ನವದೆಹಲಿ: ಪೇಡ್ ನ್ಯೂಸ್ ಗಳಿಗಿಂತ ನಕಲಿ ಸುದ್ದಿಗಳು ಹೆಚ್ಚು ಅಪಾಯಕಾರಿ, ಆದ್ದರಿಂದ ಸರ್ಕಾರ ಮತ್ತು ಮಾಧ್ಯಮಗಳು ಈ ಸವಾಲನ್ನು ಜಂಟಿಯಾಗಿ ಎದುರಿಸುವ ಅವಶ್ಯಕತೆಯಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಹೇಳಿದ್ದಾರೆ.
ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಚಲನಚಿತ್ರಗಳಿಗೆ ಇರುವ ನಿಯಂತ್ರಣದಂತೆ ಓವರ್-ದಿ-ಟಾಪ್ ವೇದಿಕೆಗಳ((ಒಟಿಟಿ) ಮೇಲೆಯೂ ಕೂಡ ಕೆಲವು ರೀತಿಯ ನಿಯಂತ್ರಣವಿರಬೇಕು ಎಂದು ಜಾವೆಡೆಕರ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದೇ ವೇಳೆ ಅವರು ಮಾಧ್ಯಮದ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯಾವುದೇ ಕ್ರಮವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉನ್ನತ ಮಾಧ್ಯಮ ಸೇವೆಗಳಲ್ಲಿ (ಒಟಿಟಿ ಪ್ಲಾಟ್‌ಫಾರ್ಮ್‌ಗಳು) ಸಾಮಾನ್ಯವಾಗಿ ನ್ಯೂಸ್ ಪೋರ್ಟಲ್‌ಗಳು ಮತ್ತು ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಂತಹ ಸ್ಟ್ರೀಮಿಂಗ್ ಸೇವೆಗಳನ್ನು ಒಳಗೊಂಡಿವೆ, ಈ ಸೇವೆಗಳನ್ನು ಅಂತರ್ಜಾಲದ ಮೂಲಕ ಪ್ರವೇಶಿಸಬಹುದಾಗಿದೆ. ಉನ್ನತ ಮಾಧ್ಯಮ ಸೇವೆಗಳು ಸಂಪೂರ್ಣವಾಗಿ ಅನಿಯಂತ್ರಿತವಾಗಿವೆ ಎಂದು ಹಲವಾರು ಮುಖ್ಯವಾಹಿನಿಯ ಮಾಧ್ಯಮಗಳು ಸರ್ಕಾರಕ್ಕೆ ತಿಳಿಸಿವೆ ಎಂದು ಜಾವಡೇಕರ್ ಹೇಳಿದರು.
ಈ ಉನ್ನತ ಮಾಧ್ಯಮಗಳನ್ನು ಎದುರಿಸುವ ವಿಚಾರವಾಗಿ ನಾನು ಸಲಹೆಗಳನ್ನು ಕೋರಿದ್ದೇನೆ, ಏಕೆಂದರೆ ಒಟಿಟಿಯಲ್ಲಿ ನಿಯಮಿತವಾಗಿ ಒಳ್ಳೆಯದು, ಕೆಟ್ಟದು ಮತ್ತು ಕೊಳಕು ಚಲನಚಿತ್ರಗಳು ಬರುತ್ತಿವೆ. ಆದ್ದರಿಂದ ಇದನ್ನು ಹೇಗೆ ಎದುರಿಸಬೇಕು, ಯಾರು ಮೇಲ್ವಿಚಾರಣೆ ಮಾಡಬೇಕು, ಯಾರು ನಿಯಂತ್ರಿಸಬೇಕು. ಒಟಿಟಿಗೆ ಯಾವುದೇ ಪ್ರಮಾಣೀಕರಣ ಸಂಸ್ಥೆ ಇಲ್ಲ ಎಂದು ಅವರು ಹೇಳಿದರು.
ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮುದ್ರಣ ಮಾಧ್ಯಮವನ್ನು ನೋಡಿಕೊಳ್ಳುತ್ತದೆ, ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್ (ಎನ್‌ಬಿಎ) ಸುದ್ದಿ ಚಾನೆಲ್‌ಗಳನ್ನು ಮೇಲ್ವಿಚಾರಣೆ ಮಾಡುತ್ತದೆ, ಅದೇ ರೀತಿಯಾಗಿ ಜಾಹಿರಾತಿಗಾಗಿ ಮತ್ತು ಸಿನಿಮಾಗಳ ಮೇಲ್ವಿಚಾರಣೆಗಾಗಿ ಸರ್ಕಾರ ಸಂಸ್ಥೆಗಳನ್ನು ಹೊಂದಿದೆ. ಈಗ ಇದೇ ಮಾದರಿಯಲ್ಲಿ ಉನ್ನತ ಮಾಧ್ಯಮಗಳಿಗೂ ಕೂಡ ಸರ್ಕಾರ ನಿಯಂತ್ರಣ ಸಂಸ್ಥೆಯನ್ನು ರೂಪಿಸಲು ಮುಂದಾಗುತ್ತಿದೆ ಎಂದು ಅವರು ಹೇಳಿದರು.