ನವದೆಹಲಿ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಸ್ಪರ್ಧಿಯಾಗಿ ನಾಮಪತ್ರ ಸಲ್ಲಿಸಿದ್ದ ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಅಧಿಕೃತವಾಗಿ ಬೆಂಬಲ ಘೋಷಿಸಿದೆ.
ಶನಿವಾರ ತಡರಾತ್ರಿ ಬಿಜೆಪಿ ಬಿಡುಗಡೆ ಮಾಡಿದ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಕರ್ನಾಟಕದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅವರಿಗೆ ಬೆಂಬಲ ಘೋಷಿಸುತ್ತಿರುವುದಾಗಿ ಪ್ರಕಟಿಸಿದೆ. ಅಲ್ಲದೆ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಛಲವಾದಿ ನಾರಾಯಣಸ್ವಾಮಿಗೆ ಟಿಕೆಟ್ ಕೈತಪ್ಪಿದ್ದು, ಎಸ್.ಮುನಿಯಪ್ಪ ಅವರಿಗೆ ಟಿಕೆಟ್ ಘೋಷಿಸಿದೆ.
Bharatiya Janata Party (BJP) releases another list of candidates for the upcoming Lok Sabha elections. Candidates for the legislative assembly (3 each for Gujarat and Goa) bye-polls also announced. pic.twitter.com/GUQRX23Fto
— ANI (@ANI) March 23, 2019
ಮಂಡ್ಯದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ಜೆಡಿಎಸ್ ಗೆ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಲಾಗಿದೆ. ಅಲ್ಲದೆ, ಈ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಸುಮಲತಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಖ್ಯಾತ ನಟರಾದ ಯಶ್ ಹಾಗೂ ದರ್ಶನ್ ಸಹ ಸುಮಲತಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಉಳಿದಂತೆ ಶನಿವಾರ ತಡರಾತ್ರಿ ಬಿಜೆಪಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮಧ್ಯಪ್ರದೇಶ ರಾಜ್ಯದ 15 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಪ್ರಕಟಿಸಿದೆ. ಜಾರ್ಖಂಡ್ ರಾಜ್ಯದ 10 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸಿದೆ. ಗುಜರಾತ್ ರಾಜ್ಯದ 15 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸಿದೆ. ಹಿಮಾಚಲ ಪ್ರದೇಶದ ನಾಲ್ಕು ಕ್ಷೇತ್ರ ಹಾಗೂ ಗೋವಾದ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.