ಮುಂದುವರಿದ ಇಸ್ರೇಲ್ - ಹಮಾಸ್ ಯುದ್ಧ: ಏಳನೇ ದಿನದ ಬೆಳವಣಿಗೆಗಳು

Israel-Hamas War: ಇತ್ತೀಚಿನ ಇಸ್ರೇಲ್ - ಹಮಾಸ್ ಯುದ್ಧದಲ್ಲಿ, ಇಸ್ರೇಲ್ ತಾನು ರಾತ್ರಿಯ ವೇಳೆ ಅತ್ಯಂತ ಜನದಟ್ಟಣೆ ಹೊಂದಿರುವ ಗಾಜಾ ಪಟ್ಟಿಯ 750 ಮಿಲಿಟರಿ ಗುರಿಗಳ ಮೇಲೆ ದಾಳಿ ನಡೆಸಿದ್ದು, ಅದರಲ್ಲಿ 12 ಬೃಹತ್ ಕಟ್ಟಡಗಳನ್ನೂ ಉರುಳಿಸಿರುವುದಾಗಿ ಹೇಳಿದೆ.

Written by - Girish Linganna | Edited by - Savita M B | Last Updated : Oct 14, 2023, 07:34 AM IST
  • ಮುಂದಿನ ವಾರಾಂತ್ಯದ ವೇಳೆಗೆ ಇಸ್ರೇಲ್ ಗಾಜಾದ ಮೇಲೆ ಭೂ ಆಕ್ರಮಣ ನಡೆಸುವ ಸಾಧ್ಯತೆಗಳಿವೆ
  • ಈ ಕಾರ್ಯಾಚರಣೆ ಸಾಕಷ್ಟು ಸಾವುನೋವುಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ.
  • ಇರಾನಿನ ವಿದೇಶಾಂಗ ಸಚಿವ ಪ್ಯಾಲೆಸ್ತೀನ್ ವಿರುದ್ಧ ಆಕ್ರಮಣಕಾರಿ ನಡೆಗೆ ಪ್ಯಾಲೆಸ್ತೀನ್ ಮಿತ್ರಕೂಟದಿಂದ ತೀಕ್ಷ್ಣ ಪರಿಣಾಮ ಎದುರಿಸಬೇಕಾಗುತ್ತದೆ
ಮುಂದುವರಿದ ಇಸ್ರೇಲ್ - ಹಮಾಸ್ ಯುದ್ಧ: ಏಳನೇ ದಿನದ ಬೆಳವಣಿಗೆಗಳು title=

Israel-Hamas War Updates:  ಲೆಬನಾನ್‌ನಲ್ಲಿ ಆಸ್ಟ್ರೇಲಿಯಾದ ರಾಯಭಾರಿಯಾಗಿದ್ದ ಇಯಾನ್ ಪರ್ಮೀಟರ್ ಅವರು ಕತಾರ್ ಬೆಂಬಲಿತ ಮಾಧ್ಯಮ ಸಂಸ್ಥೆಯೊಂದರೊಡನೆ ಸಂದರ್ಶನದಲ್ಲಿ ಮಾತನಾಡುತ್ತಾ, ಮುಂದಿನ ವಾರಾಂತ್ಯದ ವೇಳೆಗೆ ಇಸ್ರೇಲ್ ಗಾಜಾದ ಮೇಲೆ ಭೂ ಆಕ್ರಮಣ ನಡೆಸುವ ಸಾಧ್ಯತೆಗಳಿವೆ ಎಂದಿದ್ದರು. ಈ ಕಾರ್ಯಾಚರಣೆ ಸಾಕಷ್ಟು ಸಾವುನೋವುಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ.

