ನವದೆಹಲಿ: ಕೊರೊನಾ ವೈರಸ್ ಹಿನ್ನೆಲೆ ವಿದೇಶಿ ಕಂಪನಿಗಳು ಇದೀಗ ಚೀನಾದಿಂದ ದೂರ ಸರೆಯುವ ಭಯ ಚೀನಾಗೆ ಕಾಡಲಾರಂಭಿಸಿದೆ. ಹಲವು ಬಹುರಾಷ್ಟ್ರೀಯ ಕಂಪನಿಗಳು ಚೀನಾದಿಂದ ತಮ್ಮ ಬಂಡವಾಳ ಹಿಂದೆ ಪಡೆದು ಭಾರತದಂತಹ ದೇಶಗಳಲ್ಲಿ ಬಂಡವಾಳ ಹೂಡಿಕೆಯ ಕುರಿತು ಚಿಂತನೆಯಲ್ಲಿ ತೊಡಗಿವೆ. ಈ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಚೀನಾ ಭಾರತದ ಮೇಲೆ ನೇರ ವಿದೇಶಿ ಬಂಡವಾಳ (FDI) ಹೂಡಿಕೆಯ ನಿಯಮಗಳ ಉಲ್ಲಂಘನೆಯ ಆರೋಪ ಮಾಡಿದೆ.
ಸುದ್ದಿಸಂಸ್ಥೆ PTI ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಸೋಮವಾರ ಈ ಕುರಿತು ಮಾತನಾಡಿರುವ ಚೀನಾ ದೂತಾವಾಸದ ವಕ್ತಾರ, ಕೆಲ ವಿಶೇಷ ದೇಶಗಳ ನೇರ ವಿದೇಶಿ ಬಂಡವಾಳಕ್ಕಾಗಿ ಭಾರತ ಜಾರಿಗೊಳಿಸಿರುವ ಹೊಸ ನಿಯಮಗಳು WTOದ ಭೇದಭಾವ ಸಿದ್ಧಾಂತಗಳ ಉಲ್ಲಂಘನೆಯಾಗಿದೆ ಹಾಗೂ ಮುಕ್ತ ವ್ಯಾಪಾರದ ಸಾಮಾನ್ಯ ಪ್ರವೃತ್ತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ದೂತಾವಾಸದ ಅಧಿಕಾರಿ, 'ಹೆಚ್ಚುವರಿ ನಿಬಂಧನೆ'ಗಳನ್ನು ಹೇರಲು ಜಾರಿಗೊಂಡಿರುವ ಹೊಸ ನೀತಿಗಳು G20 ಸಮೂಹ ದೇಶಗಳಲ್ಲಿ ಹೂಡಿಕೆಗಾಗಿ ಸ್ವತಂತ್ರ, ನಿಸ್ಪಕ್ಷ, ಭೇದಭಾವ ರಹಿತ ಹಾಗೂ ಪಾರದರ್ಶಕ ವಾತಾವರಣಕ್ಕಾಗಿ ಪಡೆಯಲಾದ ಸರ್ವಾನುಮತದ ಒಪ್ಪಿಗೆಗೆ ವಿರುದ್ಧವಾಗಿವೆ" ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ಕೇಂದ್ರ ಸರ್ಕಾರ ಕಳೆದ ವಾರ ಸ್ಥಳೀಯ ಕಂಪನಿಗಳ 'ಅವಕಾಶವಾದಿ ಸ್ವಾಧೀನ' ಪಡಿಸಿಕೊಳ್ಳುವಿಕೆಯ ಪ್ರಕ್ರಿಯೆಗೆ ತಡೆ ಒಡ್ಡುವ ಉದ್ದೇಶದಿಂದ, ಭಾರತದ ಜೊತೆಗೆ ಗಡಿ ಹಂಚಿಕೊಂಡಿರುವ ದೇಶಗಳಿಗಾಗಿ ವಿದೇಶಿ ಬಂಡವಾಳ ಹೂಡಿಕೆಗಾಗಿ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯಗೊಳಿಸಿದೆ.