ನವದೆಹಲಿ: ಕರೋನವೈರಸ್ ಬಗ್ಗೆ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಮಂಗಳವಾರ (ಮಾರ್ಚ್ 24) ರಾತ್ರಿ 12 ಗಂಟೆಯಿಂದ ಜಾರಿಗೆ ಬರುವಂತೆ ಇಡೀ ದೇಶದಲ್ಲಿ ಲಾಕ್ಡೌನ್(LOCKDOWN) ಘೋಷಿಸಿದ್ದಾರೆ. ಇದು ಒಂದು ರೀತಿಯಲ್ಲಿ ಕರ್ಫ್ಯೂ ಆಗಿದೆ ಎಂದು ಪ್ರಧಾನಿ ಹೇಳಿದರು. ಇದು ಸಾರ್ವಜನಿಕ ಕರ್ಫ್ಯೂಗಿಂತ ಹೆಚ್ಚು ಕಟ್ಟುನಿಟ್ಟಾಗಿದೆ. ಕರೋನಾ ವಿರುದ್ಧ ಹೋರಾಡಲು ತೆಗೆದುಕೊಂಡ ಈ ಹೆಜ್ಜೆ ಬಹಳ ಅವಶ್ಯಕ. ನಿಮ್ಮ ಜೀವವನ್ನು ಉಳಿಸಲು, ನಿಮ್ಮ ಕುಟುಂಬವನ್ನು ಉಳಿಸುವುದು ಭಾರತ ಸರ್ಕಾರದ, ದೇಶದ ಪ್ರತಿಯೊಂದು ರಾಜ್ಯ ಸರ್ಕಾರದ, ಪ್ರತಿ ಸ್ಥಳೀಯ ಸಂಸ್ಥೆಯ ದೊಡ್ಡ ಆದ್ಯತೆಯಾಗಿದೆ ಎಂದವರು ತಿಳಿಸಿದರು.
ಇದರ ನಂತರ, ಗೃಹ ಸಚಿವ ಅಮಿತ್ ಶಾ (Amit Shah) ಅವರು ದೇಶದಲ್ಲಿ ಅಗತ್ಯ ವಸ್ತುಗಳ ಕೊರತೆಯಾಗುವುದಿಲ್ಲ ಎಂದು ಇಡೀ ದೇಶವಾಸಿಗಳಿಗೆ ಭರವಸೆ ನೀಡಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಅಮಿತ್ ಶಾ, 'ಲಾಕ್ ಡೌನ್ ಸಮಯದಲ್ಲಿ ದೇಶದಲ್ಲಿ ಅಗತ್ಯ ವಸ್ತುಗಳ ಕೊರತೆಯಾಗುವುದಿಲ್ಲ ಎಂದು ನಾನು ಎಲ್ಲಾ ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ. ಕೇಂದ್ರ ಸರ್ಕಾರ, ಎಲ್ಲಾ ರಾಜ್ಯ ಸರ್ಕಾರಗಳ ಜೊತೆಗೆ ಇದಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಯಾರೂ ಭಯಪಡಬೇಕಾಗಿಲ್ಲ, ಈ ಹೋರಾಟದಲ್ಲಿ ಇಡೀ ದೇಶ ಒಟ್ಟಾಗಿದೆ' ಎಂದು ಧೈರ್ಯ ತುಂಬಿದ್ದಾರೆ.
