300ಕ್ಕೂ ಹೆಚ್ಚು ಸ್ಥಾನ ಗೆದ್ದು ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಲಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

ರಾಹುಲ್ ಗಾಂಧಿ ಅವರು ದೇಶಾದ್ಯಂತ ಭಾರತ ಜೋಡೋ ಯಾತ್ರೆ ಮೂಲಕ ನಿರುದ್ಯೋಗ ಹಾಗೂ ಬೆಲೆ ಏರಿಕೆ ಜನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದು ಅರಿತರು. ಈ ಸಮಸ್ಯೆಗಳಿಂದ ತತ್ತರಿಸಿರುವ ರಾಜ್ಯದ ಜನರಿಗೆ ನೆರವಾಗಬೇಕು ಎಂದು ನಾವು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Written by - Prashobh Devanahalli | Edited by - Krishna N K | Last Updated : May 16, 2024, 05:40 PM IST
    • ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ
    • ಇಂಡಿಯಾ ಮೈತ್ರಿಕೂಟ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸಲಿದೆ
    • ಲೋಕಸಭಾ ಚುನಾವಣೆ ಫಲಿತಾಂಶಕ್ಕೂ ಮುನ್ನ ಭವಿಷ್ಯ ನುಡಿ ಡಿ.ಕೆ. ಶಿವಕುಮಾರ್‌
 300ಕ್ಕೂ ಹೆಚ್ಚು ಸ್ಥಾನ ಗೆದ್ದು ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಲಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ title=

ಲಖನೌ : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭವಿಷ್ಯ ನುಡಿದರು.

ಲಖನೌನಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ರಾಹುಲ್ ಗಾಂಧಿ ಅವರು ದೇಶಾದ್ಯಂತ ಭಾರತ ಜೋಡೋ ಯಾತ್ರೆ ಮೂಲಕ ನಿರುದ್ಯೋಗ ಹಾಗೂ ಬೆಲೆ ಏರಿಕೆ ಜನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದು ಅರಿತರು. ಈ ಸಮಸ್ಯೆಗಳಿಂದ ತತ್ತರಿಸಿರುವ ರಾಜ್ಯದ ಜನರಿಗೆ ನೆರವಾಗಬೇಕು ಎಂದು ನಾವು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆವು. 

ಇದನ್ನೂ ಓದಿ:ಪೊಲೀಸ್‌ ಇಲಾಖೆ ಸತ್ತಿದೆಯೋ, ಬದುಕಿದೆಯೋ ತಿಳಿಯುತ್ತಿಲ್ಲ : ಆರ್.ಅಶೋಕ ಆಕ್ರೋಶ

ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡುತ್ತಿದ್ದೇವೆ. ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭಿಸಿದೆವು. ಅನ್ನಭಾಗ್ಯ ಯೋಜನೆ ಮೂಲಕ ಪ್ರತಿ ಬಡ ಕುಟುಂಬಗಳಿಗೆ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡುತ್ತಿದ್ದೇವೆ.  ನಿರುದ್ಯೋಗಿ ಯುವಕರಿಗೆ ಯುವನಿಧಿ ಯೋಜನೆ ಘೋಷಿಸಿದೆವು.

ಕರ್ನಾಟಕದಲ್ಲಿ 1.20 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಮೂಲಕ 2 ಸಾವಿರ ಹಣ ಪಡೆಯುತ್ತಿದ್ದಾರೆ. 1.50 ಕೋಟಿ ಮನೆಗಳಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನಲ್ಲಿ ಇಂಡಿಯಾ ಮೈತ್ರಿಕೂಟ ರಚನೆಯಾಯಿತು. ತೆಲಂಗಾಣ ಚುನಾವಣೆದಲ್ಲೂ 6 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದು, ಆ ಪೈಕಿ ಬಹುತೇಕ ಜಾರಿಯಾಗಿವೆ. ಕೆಲವು ಜಾರಿ ಪ್ರಕ್ರಿಯೆಯಲ್ಲಿವೆ.

