Coronavirus:ಭಾರತದ ಆರ್ಥಿಕತೆಗೆ ಅತಿ ದೊಡ್ಡ ಪೆಟ್ಟು, GDP ದರ ಶೇ.2.5ಕ್ಕೆ ಕುಸಿಯಲಿದೆ ಎಂದ Moody's

ಭಾರತದ ಆರ್ಥಿಕ ವೃದ್ಧಿ ದರದ ಕುರಿತು ವರದಿ ಪ್ರಕಟಿಸಿರುವ Moody's, ವರ್ಷ 2020ರಲ್ಲಿ ಭಾರತದ GDP ಶೇ.2.5ಕ್ಕೆ ಕುಸಿಯಲಿದೆ ಎಂದು ಹೇಳಿದೆ. ಕೊರೊನಾ ವೈರಸ್ ಪ್ರಭಾವದಿಂದ ಜಾಗತಿಕ ಆರ್ಥಿಕತೆಗೆ ಬಲವಾದ ಪೆಟ್ಟು ಬೀಳಲಿದೆ ಎಂದು ಹೇಳಿದೆ.

Last Updated : Mar 27, 2020, 07:31 PM IST
Coronavirus:ಭಾರತದ ಆರ್ಥಿಕತೆಗೆ ಅತಿ ದೊಡ್ಡ ಪೆಟ್ಟು, GDP ದರ ಶೇ.2.5ಕ್ಕೆ ಕುಸಿಯಲಿದೆ ಎಂದ Moody's  title=

ನವದೆಹಲಿ: ಜಾಗತಿಕ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಆಗಿರುವ Moody's ಇನ್ವೆಸ್ಟ್ಮೆಂಟ್ ಸರ್ವಿಸಸ್ ಕ್ಯಾಲೆಂಡರ್ ವರ್ಷ 2020ರಲ್ಲಿ ತಾನು ಈ ಮೊದಲು ಮಂಡಿಸಿದ್ದ ಭಾರತದ ಆರ್ಥಿಕ ವೃದ್ಧಿ ದರವನ್ನು ಶೇ..2.5ಕ್ಕೆ ಇಳಿಕೆ ಮಾಡಿದೆ. ಇದಕ್ಕೂ ಮೊದಲು ಸಂಸ್ಥೆ 2020ರಲ್ಲಿ ಭಾರತದ ಆರ್ಥಿಕ ವೃದ್ಧಿ ದರ ಶೇ.5.3 ರಷ್ಟು ಇರಲಿದೆ ಎಂದು ಅಂದಾಜಿಸಿತ್ತು.

ಕೊರೊನಾ ವೈರಸ್ ನಿಂದ ಉಂಟಾಗಿರುವ ಸಂಕಷ್ಟದ ಕುರಿತು ಹೇಳಿಕೆ ನೀಡಿರುವ ಮೂಡಿಸ್, ಈ ಸಂಕಷ್ಟ ಜಾಗತಿಕ ಆರ್ಥಿಕತೆಗೆ ಕಂಡರಿಯದ ಪೆಟ್ಟು ನೀಡಲಿದೆ ಎಂದು ಹೇಳಿದೆ. ಕೊರೊನಾ ವೈರಸ್ ಹಾಗೂ ಅದರ ಪ್ರಭಾವದ ಕಾರಣ ದೇಶ ಹಾಗೂ ವಿಶ್ವದಲ್ಲಿ ಮಾಡಲಾಗಿರುವ ಲಾಕ್ ಡೌನ್ ಕಾರಣ ಆರ್ಥಿಕ ಸಂಕಷ್ಟ ಹೆಚ್ಚಾಗಿದ್ದು, ದೇಶದ ವೃದ್ಧಿ ದರ ಇಳಿಕೆಯಾಗಲಿದೆ ಎಂದು ಅಂದಾಜಿಸಿದೆ.

ತನ್ನ 'ಗ್ಲೋಬಲ್ ಮೈಕ್ರೋ ಔಟ್ಲುಕ್ 2020-21 ' ವರದಿಯನ್ನು ಬಿಡಿಗಡೆ ಮಾಡಿರುವ ಮೂಡಿಸ್ ಭಾರತದಲ್ಲಿ ವರ್ಷ 2020ರಲ್ಲಿ ಆದಾಯ ದರ ತೀವ್ರವಾಗಿ ಕುಸಿಯಲಿದೆ. ಇದರಿಂದ ವರ್ಷ 2021ರಲ್ಲಿ ದೇಶೀಯ ಬೇಡಿಕೆ ಮತ್ತು ಆರ್ಥಿಕ ಸ್ಥಿತಿಯಲ್ಲಿನ ಸುಧಾರಣೆಯ ದರದ ಮೇಲೆ ಈ  ಮೊದಲಿಗಿಂತ ಹೆಚ್ಚು ಪರಿಣಾಮ ಉಂಟಾಗಲಿದೆ ಎಂದು ಹೇಳಿದೆ. ಭಾರತದಲ್ಲಿ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಬಳಿ ನಗದು ಹಣದ ತೀವ್ರ ಕೊರತೆ ಇದ್ದು, ಸಾಲ ಪಡೆಯುವಲ್ಲಿ ಭಾರತ ಈಗಾಗಲೇ ದೊಡ್ಡ ಅಡಚಣೆ ಎದುರಿಸುತ್ತಿದೆ ಎಂದು ಮೂಡಿಸ್ ಹೇಳಿದೆ.