मैं समस्त देशवासियों को आश्वस्त करता हूँ कि लॉकडाउन के समय देश में आवश्यक चीजों की कोई कमी नहीं होगी।
केंद्र सरकार सभी राज्य सरकारों के साथ मिलकर इसके लिए पर्याप्त प्रयास कर रही है।
किसी को भी घबराने की ज़रूरत नहीं है, इस लड़ाई में पूरा देश एक साथ है। https://t.co/4n0JCsTuZb
— Amit Shah (@AmitShah) March 24, 2020
ಪ್ರತಿಯೊಬ್ಬ ಭಾರತೀಯನೂ ಜನತಾ ಕರ್ಫ್ಯೂ ಅನುಸರಿಸಿದ್ದಾರೆ:
ಈ ಮೊದಲು ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, "ಕರೋನಾ ಜಾಗತಿಕ ಸಾಂಕ್ರಾಮಿಕ ರೋಗದ ಬಗ್ಗೆ ಮಾತನಾಡಲು ನಾನು ಮತ್ತೊಮ್ಮೆ ನಿಮ್ಮ ನಡುವೆ ಬಂದಿದ್ದೇನೆ" ಎಂದು ಹೇಳಿದರು. ಮಾರ್ಚ್ 22 ರಂದು ಜನತಾ ಕರ್ಫ್ಯೂ (Janata Curfew) ನಿರ್ಣಯದ ಸಾಧನೆಗಾಗಿ ಪ್ರತಿಯೊಬ್ಬ ಭಾರತೀಯನು ಸಂಪೂರ್ಣ ಜವಾಬ್ದಾರಿಯೊಂದಿಗೆ ಕೊಡುಗೆ ನೀಡಿದ್ದಾನೆ. ಒಂದು ದಿನದ ಜನತಾ ಕರ್ಫ್ಯೂನೊಂದಿಗೆ, ದೇಶವು ಬಿಕ್ಕಟ್ಟಿನಲ್ಲಿದ್ದಾಗ, ಮಾನವೀಯತೆಯ ಮೇಲೆ ಬಿಕ್ಕಟ್ಟು ಬಂದಾಗ, ನಾವೆಲ್ಲರೂ ಒಟ್ಟಾಗಿ ಹೇಗೆ ಅದರ ವಿರುದ್ಧ ಹೋರಾಡುತ್ತೇವೆ ಎಂದು ಭಾರತ ತೋರಿಸಿದೆ ಎಂದು ತಿಳಿಸಿದರು.
ಸಾಮಾಜಿಕ ಅಂತರದಿಂದಷ್ಟೇ ಬಚಾವ್ ಆಗಲು ಸಾಧ್ಯ:
ಕರೋನವೈರಸ್ (Coronavirus) ಜಾಗತಿಕ ಸಾಂಕ್ರಾಮಿಕ ರೋಗದ ಬಗ್ಗೆ ನೀವು ಇಡೀ ಪ್ರಪಂಚದ ಪರಿಸ್ಥಿತಿಯನ್ನು ಸುದ್ದಿಗಳ ಮೂಲಕ ಕೇಳುತ್ತಿದ್ದೀರಿ ಮತ್ತು ಅದನ್ನು ವೀಕ್ಷಿಸುತ್ತಿದ್ದೀರಿ. ಈ ಸಾಂಕ್ರಾಮಿಕ ರೋಗವು ವಿಶ್ವದ ಅತ್ಯಂತ ಸಮರ್ಥ ರಾಷ್ಟ್ರಗಳನ್ನು ಸಹ ಹೇಗೆ ಸಂಪೂರ್ಣವಾಗಿ ನಾಶಪಡಿಸಿದೆ ಎಂಬುದನ್ನು ನೀವು ನೋಡುತ್ತಿದ್ದೀರಿ. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯ ಎಂಬ ತಪ್ಪು ಕಲ್ಪನೆಯಲ್ಲಿ ಕೆಲವರು ಇದ್ದಾರೆ. ಈ ರೀತಿ ಯೋಚಿಸುವುದು ಸರಿಯಲ್ಲ. ಸಾಮಾಜಿಕ ದೂರವು ಪ್ರತಿಯೊಬ್ಬ ನಾಗರಿಕನಿಗೂ, ಪ್ರತಿ ಕುಟುಂಬಕ್ಕೂ, ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಆಗಿದೆ. ಕಳೆದ ಎರಡು ದಿನಗಳಿಂದ ದೇಶದ ಹಲವು ಭಾಗಗಳಲ್ಲಿ ಲಾಕ್ಡೌನ್ ಮಾಡಲಾಗಿದೆ. ರಾಜ್ಯ ಸರ್ಕಾರದ ಈ ಪ್ರಯತ್ನಗಳನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ಇಡೀ ದೇಶಕ್ಕೆ ಸಾಮಾಜಿಕ ದೂರವಿರುವುದು ಮುಖ್ಯ. ಕೆಲವು ಜನರ ನಿರ್ಲಕ್ಷ್ಯವು ನಿಮ್ಮ ದೇಶ ಮತ್ತು ಸಮಾಜವನ್ನು ಬಹಳ ತೊಂದರೆಗೆ ಸಿಲುಕಿಸುತ್ತದೆ ಎಂದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಮಹತ್ವವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು.
