ನವದೆಹಲಿ: ಸುಪ್ರೀಂ ಕೋರ್ಟ್ ಆದೇಶದಂತೆ ಜುಲೈ ತಿಂಗಳಿನಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸೋಮವಾರ ಕರ್ನಾಟಕಕ್ಕೆ ಸೂಚನೆ ನೀಡಿದೆ.
ದೆಹಲಿಯ ಜಲ ಆಯೋಗದ ಕಚೇರಿಯಲ್ಲಿ ಕೇಂದ್ರ ಜಲಮಂಡಳಿ ಮತ್ತು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್. ಮಸೂದ್ ಹುಸೇನ್ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ.
ಈ ಹಿಂದೆ ಸುಪ್ರೀಂ ಕೋರ್ಟ್ ಜುಲೈ ತಿಂಗಳಿನಲ್ಲಿ ತಮಿಳುನಾಡಿಗೆ 34ಟಿಎಂಸಿ ನೀರು ಬಿಡುವಂತೆ ಆದೇಶಿಸಿತ್ತು. ಆದರೆ ಈಗಾಗಲೇ ಕರ್ನಾಟಕ ಜೂನ್ ತಿಂಗಳಿನಲ್ಲಿ ನಿಗದಿಗಿಂತ ಹೆಚ್ಚುವರಿ ನೀರನ್ನು ಅಂದರೆ 2.5 ಟಿಎಂಸಿ ನೀರನ್ನು ಹರಿಸಿದೆ. ಜತೆಗೆ ಸದ್ಯದ ಪರಿಸ್ಥಿತಿಯಲ್ಲಿ 31.24 ಟಿಎಂಸಿ ನೀರನ್ನು ಹರಿಸಲು ಸಾಧ್ಯವಿಲ್ಲ. ಅಷ್ಟು ಪ್ರಮಾಣದ ನೀರು ಜಲಾಶಯಗಳಲ್ಲಿ ಇಲ್ಲ. ರಾಜ್ಯದ ವಾಸ್ತವ ಸ್ಥಿತಿ ಅರಿತುಕೊಂಡು ಬಳಿಕ ಆದೇಶ ನೀಡಬೇಕು ಎಂದು ತಿಳಿಸಿದರು. ಪ್ರಾಧಿಕಾರದ ಸೂಚನೆಗೆ ಕರ್ನಾಟಕ ವಿರೋಧ ವ್ಯಕ್ತ ಪಡಿಸುತ್ತಿದ್ದಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯು ಜುಲೈ 5ಕ್ಕೆ ಸಭೆ ಕರೆದಿದೆ. ನಾಲ್ಕೂ ರಾಜ್ಯಗಳಲ್ಲಿರುವ ನೀರಿನ ಲಭ್ಯತೆ, ಮಳೆ ಪ್ರಮಾಣವನ್ನು ಅವಲೋಕಿಸಿದ ಬಳಿಕ ಸಮಿತಿಯು ಕಾವೇರಿ ಪ್ರಾಧಿಕಾರಕ್ಕೆ ನೀರು ಹಂಚಿಕೆ ಬಗ್ಗೆ ಶಿಫಾರಸು ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಕರ್ನಾಟಕದಿಂದ ಜಲಸಂಪನುಲ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್, ತಮಿಳುನಾಡಿನ ಎಸ್.ಕೆ.ಪ್ರಭಾಕರ್, ಕೇರಳದ ಟಿಂಕು ಬಿಸ್ವರ್, ಪುದುಚೇರಿಯ ಎ.ಅನ್ಬರಸು ಭಾಗಿಯಾಗಿದ್ದರು.