ಚೆನ್ನೈ: ಸರಿಯಾಗಿ ಮೇವು ಸೇವಿಸದೆ ಸಗಣಿ ಮತ್ತು ಮೂತ್ರ ವಿಸರ್ಜನೆಯಲ್ಲಿ ತೊಂದರೆ ಅನುಭವಿಸುತ್ತಿದ್ದ ಆರು ವರ್ಷದ ಹಸುವಿನ ಹೊಟ್ಟೆಯಲ್ಲಿ ಆಶ್ಚರ್ಯಕರ ವಸ್ತುಗಳು ಪತ್ತೆಯಾಗಿವೆ.
ಆರು ವರ್ಷದ ಹಸುವಿನ ಹೊಟ್ಟೆಯಿಂದ ಆಹಾರವನ್ನು ಪ್ಯಾಕ್ ಮಾಡಲು ಬಳಸುವ 52 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ, ಸಿರಿಂಜ್ ಸೂಜಿಗಳು, ಉಗುರುಗಳು, ನಾಣ್ಯಗಳು ಮತ್ತು ಅಲ್ಯೂಮಿನಿಯಂ ಫಾಯಿಲ್ ಅನ್ನು ಮದ್ರಾಸ್ ಪಶುವೈದ್ಯಕೀಯ ಆಸ್ಪತ್ರೆಯ ವೈದ್ಯರು ತೆಗೆದಿದ್ದಾರೆ. ಹಸುವಿಗೆ ಯಶಸ್ವೀ ವೈದ್ಯಕೀಯ ಚಿಕಿತ್ಸೆ ನೀಡಿದ ವೈದ್ಯರ ಕೆಲಸವನ್ನು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಶ್ಲಾಘಿಸಿದ್ದಾರೆ.
ಸರಿಯಾಗಿ ಮೇವು ಸೇವಿಸದೆ ಸಗಣಿ ಮತ್ತು ಮೂತ್ರ ವಿಸರ್ಜನೆಯಲ್ಲಿ ತೊಂದರೆ ಅನುಭವಿಸುತ್ತಿದ್ದ ಹಸುವನ್ನು ಅದರ ಮಾಲೀಕ ಮುನಿರತ್ನಂ ಅವರು ಆಸ್ಪತ್ರೆಗೆ ಕರೆತಂದಿದ್ದರು.
ಹಸುವಿಗೆ ಪ್ರಾಥಮಿಕವಾಗಿ ಕೆಲವು ಪರೀಕ್ಷೆಗಳನ್ನು ಮಾಡಿದ ವೈದ್ಯರು, ಬಳಿಕ ಎಕ್ಸರೆ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸಿದ್ದಾರೆ. ಇದರ ನಂತರ, ಹಸುವಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಇರುವುದನ್ನು ಕಂಡುಕೊಂಡ ವೈದ್ಯರು ಅದನ್ನು ಆಪರೇಷನ್ ಮೂಲಕ ತೆಗೆದುಹಾಕಲು ನಿರ್ಧರಿಸಿದರು. ಡಾ.ಬಾಲಾ ಸುಬ್ರಮಣ್ಯಂ ಅವರ ನೇತೃತ್ವದ ವೈದ್ಯರ ತಂಡ ಹಸುವಿಗೆ ಶಸ್ತ್ರ ಚಿಕಿತ್ಸೆ ನಡೆಸಿತು. ಶಸ್ತ್ರಚಿಕಿತ್ಸೆ ಸಹಾಯಕರಾದ ಪ್ರೊ.ಶಿವಶಂಕರ್ ಮತ್ತು ಡಾ.ವೇಲ್ವಾನ್ ಮತ್ತು ಇತರ ಹಿರಿಯ ಶಸ್ತ್ರಚಿಕಿತ್ಸಕರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಈ ಶಸ್ತ್ರಚಿಕಿತ್ಸೆಯು ಸುಮಾರು ಐದಾರು ಗಂಟೆಗಳ ಕಾಲ ಅಂದರೆ ಬೆಳಿಗ್ಗೆ ಹನ್ನೊಂದು ಗಂಟೆಯಿಂದ ಸಂಜೆ ನಾಲ್ಕು ರವರೆಗೆ ನಡೆಯಿತು. ಕಳೆದ ಎರಡು ವರ್ಷಗಳಲ್ಲಿ ಈ ಎಲ್ಲಾ ತ್ಯಾಜ್ಯವನ್ನು ಹಸು ತಿನ್ನುತ್ತಿದೆ. ಹಸುವಿನ ಜೀರ್ಣಾಂಗ ವ್ಯವಸ್ಥೆಯು ಸುಮಾರು 75% ಪ್ಲಾಸ್ಟಿಕ್ ತ್ಯಾಜ್ಯವಾಗಿತ್ತು ಎಂದು ವೈದ್ಯರು ಹೇಳಿದ್ದಾರೆ. ಹಸು ಈಗ ಆರೋಗ್ಯಕರವಾಗಿದೆ ಮತ್ತು ಸರಿಯಾಗಿ ಮೇವನ್ನೂ ಸೇವಿಸುತ್ತಿದೆ ಎನ್ನಲಾಗಿದೆ.
ಚಿಕಿತ್ಸೆಯ ಸಮಯದಲ್ಲಿ ಹಸುವಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಕಂಡುಬಂದಾಗ ವೈದ್ಯರು ಅದನ್ನು ಆಪರೇಷನ್ ಮೂಲಕ ತೆಗೆದುಹಾಕಲು ನಿರ್ಧರಿಸಿದರು. ಹಸು ಈಗ ಆರೋಗ್ಯಕರವಾಗಿದೆ ಮತ್ತು ಸರಿಯಾಗಿ ಮೇವು ತಿನ್ನುತ್ತಿದೆ. ಪ್ಲಾಸ್ಟಿಕ್ ಪರಿಸರಕ್ಕೆ ಮಾತ್ರವಲ್ಲ, ಪ್ರಾಣಿಗಳಿಗೂ ಹಾನಿಕಾರಕವಾಗಿದೆ. ಹಾಗಾಗಿ ಪ್ಲಾಸ್ಟಿಕ್ ಬಳಕೆ ಕೈಬಿಡಬೇಕು ಎಂದು ಸಿಎಂ ಪಳನಿಸ್ವಾಮಿ ಜನತೆಯಲ್ಲಿ ಮನವಿ ಮಾಡಿದ್ದಾರೆ.