ಹೈದರಾಬಾದ್ ಅವಳಿ ಬಾಂಬ್ ಸ್ಫೋಟ ಪ್ರಕರಣ; ಇಬ್ಬರಿಗೆ ಗಲ್ಲು

ಆರೋಪಿಗಳಾದ ಅಕ್ಬರ್ ಇಸ್ಮಾಯಿಲ್ ಚೌಧರಿ ಹಾಗೂ ಅನೀಕ್ ಶಫೀಕ್ ಸೈಯದ್​ನನ್ನು ಅಪರಾಧಿ ಎಂದು ಘೋಷಿಸಿದ್ದ ನ್ಯಾಯಾಲಯ, ಶಿಕ್ಷೆ ಪ್ರಮಾಣವನ್ನು ಸೆಪ್ಟೆಂಬರ್ 10ರಂದು ಪ್ರಕಟಿಸುವುದಾಗಿ  ತಿಳಿಸಿತ್ತು.

Last Updated : Sep 10, 2018, 08:51 PM IST
ಹೈದರಾಬಾದ್ ಅವಳಿ ಬಾಂಬ್ ಸ್ಫೋಟ ಪ್ರಕರಣ; ಇಬ್ಬರಿಗೆ ಗಲ್ಲು title=

ಹೈದರಾಬಾದ್​: 2007ರಲ್ಲಿ ಹೈದರಾಬಾದ್'ನಲ್ಲಿ ನಡೆದ ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಾದ ಅಕ್ಬರ್ ಇಸ್ಮಾಯಿಲ್ ಚೌಧರಿ ಮತ್ತು ಅನೀಕ್ ಶಫೀಕ್ ಸೈಯದ್​ಗೆ ಗಲ್ಲು ಶಿಕ್ಷೆ ವಿಧಿಸಲಾಗಿದ್ದು, ಮತ್ತೋರ್ವ ಅಪರಾಧಿ ತಾರಿಖ್​ ಅಂಜುಮ್​ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಅವಳಿ ಬಾಂಬ್ ಸ್ಫೋಟ ಪ್ರಕರಣದ ಕುರಿತು ವಿಚಾರಣೆ ನಡೆಸಿದ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ(ವಿಶೇಷ ಎನ್​ಐಎ) ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿಸಿದೆ. 

ಸೆಪ್ಟೆಂಬರ್ 4 ರಂದು ಈ ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಬ್ಬರು ಆರೋಪಿಗಳಾದ ಅಕ್ಬರ್ ಇಸ್ಮಾಯಿಲ್ ಚೌಧರಿ ಹಾಗೂ ಅನೀಕ್ ಶಫೀಕ್ ಸೈಯದ್​ನನ್ನು ಅಪರಾಧಿ ಎಂದು ಘೋಷಿಸಿದ್ದ ನ್ಯಾಯಾಲಯ, ಶಿಕ್ಷೆ ಪ್ರಮಾಣವನ್ನು ಸೆಪ್ಟೆಂಬರ್ 10ರಂದು ಪ್ರಕಟಿಸುವುದಾಗಿ  ತಿಳಿಸಿತ್ತು.

ಸ್ಫೋಟ ಪ್ರಕರಣದಲ್ಲಿ ಒಟ್ಟು ಐವರನ್ನು ಬಂಧಿಸಲಾಗಿತ್ತು. ಇವರಲ್ಲಿ ಫರೂಕ್ ಶರ್ಫುದ್ದೀನ್ ತರ್ಕಶ್ ಹಾಗೂ ಮೊಹಮ್ಮದ್ ಸಾದಿಕ್ ಇಸ್ರಾಸ್ ಅಹ್ಮದ್ ಶೈಕ್ ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿತ್ತು. ಅಪರಾಧಿಗಳಿಗೆ ಆಶ್ರಯ ನೀಡಿದ ಆರೋಪ ಎದುರಿಸುತ್ತಿದ್ದ ಐದನೇ ಆರೋಪಿ ತಾರಿಖ್​ ಅಂಜುಮ್​ ಸಂಬಂಧಿತ ತೀರ್ಪನ್ನು ಸೆ. 10 ರಂದು ಘೋಷಿಸುವುದಾಗಿ ನ್ಯಾಯಾಧೀಶರು ತಿಳಿಸಿದ್ದರು. ಇಂದು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 

2007ರಲ್ಲಿ ಹೈದರಾಬಾದ್​ ನಗರದ ಎರಡು ಸ್ಥಳಗಳಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಒಂದೆಡೆ 32 ಮಂದಿ ಮೃತಪಟ್ಟರೆ, ಮತ್ತೊಂದೆಡೆ 11 ಮಂದಿ ಸಾವನ್ನಪ್ಪಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು. ತೆಲಂಗಾಣ ಪೊಲೀಸ್​ ಇಲಾಖೆಯ ದಿ ಕೌಂಟರ್​ ಆಫ್​ ಇಂಟಲಿಜೆನ್ಸ್​ ತಂಡವು ಈ ಪ್ರಕರಣವನ್ನು ತನಿಖೆ ನಡೆಸಿತ್ತು.
 

Trending News