ಕರೋನಾ ಎಂದರೆ ಯಾರೂ ರಸ್ತೆಗೆ ಬರಬೇಡಿ:
ಕರೋನಾ COVID-19 ಸೋಂಕಿತ ವ್ಯಕ್ತಿಯು ಸಂಪೂರ್ಣವಾಗಿ ಆರೋಗ್ಯವಂತನಾಗಿ ಕಾಣುತ್ತಾನೆ ಎಂದು ಪಿಎಂ ಮೋದಿ ಹೇಳಿದರು. ಆದ್ದರಿಂದ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ನಿಮ್ಮ ಮನೆಗಳಲ್ಲಿ ಉಳಿಯಿರಿ. ಕೆಲ ಜನರು ಈ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ನವೀನ ರೀತಿಯಲ್ಲಿ ಹೇಳುತ್ತಿದ್ದಾರೆ. ನನಗೂ ಕೂಡ ಬ್ಯಾನರ್ ಇಷ್ಟವಾಗಿದೆ ಎಂದು ತಮ್ಮ ಭಾಷಣದ ವೇಳೆ ಬ್ಯಾನರ್ ಪ್ರದರ್ಶಿಸಿದ ಪ್ರಧಾನಿ ನರೇಂದ್ರ ಮೋದಿ ಕರೋನಾ ಎಂದರೆ ಕ-ಕೋಯಿ (ಯಾರೂ) ರೋ-ರೋಡ್ ಪರ್(ರಸ್ತೆಗೆ) ನಾ- ನಾ ಆಯೇ(ಬರಬೇಡಿ) ಎಂದು ನವೀನ ರೀತಿಯಲ್ಲಿ ತಿಲಿಸಲಾಗುತ್ತಿದೆ. ಇದನ್ನು ನೀವೂ ಅರ್ಥ ಮಾಡಿಕೊಳ್ಳಿ, ಎಲ್ಲರೂ ಮನೆಯಲ್ಲಿಯೇ ಇರಿ ಯಾರೂ ರಸ್ತೆಗೆ ಇಳಿಯಬೇಡಿ ಎಂದು ಕರೆ ನೀಡಿದರು.
15 ಸಾವಿರ ಕೋಟಿಗಳ ಬಜೆಟ್ ಘೋಷಣೆ:
'ಈ ಜಾಗತಿಕ ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆ ಮಾಡಲು ಭಾರತ ಸರ್ಕಾರ ನಿರಂತರವಾಗಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ದೇಶದ ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸಲು ಕೇಂದ್ರ ಸರ್ಕಾರ 15 ಸಾವಿರ ಕೋಟಿ ಬಜೆಟ್ ಘೋಷಿಸಿದೆ. ದೇಶದ ಖಾಸಗಿ ವಲಯವೂ ಈ ವೇಳೆಯಲ್ಲಿ ದೇಶವಾಸಿಗಳೊಂದಿಗೆ ನಿಂತಿದೆ. ಖಾಸಗಿ ಲ್ಯಾಬ್ಗಳು ಮತ್ತು ಆಸ್ಪತ್ರೆಗಳು ಸರ್ಕಾರದೊಂದಿಗೆ ಕೆಲಸ ಮಾಡಲು ಮುಂದೆ ಬರುತ್ತಿವೆ ಎಂದವರು ತಿಳಿಸಿದರು.