ಬಿಜೆಪಿ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ: ಬಿಜೆಪಿ 10 ವರ್ಷಗಳ ಹಿಂದೆ ಕಪ್ಪು ಹಣ ತಂದು ಜನರ ಖಾತೆಗೆ 15 ಲಕ್ಷ ಹಾಕುತ್ತೇವೆ, ರೈತರ ಆದಾಯ ಡಬಲ್ ಮಾಡುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿತ್ತು. ಆದರೆ ಅವರು ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ. ಕರ್ನಾಟಕದಲ್ಲಿ 6.5 ಕೋಟಿ ಜನಸಂಖ್ಯೆ ಇದ್ದು, ನಮ್ಮ ರಾಜ್ಯದ ಬಜೆಟ್ ಗಾತ್ರ 3.80 ಲಕ್ಷ ಕೋಟಿ ಇದೆ. ಆ ಪೈಕಿ 52 ಸಾವಿರ ಕೋಟಿ ರೂ. ಅನುದಾನವನ್ನು ಗ್ಯಾರಂಟಿ ಯೋಜನೆಗಳ ಜಾರಿಗೆ ಮೀಸಲಿಟ್ಟಿದ್ದೇವೆ. ಇನ್ನು 1.20 ಲಕ್ಷ ಕೋಟಿಯಷ್ಟು ಹಣವನ್ನು ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಟ್ಟಿದ್ದೇವೆ. 

ಇದನ್ನೂ ಓದಿ:ಅಂಜಲಿ ಕೊಲೆಗೆ ಪೊಲೀಸರೇ ಕಾರಣ, ಪೊಲೀಸರನ್ನು ರಾಜಕೀಯ ವಿರೋಧಿಗಳ ಧಮನಕ್ಕೆ ಬಳಕೆ: ಬಸವರಾಜ ಬೊಮ್ಮಾಯಿ

ಬಿಜೆಪಿ ಕೇವಲ ಭಾವನಾತ್ಮಕ ರಾಜಕೀಯ ಮಾಡುತ್ತಿದೆ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಜನಸಾಮಾನ್ಯರ ಹಸಿವು ನೀಗಿಸಲು, ಅವರ ಸಂಕಷ್ಟಗಳಿಗೆ ಪರಿಹಾರ ನೀಡಲು ಇಂತಹ ಒಂದೇ ಒಂದು ಯೋಜನೆ ನೀಡಿದ್ದೀರಾ ಎಂದು ಪ್ರಧಾನಮಂತ್ರಿಗಳು, ಅವರ ಪಕ್ಷದ ನಾಯಕರು ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳನ್ನು ಕೇಳಬಯಸುತ್ತೇನೆ. 

ಯುಪಿಎ ಅವಧಿಯಲ್ಲಿ ಹಸಿವು ನೀಗಿಸಲು ಆಹಾರ ಭದ್ರತಾ ಕಾಯ್ದೆ, ನಿರುದ್ಯೋಗ ಸಮಸ್ಯೆ ನಿವಾರಿಸಲು ನರೇಗಾ, ಎಲ್ಲರಿಗೂ ಶಿಕ್ಷಣ ಸಿಗಲು ಶೈಕ್ಷಣಿಕ ಹಕ್ಕು, ಮಾಹಿತಿ ಹಕ್ಕು ಜಾರಿ ಮಾಡಲಾಗಿತ್ತು. ಇಂತಹ ಯಾವುದಾದರೂ ಒಂದು ಯೋಜನೆಯನ್ನು ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಕೊಟ್ಟಿದೆಯೇ? ಅದು ಒಂದು ಯೋಜನೆ ನೀಡಿದ್ದರೂ ನಾವು ಜನರ ಮುಂದೆ ಹೋಗಿ ಮತ ಕೇಳುವ ಪ್ರಮೇಯವೇ ಇರುತ್ತಿರಲಿಲ್ಲ. ಜನರ ಕಷ್ಟಗಳಿಗೆ ಪರಿಹಾರ ನೀಡಲು ಕೇಂದ್ರ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ಕಾಂಗ್ರೆಸ್ ಗ್ಯಾರಂಟಿ ಜಾರಿಯಾಗಲಿವೆ: ಕಾಂಗ್ರೆಸ್ ಐದು ನ್ಯಾಯ ಯೋಜನೆಗಳ ಮೂಲಕ ಒಟ್ಟಾರೆ 25 ಗ್ಯಾರಂಟಿಗಳನ್ನು ಪ್ರಕಟಿಸಿದ್ದು, ಮಹಾಲಕ್ಷ್ಮಿ ಯೋಜನೆ ಮೂಲಕ ವಾರ್ಷಿಕ 1 ಲಕ್ಷ, ನಿರುದ್ಯೋಗಿ ಯುವಕರಿಗೆ ವಾರ್ಷಿಕ ಒಂದು ಲಕ್ಷ ಶಿಷ್ಯ ವೇತನ ಹಾಗೂ ತರಬೇತಿ, ರೈತರ ಸಾಲಮನ್ನಾ ಹಾಗೂ ಸ್ವಾಮಿನಾಥನ್ ಆಯೋಗದಂತೆ ಕನಿಷ್ಠ ಬೆಂಬಲ ಬೆಲೆ, ನರೇಗಾ ಕೂಲಿ 400 ರೂ.ಗೆ ಏರಿಕೆ, ನಗರ ಪ್ರದೇಶದಲ್ಲಿ ಉದ್ಯೋಗ ಖಾತ್ರಿ, 25 ಲಕ್ಷ ವರೆಗಿನ ಆರೋಗ್ಯ ವಿಮೆ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ:ಎಸ್‌ಎಸ್‌ಎಲ್‌ಸಿ ಬಾಲಕಿ ಹತ್ಯೆ ಪ್ರಕರಣ: ವಿಶೇಷ ನ್ಯಾಯಾಲಯ ತೆರೆಯಲು ಕ್ರಮ

ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರು ಗ್ಯಾರಂಟಿ ಕಾರ್ಡಿಗೆ ಸಹಿ ಹಾಕಿದ್ದು, ನಾವು ಪ್ರಣಾಳಿಕೆಯಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲಿದ್ದೇವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಮಾಜದ ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ. ನಾವು ಬಸವಣ್ಣನ ನಾಡಿನಿಂದ ಬಂದಿದ್ದು, ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ ಎಂದರು. 

ಮೋದಿ ಅವರು ಮಂಗಳಸೂತ್ರದ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ. ಅವರು ಅಧಿಕಾರಕ್ಕೆ ಬರುವ ಮುನ್ನ ದೇಶದಲ್ಲಿ 10 ಗ್ರಾಂ ಚಿನ್ನದ ಬೆಲೆ 25 ಸಾವಿರ ಇತ್ತು. ಈಗ 10 ವರ್ಷಗಳ ನಂತರ ಅದು 75 ಸಾವಿರಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಮಹಿಳೆಯರು ಮಂಗಳಸೂತ್ರ ಮಾಡಿಸಿಕೊಳ್ಳಲು ಪರದಾಡುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಮಂತ್ರಿಗಳ ಹೇಳಿಕೆ ನಿಜಕ್ಕೂ ಖಂಡನೀಯ.

ಭಾವನಾತ್ಮಕ ವಿಚಾರವಾಗಿ ಬಿಜೆಪಿ ರಾಜಕೀಯ: ಉತ್ತರ ಪ್ರದೇಶದಲ್ಲಿ 6 ಸಾವಿರ ಹುದ್ದೆಗಳ ನೇಮಕಾತಿಗೆ 60 ಲಕ್ಷ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ. ನಿರುದ್ಯೋಗ ಸಮಸ್ಯೆಗೆ ಇದೇ ದೊಡ್ಡ ಸಾಕ್ಷಿಯಾಗಿದೆ. ಈ ರಾಜ್ಯದಿಂದ ಯುವಕರು ಉದ್ಯೋಗ ಹುಡುಕಿಕೊಂಡು ಬೆಂಗಳೂರು ಹಾಗೂ ಇತರೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಉತ್ತರ ಪ್ರದೇಶ ಅತ್ಯುತ್ತಮ ರಾಜ್ಯ. ಆದರೆ ಈ ರಾಜ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ವಿಫಲವಾಗಿದ್ದಾರೆ. ಕೇವಲ ಭಾವನಾತ್ಮಕ ವಿಚಾರಗಳ ಮೂಲಕ ರಾಜಕೀಯ ಮಾಡಲಾಗುತ್ತಿದೆ. ಕರ್ನಾಟಕದ ಸಂಸದರಾದ ಅನಂತಕುಮಾರ್ ಹೆಗಡೆ ಅವರು ಬಿಜೆಪಿ ಪಕ್ಷಕ್ಕೆ 400 ಸೀಟುಗಳನ್ನು ಕೊಟ್ಟರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಮೋದಿ ಅವರು ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದು ಜಾಹೀರಾತು ನೀಡುತ್ತಿದ್ದಾರೆ. ಸಂವಿಧಾನದ ಬಗ್ಗೆ ಅವರಿಗೆ ಬದ್ಧತೆ ಇದ್ದರೆ ಅವರು ಸಂವಿಧಾನ ಬದಲಾವಣೆ ವಿಚಾರ ಪ್ರಸ್ತಾಪ ಮಾಡಿದ ನಾಯಕರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಿಲ್ಲ ಯಾಕೆ? ಎಂದು ಪ್ರಶ್ನೆ ಮಾಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News