ಕರೋನಾ ವೈರಸ್ ಸಾಮುದಾಯಿಕ ಹರಡುವಿಕೆಯನ್ನು ತಡೆಗಟ್ಟಲು ಈ ವಾರದ ಆರಂಭದಲ್ಲಿ ಭಾರತ ಸರ್ಕಾರ 21 ದಿನಗಳ ಲಾಕ್ ಡೌನ್ (ಸಾರ್ವಜನಿಕ ನಿರ್ಬಂಧ) ಘೋಷಿಸಿದೆ. ಇದುವರೆಗೆ ದೇಶಾದ್ಯಂತ ಕೊರೊನಾ ವೈರಸ್ ಸೋಂಕಿಗೆ ಸಿಲುಕಿದವರ ಸುಮಾರು 700 ಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸುಮಾರು 17 ಜನ ಈ ಮಾರಕ ಕಾಯಿಲೆಗೆ ಅಸುನೀಗಿದ್ದಾರೆ. 

ಭಾರತದಲ್ಲಿ ಸಾರ್ವಜನಿಕ ನಿರ್ಬಂಧದಿಂದಾಗಿ ವಹಿವಾಟು ಮತ್ತು ಕಾರ್ಖಾನೆಗಳು ಸ್ಥಗಿತಗೊಂಡಿವೆ. ಲಕ್ಷಾಂತರ ತಾತ್ಕಾಲಿಕ ಕಾರ್ಮಿಕರ ಅಥವಾ ದೈನಂದಿನ ಕಾರ್ಮಿಕರ ಜೀವನೋಪಾಯ ಅಪಾಯಕ್ಕೆ ಸಿಲುಕಿದೆ. ಇದರಿಂದಾಗಿ ರೈಲು, ವಿಮಾನಗಳು, ಬಸ್ ಸೇವೆ ಇತ್ಯಾದಿಗಳನ್ನು ಅಮಾನತುಗೊಳಿಸಲಾಗಿದೆ. ವಿಶ್ವಾದ್ಯಂತ, ಕರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 24,000 ಕ್ಕೆ ತಲುಪಿದೆ.

2020 ರಲ್ಲಿ ಜಾಗತಿಕ ಆರ್ಥಿಕತೆ ಸಂಕುಚಿತಗೊಳ್ಳಲಿದ್ದು, 2021 ರಲ್ಲಿ ಆರ್ಥಿಕ ವಹಿವಾಟಿನಲ್ಲಿ ಮತ್ತೆ ಚುರುಕುತನ ಕಾಣಿಸುವ ಸಾಧ್ಯತೆ ಇದೆ ಎಂದು ಮೂಡಿಸ್ ವರ್ತಿಸಿದೆ. ಈ ಹಿನ್ನೆಲೆಯಲ್ಲಿ ಏಜೆನ್ಸಿ ತನ್ನ ಜಾಗತಿಕ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಸಹ ಪರಿಷ್ಕರಿಸಿದೆ.

ಮೂಡಿಸ್ ಮಂಡಿಸಿರುವ ಪರಿಷ್ಕ್ರತ ಅಂಕಿ-ಅಂಶಗಳ ಪ್ರಕಾರ ಜಾಗತಿಕ ಅರ್ಥ ವ್ಯವಸ್ಥೆಯ ಜಿಡಿಪಿ ಬೆಳವಣಿಗೆಯ ದರ ಶೇ.೦.5 ರಷ್ಟು ಇಳಿಕೆಯಾಗಲಿದೆ ಎಂದು ಅಂದಾಜಿಸಿದೆ. ಕೊರೊನಾ ವೈರಸ್ ಸಂಕಷ್ಟಕ್ಕೂ ಮೊದಲು ಕಳೆದ ವರ್ಷ ನವೆಂಬರ್ ನಲ್ಲಿ ತನ್ನ ಅಂಕಿ-ಅಂಶಗಳನ್ನು ಪ್ರಕಟಿಸಿದ್ದ ಮೂಡಿಸ್, ಆರ್ಥಿಕ ವರ್ಷ 2020 ರಲ್ಲಿ ಜಾಗತಿಕ ಆರ್ಥಿಕತೆಯ GDP ವೃದ್ಧಿ ದರ ಶೇ.2.6 ರಷ್ಟು ಇರಲಿದೆ ಎಂದು ಅಂದಾಜಿಸಿತ್ತು.

Trending News