• ಅಮೆರಿಕಾದ ಸೆಕ್ರೆಟರಿ ಆಫ್ ಸ್ಟೇಟ್ ಆಗಿರುವ ಆ್ಯಂಟನಿ ಬ್ಲಿಂಕನ್ ಅವರು ಇಸ್ರೇಲ್ ಸರ್ಕಾರ ತನಗೆ ಹಲವು ಛಾಯಾಚಿತ್ರಗಳು ಮತ್ತು ವೀಡಿಯೋ ಚಿತ್ರಣಗಳ ಸಾಕ್ಷಿ ಒದಗಿಸಿರುವುದಾಗಿ ಹೇಳಿದ್ದು, ಅವುಗಳಲ್ಲಿ ಗುಂಡೇಟು ತಿಂದು ನರಳುತ್ತಿರುವ ಮಗು, ಶಿರಚ್ಛೇದನಗೊಂಡ ಯೋಧರು, ಸುಟ್ಟ ಗಾಯಗಳಿಗೆ ತುತ್ತಾದ ಯುವಜನತೆ ಸೇರಿದಂತೆ, ಸಾಕಷ್ಟು ದುಃಖಭರಿತ ಚಿತ್ರಣಗಳಿವೆ ಎಂದಿದ್ದಾರೆ.

• ಗಾಜಾದಲ್ಲಿ ಆಡಳಿತಾರೂಢ ಹಮಾಸ್ ಪ್ಯಾಲೆಸ್ತೀನಿಯನ್ನರಿಗೆ ಶುಕ್ರವಾರ ಪ್ರತಿಭಟನೆ ನಡೆಸಲು ಕರೆ ನೀಡಿದ್ದು, ತಮ್ಮ ಪ್ರದೇಶದ ಮೇಲೆ ಇಸ್ರೇಲ್ ಅತಿಕ್ರಮಣವನ್ನು ಪ್ರತಿರೋಧಿಸುವಂತೆ ತಿಳಿಸಿದೆ. ಹಮಾಸ್ ಪ್ಯಾಲೆಸ್ತೀನ್ ಜನತೆಗೆ ಪೂರ್ವ ಜೆರುಸಲೇಮ್ ನಲ್ಲಿರುವ ಅಲ್ ಅಕ್ಸಾ ಮಸೀದಿಗೆ ತೆರಳುವಂತೆ ಆಗ್ರಹಿಸುತ್ತಿದೆ.

• ಹ್ಯುಮನ್ ರೈಟ್ಸ್ ವಾಚ್ ಸಂಸ್ಥೆ, ಗಾಜಾ ಮತ್ತು ಲೆಬನಾನ್ ಮೇಲೆ ತನ್ನ ಆಕ್ರಮಣದ ವೇಳೆ ಇಸ್ರೇಲ್ ಬಿಳಿ ರಂಜಕ ಆಯುಧವನ್ನು (ವೈಟ್ ಫಾಸ್ಫರಸ್) ಪ್ರಯೋಗಿಸಿದೆ ಎಂದು ಆರೋಪಿಸಿದೆ.

ಈ ವೈಟ್ ಫಾಸ್ಫರಸ್ ಆಯುಧಗಳೆಂದರೆ, ಒಂದು ರೀತಿ ಬೆಂಕಿಯಿಡುವ (ಬೆಂಕಿ ಮೂಡಿಸುವ ಮತ್ತು ಬೆಂಕಿ ಹರಡಿಸುವ ರೀತಿಯ) ಆಯುಧವಾಗಿದ್ದು, ಬಿಳಿ ರಂಜಕವನ್ನು ಒಳಗೊಂಡಿರುತ್ತದೆ. ಈ ಆಯುಧಗಳು ಆಮ್ಲಜನಕದೊಡನೆ ಸಂಪರ್ಕಕ್ಕೆ ಬಂದಾಗ ದಟ್ಟ ಹೊಗೆಯ ಪರದೆಗಳನ್ನು ಅಥವಾ ಅತ್ಯಂತ ತೀಕ್ಷ್ಣವಾದ ಬೆಂಕಿಯನ್ನು ಉತ್ಪಾದಿಸಬಲ್ಲವಾಗಿದ್ದು, ಹಲವು ಮಿಲಿಟರಿ ಉದ್ದೇಶಗಳಲ್ಲಿ ಬಳಕೆಯಾಗುತ್ತವೆ. ಆದರೆ, ದಟ್ಟ ಜನಸಾಂದ್ರತೆ ಹೊಂದಿರುವ ಪ್ರದೇಶಗಳಲ್ಲಿ ಅದನ್ನು ಪ್ರಯೋಗಿಸಿದಾಗ ತೀವ್ರ ಸುಟ್ಟ ಗಾಯಗಳು ಮತ್ತು ನಾಗರಿಕರಿಗೆ ತೊಂದರೆಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ-Daily GK Quiz: ಭಾರತದ ಯಾವ ನಗರವನ್ನು ‘ಬಿರಿಯಾನಿಯ ವಿಶ್ವ ರಾಜಧಾನಿ’ ಎಂದು ಕರೆಯಲಾಗುತ್ತದೆ?

