷಗಳ ಜೈಲು ಶಿಕ್ಷೆಯಾಗಲಿದೆ.