ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಲು ಇಚ್ಚಿಸುವ ದಂಪತಿಗಳಿಗೆ ಸಿಎಂ ಪ್ರೋತ್ಸಾಹ!

'ಹೆಚ್ಚು ಮಕ್ಕಳಿಗೆ ಜನ್ಮ ನೀಡಿ ರಾಜ್ಯವನ್ನು ಯಂಗ್ ಆಗಿರಿಸಿ' ಎಂಬ ಹೇಳಿಕೆಯ ಮೂಲಕ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಲು ಇಚ್ಛಿಸುವವರಿಗೆ ಸಿಎಂ ಪ್ರೋತ್ಸಾಹ ನೀಡಿದ್ದಾರೆ. 

Last Updated : Dec 29, 2018, 05:55 PM IST
ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಲು ಇಚ್ಚಿಸುವ ದಂಪತಿಗಳಿಗೆ ಸಿಎಂ ಪ್ರೋತ್ಸಾಹ! title=

ನವದೆಹಲಿ: ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಲು ಸಿದ್ಧರಿರುವ ದಂಪತಿಗಳಿಗೆ ಮುಖ್ಯಮಂತ್ರಿಯೊಬ್ಬರು ಪ್ರೋತ್ಸಾಹ ನೀಡಿದ್ದಾರೆ. ಅವರು ನಮ್ಮ ಕರ್ನಾಟಕದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಂದು ನೀವೇನಾದರೂ ಭಾವಿಸಿದ್ದರೆ ಖಂಡಿತಾ ತಪ್ಪು. ಈ ಪ್ರೋತ್ಸಾಹ ನೀಡಿರುವುದು ನೆರೆಯ ರಾಜ್ಯ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು!

'ಹೆಚ್ಚು ಮಕ್ಕಳಿಗೆ ಜನ್ಮ ನೀಡಿ ರಾಜ್ಯವನ್ನು ಯಂಗ್ ಆಗಿರಿಸಿ' ಎಂಬ ಹೇಳಿಕೆಯ ಮೂಲಕ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಲು ಇಚ್ಛಿಸುವವರಿಗೆ ಸಿಎಂ ಪ್ರೋತ್ಸಾಹ ನೀಡಿದ್ದಾರೆ. ಅಲ್ಲದೆ, ಇಬ್ಬರಿಗಿಂತ ಹೆಚ್ಹು ಮಕ್ಕಳನ್ನು ಹೊಂದಿರುವವರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ನಿಯಮವನ್ನು ತೆರವುಗೊಳಿಸಿದ್ದಾರೆ. 

15ನೇ ಹಣಕಾಸು ಆಯೋಗವು ಜನಸಂಖ್ಯಾ ಆಧಾರದ ಮೇಲೆ ವಿಸ್ತರಿಸುವ ಲಾಭಾಂಶಗಳಿಂದ ರಾಜ್ಯ ವಂಚಿತವಾಗಬಾರದು ಎಂಬ ಉದ್ದೇಶದಿಂದ ಸಿಎಂ ಈ ಹೇಳಿಕೆ ನೀಡಿದ್ದಾರೆ. 

ಮಾನವ ಸಂಪನ್ಮೂಲ ಅಭಿವೃದ್ಧಿಯ ಬಗ್ಗೆ ಶ್ವೇತಪತ್ರ ಹೊರಡಿಸುವ ಸಂದರ್ಭದಲ್ಲಿ ಮಾತನಾಡಿದ ನಾಯ್ಡು,  ಕಳೆದ 10 ವರ್ಷಗಳಲ್ಲಿ ರಾಜ್ಯದ ಜನಸಂಖ್ಯೆ ಶೇ.1.6ರಷ್ಟು ಕುಸಿತವಾಗಿದೆ. ಹಾಗಾಗಿ ಜನಸಂಖ್ಯೆಯ ಸಮತೋಲನವನ್ನು ಸೂಚಿಸುವ ಅಂಶಗಳನ್ನು ಸರಿದುಗಿಸಲು ಇದು ಸೂಕ್ತ ಸಮಯ ಎಂದು ಹೇಳುವ ಮೂಲಕ ಜನಸಂಖ್ಯೆಯನ್ನು ಉತ್ತೇಜಿಸುವ ನೀತಿಯನ್ನು ಪರಿಚಯಿಸುವ ಬಗ್ಗೆ ಸುಳಿವು ನೀಡಿದರು. 

ರಾಜ್ಯದ ಒಟ್ಟು ಜನಸಂಖ್ಯೆಯ ಶೇ.50ರಷ್ಟು ಭಾಗ 25 ವರ್ಷದೊಳಗಿನ ಯುವಕರು ಇದ್ದಾರೆ. ಹಾಗಾಗಿ ಯುವಜನರ ಪ್ರಾತಿನಿಧ್ಯವನ್ನು ಹೆಚ್ಚಿಸುವ ಮೂಲಕ ರಾಜ್ಯವನ್ನು ಯಂಗ್ ಆಗಿರಿಸುವ ಅಗತ್ಯವಿದೆ. ಜನಸಂಖ್ಯೆ ನಿಯಂತ್ರಿಸಲು ಸರ್ಕಾರ ಹಮ್ಮಿಕೊಂಡಿರುವ ಕುಟುಂಬ ಯೋಜನಾ ಕ್ರಮಗಳ ಅನುಷ್ಠಾನದಿಂದಾಗಿ ಕಡಿಮೆ ಜನನ ದರಗಳ ಕಾರಣದಿಂದ ಜನಸಂಖ್ಯೆ ಬೆಳವಣಿಗೆಯಲ್ಲಿ ಕುಸಿತವಾಗಿದೆ. ಹೀಗಾಗಿ ರಾಜ್ಯ ಸರಕಾರವು ಶಿಶು ಮರಣ ಪ್ರಮಾಣವನ್ನು ನಿಯಮಿತವಾಗಿ ಗಮನಿಸುತ್ತಿದ್ದು, 2014ರಲ್ಲಿ 1000 ಕ್ಕೆ 37 ಇದ್ದ ಶಿಶು ಮರಣ ಪ್ರಮಾಣ, 2018ರಲ್ಲಿ 1000ಕ್ಕೆ 10.51ಕ್ಕೆ ಇಳಿದಿದೆ ಎಂದು ನಾಯ್ಡು ಹೇಳಿದರು.

2011ರ ಜನಗಣತಿ ಪ್ರಕಾರ ಒಟ್ಟು 8.46 ಕೋಟಿ ಜನಸಂಖ್ಯೆ ಹೊಂದುವ ಮೂಲಕ ಆಂಧ್ರಪ್ರದೇಶ ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ 10ನೇ ರಾಜ್ಯವಾಗಿದೆ. ಆಗಿನ್ನೂ ತೆಲಂಗಾಣ ಆಂಧ್ರಪ್ರದೇಶದಿಂದ ಪ್ರತ್ಯೇಕವಾಗಿರಲಿಲ್ಲ. 

Trending News