ವೈಟ್ ಫಾಸ್ಫರಸ್ ಆಯುಧಗಳನ್ನು ಹಲವು ಮಿಲಿಟರಿ ಉದ್ದೇಶಗಳಿಗೆ ಬಳಸಿಕೊಳ್ಳಬಹುದಾಗಿದ್ದು, ಅವುಗಳಲ್ಲಿ ಕೆಲವು ಪ್ರಯೋಜನಗಳೆಂದರೆ,

1. ಹೊಗೆಯ ಪರದೆ ನಿರ್ಮಾಣ: ಬಿಳಿ ರಂಜಕ ಗಾಳಿಯ ಸಂಪರ್ಕಕ್ಕೆ ಬಂದಾಗ ಅತ್ಯಂತ ದಟ್ಟವಾದ, ದೀರ್ಘಕಾಲದ ತನಕ ಇರುವ ಹೊಗೆಯನ್ನು ಉಂಟುಮಾಡುತ್ತದೆ. ಇದು ಗೋಚರತೆಯನ್ನು ಕಡಿಮೆಗೊಳಿಸಿ, ಮಿಲಿಟರಿ ಕಾರ್ಯಾಚರಣೆಗಳಿಗೆ ಸೂಕ್ತ ಮರೆಯನ್ನು ಒದಗಿಸುತ್ತದೆ.

2. ಗುರುತು ಮತ್ತು ಸಂಕೇತ: ಬಿಳಿ ರಂಜಕವನ್ನು ಗುರಿಗಳ ಮೇಲೆ ಗುರುತು ಮೂಡಿಸಲು, ಶತ್ರುಗಳ ಸ್ಥಾನದ ಕುರಿತಾದ ಸಂಕೇತ ನೀಡಲು, ಅಥವಾ ಯುದ್ಧ ರಂಗದಲ್ಲಿ ಹೆಚ್ಚು ಗಮನ ಹರಿಸಬೇಕಾದ ಸ್ಥಳದ ಕುರಿತು ಮಾಹಿತಿ ನೀಡಲು ಬಳಸಲಾಗುತ್ತದೆ.

3. ಬೆಂಕಿಯ ಪರಿಣಾಮಗಳನ್ನು ಮೂಡಿಸಲು: ಬಿಳಿ ರಂಜಕ ಬೆಂಕಿಯ ಕಿಡಿಯನ್ನು ಮೂಡಿಸಿ, ಬೆಂಕಿಯನ್ನು ಹರಡಿಸಬಲ್ಲದು. ಆ ಮೂಲಕ ಶತ್ರುಗಳ ಉಪಕರಣಗಳನ್ನು ನಾಶಪಡಿಸಲು, ಅಗತ್ಯ ಸಂದರ್ಭದಲ್ಲಿ ಬೆಂಕಿಯ ತಡೆಯನ್ನು ನಿರ್ಮಿಸಲು ಬಳಸಲಾಗುತ್ತದೆ.

ಬಿಳಿ ರಂಜಕವನ್ನು ಮಿಲಿಟರಿ ಕಾರ್ಯಾಚರಣೆಗಳಲ್ಲಿ ಬಳಸಬಹುದು ಸಹಜವೇ ಆದರೂ, ಅವುಗಳನ್ನು ಹೆಚ್ಚು ಜನದಟ್ಟಣೆ ಹೊಂದಿರುವ ಪ್ರದೇಶಗಳಲ್ಲಿ ಬಳಸುವುದು ಹೆಚ್ಚಿನ ಅಪಾಯಗಳನ್ನು ತಂದೊಡ್ಡಬಹುದು. ಇದು ಅಂತಾರಾಷ್ಟ್ರೀಯ ಕಾಳಜಿಗೆ ಕಾರಣವಾಗಿದ್ದು, ಅಂತಾರಾಷ್ಟ್ರೀಯ ಮಾನವೀಯತೆಯ ಕಾನೂನಿನ ಅಡಿಯಲ್ಲಿ ಅವುಗಳ ಬಳಕೆಯನ್ನು ಕಡಿಮೆಗೊಳಿಸುವಂತೆ ಆಗ್ರಹಿಸಲಾಗಿದೆ.

• ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ನಾಗರಿಕರನ್ನು ಗುರಿಯಾಗಿಸಿ ನಡೆಯುವ ಹಿಂಸಾತ್ಮಕ ಕಾರ್ಯಾಚರಣೆಗಳನ್ನು ಖಂಡಿಸಿದ್ದಾರೆ.

• ಈಜಿಪ್ಟ್ ತಾನು ಗಾಜಾಗೆ ನೆರವಿನ ಹಸ್ತ ಚಾಚಲು ಬರುತ್ತಿರುವ ಅಂತಾರಾಷ್ಟ್ರೀಯ ಸಹಾಯದ ವಿಮಾನಗಳಿಗೆ ಗಾಜಾದ ಗಡಿಯ ಬಳಿ ಇರುವ ಸಿನಾಯ್ ಪ್ರಾಂತ್ಯದ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸಲು ಅವಕಾಶ ಕಲ್ಪಿಸುವುದಾಗಿ ಘೋಷಿಸಿದೆ.

• ಅಲ್ ಜಜೀರಾದ ನ್ಯೂಯಾರ್ಕ್ ವರದಿಗಾರ ಗೇಬ್ರಿಯಲ್ ಎಲಿಜೊಂಡೋ ಪ್ರಕಾರ, ಉತ್ತರ ಗಾಜಾವನ್ನು ಬಿಟ್ಟು ತೆರಳಲು 24 ಗಂಟೆಗಳ ಗಡುವನ್ನು ಇಸ್ರೇಲ್ ಮಿಲಿಟರಿ ನೀಡಿದ್ದು, ಅದನ್ನು 1.1 ಮಿಲಿಯನ್ ಜನರಿಗೆ ತಿಳಿಸಲಾಗಿದೆ.

ಜನರ ಮೇಲೆ ಪರಿಣಾಮಗಳು

ವಿಶ್ವಸಂಸ್ಥೆಯ ವಕ್ತಾರ ಸ್ಟಿಫಾನೆ ಡುಜಾರಿಕ್ ಅವರು, ಇಸ್ರೇಲ್ ಉತ್ತರ ಗಾಜಾದಿಂದ ನಾಗರಿಕರನ್ನು ಸ್ಥಳಾಂತರಗೊಳ್ಳಲು ಗಡುವು ನೀಡಿರುವುದಕ್ಕೆ ಪ್ರತಿಕ್ರಿಯಿಸಿ, ಅಷ್ಟೊಂದು ಸಂಖ್ಯೆಯಲ್ಲಿ ನಾಗರಿಕರನ್ನು ಸ್ಥಳಾಂತರಿಸುವುದು ಕಷ್ಟಕರವೆಂದು ವಿಶ್ವಸಂಸ್ಥೆ ಭಾವಿಸುತ್ತದೆ ಮತ್ತು ಅದರಿಂದಾಗಿ ತೀವ್ರ ಮಾನವೀಯ ಪರಿಣಾಮಗಳು ಉಂಟಾಗುತ್ತವೆ ಎಂದು ಭಾವಿಸಿದೆ ಎಂದಿದ್ದಾರೆ.

