ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದು; ಕೇಂದ್ರ ಸರ್ಕಾರದ ಘೋಷಣೆ

ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಅನುಚ್ಛೇದ 370 ಮತ್ತು 35 ಎ ರದ್ದುಗೊಳಿಸುವ ಬಗ್ಗೆ ಪ್ರಸ್ತಾಪ ಮಂಡನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ ವಿರೋಧ ಪಕ್ಷಗಳ ಸದಸ್ಯರಿಂದ ಗದ್ದಲ, ಕೋಲಾಹಲ.

Last Updated : Aug 5, 2019, 12:14 PM IST
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದು; ಕೇಂದ್ರ ಸರ್ಕಾರದ ಘೋಷಣೆ title=

ನವದೆಹಲಿ: ಜಮ್ಮು ಮತ್ತು ಕಾಶ್ಮೀರ (ಜಮ್ಮು ಕಾಶ್ಮೀರ) ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸೋಮವಾರ ರಾಜ್ಯಸಭೆಯಲ್ಲಿ ದೊಡ್ಡ ಘೋಷಣೆ ಮಾಡಿದೆ. ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ಅನುಚ್ಛೇದ 370 ಮತ್ತು 35 ಎ ರದ್ದುಗೊಳಿಸಲಾಗಿದೆ ಎಂದು ಘೋಷಿಸಿದ್ದಾರೆ. ಹೊಸ ಕಾನೂನಿನ ಪ್ರಕಾರ, ಸೆಕ್ಷನ್ 370 ರ ಎಲ್ಲಾ ವಿಭಾಗಗಳು ರಾಜ್ಯದಲ್ಲಿ ಅನ್ವಯಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಕಣಿವೆ ರಾಜ್ಯ ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ನಿರ್ಣಯ ಕೈಗೊಂಡಿದ್ದು, ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಪಕ್ಷಗಳ ತೀವ್ರ ಗದ್ದಲದ ನಡುವೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಅನುಚ್ಛೇದ 370 ಮತ್ತು 35 ಎ ರದ್ದುಗೊಳಿಸುವ ಬಗ್ಗೆ ಪ್ರಸ್ತಾಪ ಮಂಡಿಸಿದರು. 

ಗೃಹ ಸಚಿವ ಅಮಿತ್ ಶಾ ಪ್ರಸ್ತಾಪ ಮಂಡಿಸುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಸೇರಿದಂತೆ ಪ್ರತಿಪಕ್ಷದ ಹಲವು ನಾಯಕರು ತಿದ್ದುಪಡಿ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಪ್ರತಿಪಕ್ಷಗಳ ಗದ್ದಲ, ಕೋಲಾಹಲದ ನಡುವೆಯೇ ಗೃಹ ಸಚಿವ ಅಮಿತ್ ಶಾ ಕಾಶ್ಮೀರದ 370, 35(A) ವಿಧಿ ರದ್ದು ಮಾಡಿ ಮಹತ್ವದ ಘೋಷಣೆ ಮಾಡಿದೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಇಂದು ಬೆಳಿಗ್ಗೆ ಪ್ರಧಾನಿ ನಿವಾಸದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ ಭಾಗವಹಿಸಿದ್ದರು. ದೇಶದ ಎಲ್ಲ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಸೂಚನೆ ನೀಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ತಲೆದೂರಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಆಡಳಿತವು ಜಮ್ಮು ಮತ್ತು ಶ್ರೀನಗರದಲ್ಲಿ ಸೆಕ್ಷನ್ 144 ಅನ್ನು ವಿಧಿಸಿದೆ. ಅಲ್ಲದೆ, ಜಮ್ಮುವಿನ 8 ಜಿಲ್ಲೆಗಳಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 40 ಕಂಪನಿಗಳನ್ನು ನಿಯೋಜಿಸಲಾಗಿದೆ. ಭದ್ರತಾ ಪಡೆಗಳ 100 ಕಂಪನಿಗಳನ್ನು ಈಗಾಗಲೇ ಕಾಶ್ಮೀರದಲ್ಲಿ ನಿಯೋಜಿಸಲಾಗಿದೆ. 

ಮುಂದಿನ ಆದೇಶದವರೆಗೂ ಜಮ್ಮು ಮತ್ತು ಶ್ರೀನಗರದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಸಹ ಮುಚ್ಚಲಾಗಿದೆ. ಕಾಶ್ಮೀರ ಆಡಳಿತದಲ್ಲಿ, ಪ್ರಮುಖ ಅಧಿಕಾರಿಗಳಿಗೆ ಅವರ ಸಂವಹನ ಮತ್ತು ಸಮನ್ವಯದಲ್ಲಿ ಯಾವುದೇ ತೊಂದರೆಯಾಗದಂತೆ ಉಪಗ್ರಹ ಫೋನ್‌ಗಳನ್ನು ನೀಡಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ನಿಯೋಜನೆಯನ್ನು ತಿಳಿಸಲಾಗಿದೆ.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಆಗಸ್ಟ್ 5 ರಿಂದ ಆಗಸ್ಟ್ 7 ರವರೆಗೆ ಬಿಜೆಪಿ ಸಂಸದರಿಗೆ ವಿಪ್ ಹೊರಡಿಸಿದೆ. ಈ ಸಮಯದಲ್ಲಿ, ಅದರ ಎಲ್ಲಾ ಸಂಸದರು ಸಂಸತ್ತಿನ ವಿಚಾರಣೆಯಲ್ಲಿ ಭಾಗಿಯಾಗುವಂತೆ ಕೇಳಿಕೊಳ್ಳಲಾಗಿದೆ. 

Trending News