ಆಂಧ್ರಕ್ಕೆ ವಿಶೇಷ ಸ್ಥಾನಮಾನ: ದೆಹಲಿಯಲ್ಲಿಂದು ನಾಯ್ಡು ಉಪವಾಸ ಸತ್ಯಾಗ್ರಹ

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಒತ್ತಾಯಿಸಿ ದೆಹಲಿಯಲ್ಲಿರುವ ಆಂಧ್ರ ಭವನದ  ಮುಂಭಾಗ ಸೋಮವಾರ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.  

Last Updated : Feb 11, 2019, 09:14 AM IST
ಆಂಧ್ರಕ್ಕೆ ವಿಶೇಷ ಸ್ಥಾನಮಾನ: ದೆಹಲಿಯಲ್ಲಿಂದು ನಾಯ್ಡು ಉಪವಾಸ ಸತ್ಯಾಗ್ರಹ title=
Pic Courtesy: ANI

ನವದೆಹಲಿ: ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿ ಏನ್. ಚಂದ್ರಬಾಬು ನಾಯ್ಡು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಒತ್ತಾಯಿಸಿ ದೆಹಲಿಯಲ್ಲಿರುವ ಆಂಧ್ರ ಭವನದ  ಮುಂಭಾಗ ಸೋಮವಾರ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಇದಕ್ಕೂ ಮೊದಲು ಇಂದು ಬೆಳಿಗ್ಗೆ ರಾಜ್ ಘಾಟ್ ಗೆ ತೆರಳಿದ ನಾಯ್ಡು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಪ್ರತಿಮೆಗೆ ಗೌರವಾರ್ಪಣೆ ಸಲ್ಲಿಸಿದರು. 

ಇಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಚಂದ್ರಬಾಬು ನಾಯ್ಡು  ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಈ ಸತ್ಯಾಗ್ರಹದಲ್ಲಿ ಟಿಡಿಪಿ ಸಂಸದರು, ಶಾಸಕರು, ಪರಿಷತ್​ ಸದಸ್ಯರು ಸೇರಿ ಹಲವು ಸಂಘಟನೆಗಳು ಭಾಗಿಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ನಾಯ್ಡುಗೆ ವಿಪಕ್ಷ ನಾಯಕರು ಕೂಡ ಸಾಥ್​ ನೀಡುವ ಸಾಧ್ಯತೆಗಳಿವೆ.

ಮೂಲಗಳ ಪ್ರಕಾರ, ನಾಯ್ಡು ಮಂಗಳವಾರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಿದ್ದಾರೆ.

ಈ ಹಿಂದೆ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಲಿ ಅಂತಲೇ ನಾನು ರಾಜಕೀಯದಲ್ಲಿ ಹಿರಿಯನಾಗಿದ್ರೂ, ಮೋದಿಯವರನ್ನ ಸರ್ ಅಂತ ಕರೆದಿದ್ದೆ ಅಂತ ನಾಯ್ಡು ಹೇಳಿದ್ದರು. ಇದಕ್ಕೆ ನಿನ್ನೆ ಗುಂಟೂರಿನಲ್ಲಿ ತಿರುಗೇಟು ನೀಡಿದ್ದ ಮೋದಿ, ಹೌದು ನೀವು ಸಾಕಷ್ಟು ವಿಷಯಗಳಲ್ಲಿ ಹಿರಿಯರು. ಟಿಡಿಪಿ ಸಂಸ್ಥಾಪಕ ನಿಮ್ಮ ಮಾವನವರ ಬೆನ್ನಿಗೆ ಚೂರಿ ಹಾಕಿದ್ದರಲ್ಲೂ ನೀವು ಹಿರಿಯರು ಎಂದು ಟಾಂಗ್ ನೀಡಿದ್ದರು. 

1995 ರಲ್ಲಿ ಆಂಧ್ರದ ಮುಖ್ಯಮಂತ್ರಿಯಾಗಬೇಕೆಂಬ ಏಕೈಕ ಉದ್ದೇಶದಿಂದ ಅಂದು ಮುಖ್ಯಮಂತ್ರಿಯಾಗಿದ್ದ ತಮ್ಮ ಮಾವ ಎನ್.ಟಿ. ರಾಮರಾವ್ ಅವರಿಂದ ತೆಲುಗು ದೇಶಂ ಪಕ್ಷವನ್ನು ಅಪಹರಿಸಿದ್ದರು. ಆ ಮೂಲಕ ತಮ್ಮ ಮಾವ ಬೆನ್ನಿಗೆ ಚೂರಿ ಹಾಕಿದ್ದರು ಎಂದು ಮೋದಿ ಟೀಕಿಸಿದ್ದಾರೆ.
 

Trending News