ಅಂದರೆ, ಇಸ್ರೇಲಿ ಸೇನೆ ಆದೇಶಿಸಿದಂತೆ ಅಷ್ಟೊಂದು ಭಾರೀ ಸಂಖ್ಯೆಯ ಜನರನ್ನು ಉತ್ತರ ಗಾಜಾದಿಂದ ಸ್ಥಳಾಂತರಿಸಲು ಪ್ರಯತ್ನ ನಡೆಸಿದರೆ, ಅಲ್ಲಿ ಜೀವಿಸುತ್ತಿರುವ ಜನರ ಜೀವನದ ಮೇಲೆ ಅದು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ವಿಶ್ವಸಂಸ್ಥೆ ಭಾವಿಸಿದೆ. ಇಂತಹ ಪರಿಣಾಮಗಳಲ್ಲಿ ಸ್ಥಳಾಂತರ, ನೆಲೆ ಇಲ್ಲದಾಗುವುದು, ಹಾಗೂ ಮಾನವೀಯ ಸಮಸ್ಯೆಗಳಿಗೆ ಕಾರಣವಾಗುವ ಇತರ ಸಂಕಷ್ಟಗಳು ಸೇರಿವೆ.

• ಅಂತಹ ಒಂದು ಆದೇಶವನ್ನು ಇಸ್ರೇಲ್ ನೀಡಿರುವುದು ನಿಜವಾದರೆ, ಪ್ರಸ್ತುತ ಹದಗೆಟ್ಟಿರುವ ಪರಿಸ್ಥಿತಿ ಇನ್ನಷ್ಟು ಮಿತಿಮೀರದಂತೆ ತಡೆಯುವ ಸಲುವಾಗಿ ಅದನ್ನು ಹಿಂಪಡೆಯಬೇಕು ಎಂದು ವಿಶ್ವಸಂಸ್ಥೆ ಆಗ್ರಹಿಸಿದೆ.

ಇದನ್ನೂ ಓದಿ-ಮುಂದಿನ 2 ದಿನ ಈ ಭಾಗಗಳಲ್ಲಿ ಕುಂಭದ್ರೋಣ ಮಳೆ! ಗುಡುಗು-ಮಿಂಚು ಜೊತೆ ಸುಳಿಗಾಳಿ ಬೀಸುವ ಮುನ್ಸೂಚನೆ

• ಇಸ್ರೇಲಿ ವಾಯುದಾಳಿಗಳು ಗಾಜಾದಲ್ಲಿನ ದೊಡ್ಡ ಸ್ಮಶಾನಗಳಿಗೆ ತೆರಳುವುದು ಕಷ್ಟಕರವಾಗಿಸಿವೆ. ಆದ್ದರಿಂದ ಕುಟುಂಬಗಳು ಸಾವಿಗೀಡಾದ ತಮ್ಮವರನ್ನು ಖಾಲಿ ಜಾಗದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಸ್ಮಶಾನಗಳಲ್ಲಿ ಹೂಳುತ್ತಿದ್ದಾರೆ.

ಇಸ್ರೇಲಿನ ಸಾರ್ವಜನಿಕ ಪ್ರಸಾರಕ ಕಾನ್ ಪ್ರಕಾರ, 1,300ಕ್ಕೂ ಹೆಚ್ಚು ಇಸ್ರೇಲಿಗರು ಸಾವಿಗೀಡಾಗಿದ್ದು, 3,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

• ಗಾಜಾದ ಅಧಿಕಾರಿಗಳ ಪ್ರಕಾರ, 6,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಸಾವಿಗೀಡಾಗಿದ್ದು, ಇನ್ನೂ 6,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ರಾಜತಾಂತ್ರಿಕತೆ ಮತ್ತು ಜಾಗತಿಕ ಪ್ರತಿಕ್ರಿಯೆ

• ಯುನೈಟೆಡ್ ಕಿಂಗ್‌ಡಮ್ ಇಸ್ರೇಲ್‌ಗೆ ಬೆಂಬಲ ನೀಡಲು ಮತ್ತು ಈ ಪ್ರದೇಶದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ತನ್ನ ರಾಯಲ್ ನೇವಿಯ ಎರಡು ನೌಕೆಗಳನ್ನು ಪೂರ್ವ ಮೆಡಿಟರೇನಿಯನ್‌ ಸಮುದ್ರಕ್ಕೆ ಕಳುಹಿಸುತ್ತಿದೆ.

ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಜೋರ್ಡಾನ್‌ಗೆ ಆಗಮಿಸಿದ್ದು, ಅಲ್ಲಿ ಅವರು ಕಿಂಗ್ ಅಬ್ದುಲ್ಲಾ 2 ಮತ್ತು ಪ್ಯಾಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಜೊತೆ ಮಾತುಕತೆ ನಡೆಸಲಿದ್ದಾರೆ.

• ಇಸ್ರೇಲ್, ಶ್ವೇತ ಭವನ ಮತ್ತು ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಅಧ್ಯಕ್ಷೀಯ ಅಭ್ಯರ್ಥಿಗಳು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೆಜ್ಬೊಲ್ಲಾ ಸಂಘಟನೆಯನ್ನು 'ಬುದ್ಧಿವಂತ' ಎಂದಿರುವುದನ್ನು ಮತ್ತು ಈ ದಾಳಿಯನ್ನು ಎದುರಿಸಲು ನೆತನ್ಯಾಹು ಸಿದ್ಧವಾಗಿರಲಿಲ್ಲ ಎನ್ನುವುದನ್ನು ಅಲ್ಲಗಳೆದಿದ್ದಾರೆ.

ಇನ್ನು ಟರ್ಕಿ ಅಧ್ಯಕ್ಷರಾದ ರಿಸೆಪ್ ಟಯ್ಯಿಪ್ ಎರ್ದೋಗನ್ ಅವರು ಈ ದೀರ್ಘಕಾಲದ ಸಮಸ್ಯೆಗೆ ಸೂಕ್ತ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸಾರ್ವಭೌಮ ಪ್ಯಾಲೆಸ್ತೀನ್ ರಾಷ್ಟ್ರದ ಸ್ಥಾಪನೆಯಾಗಬೇಕು ಎಂದು ಜರ್ಮನ್ ಚಾನ್ಸಲರ್ ಒಲಾಫ್ ಶ್ಕೋಲ್ಜ್ ಅವರ ಬಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

• ಪ್ಯಾಲೆಸ್ತೀನಿಯನ್ನರಿಗೆ ಬೆಂಬಲ ಘೋಷಿಸಲು ಪ್ಯಾರಿಸ್‌ನಲ್ಲಿ ನಡೆದ ಮೆರವಣಿಗೆಯನ್ನು ಚದುರಿಸಲು ಫ್ರೆಂಚ್ ಪೊಲೀಸರು ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಬಳಸಿದ್ದಾರೆ.

• ಚೀನಾದ ಪ್ರಮುಖ ರಾಜತಾಂತ್ರಿಕ ಮತ್ತು ವಿದೇಶಾಂಗ ಸಚಿವ ವಾಂಗ್ ಯಿ ಅವರು ಮಧ್ಯ ಪೂರ್ವದ ಬಹುತೇಕ ಸಮಸ್ಯೆಗಳ ಮೂಲ ಪ್ಯಾಲೆಸ್ತೀನ್ ವಿಚಾರವಾಗಿದರ ಎಂದಿದ್ದಾರೆ. ಅವರು ಪ್ರಮುಖ ಸಮಸ್ಯೆಯೆಂದರೆ ಪ್ಯಾಲೆಸ್ತೀನ್‌ಗೆ ನ್ಯಾಯ ಒದಗಿಸಲು ನಿರಾಕರಿಸಲಾಗಿರುವುದು ಎಂದಿದ್ದಾರೆ.

• ಇರಾನಿನ ವಿದೇಶಾಂಗ ಸಚಿವ ಪ್ಯಾಲೆಸ್ತೀನ್ ವಿರುದ್ಧ ಆಕ್ರಮಣಕಾರಿ ನಡೆಗೆ ಪ್ಯಾಲೆಸ್ತೀನ್ ಮಿತ್ರಕೂಟದಿಂದ ತೀಕ್ಷ್ಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದು, ಹಾಗೇನಾದರೂ ಆದರೆ ಅದರ ಪರಿಣಾಮಗಳಿಗೆ ಇಸ್ರೇಲ್ ಹೊಣೆಯಾಗಿರಲಿದೆ ಎಂದಿದ್ದಾರೆ.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News