ಬಿಜೆಪಿ 'ಸಂಕಲ್ಪ ಪತ್ರ' ಸಂಕುಚಿತ, ಗರ್ವದ ಪ್ರಣಾಳಿಕೆ: ರಾಹುಲ್ ಗಾಂಧಿ

ಬಿಜೆಪಿ ಪ್ರಣಾಳಿಕೆ ಒಂದು ಮುಚ್ಚಿದ ಕೋಣೆಯಲ್ಲಿ ತಯಾರಿಸಲಾಗಿದ್ದು, ಯಾರ ಸಂಪರ್ಕವೂ ಇಲ್ಲದ ವ್ಯಕ್ತಿಯ ಧ್ವನಿಯಾಗಿದೆಯೇ ಹೊರತು ದೇಶದ ಜನತೆಯ ಒಮ್ಮತದಿಂದ ಮೂಡಿದ್ದಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

Last Updated : Apr 9, 2019, 10:46 AM IST
ಬಿಜೆಪಿ 'ಸಂಕಲ್ಪ ಪತ್ರ' ಸಂಕುಚಿತ, ಗರ್ವದ ಪ್ರಣಾಳಿಕೆ: ರಾಹುಲ್ ಗಾಂಧಿ title=

ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸೋಮವಾರ ಬಿಡುಗಡೆ ಮಾಡಿರುವ 'ಸಂಕಲ್ಪ ಪತ್ರ'ವನ್ನು ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಂಕುಚಿತ, ದೂರದೃಷ್ಟಿಯಿಲ್ಲದ ಮತ್ತು ದುರಹಂಕಾರದ ಪ್ರಣಾಳಿಕೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಬಿಜೆಪಿ ಪ್ರಣಾಳಿಕೆ ಒಂದು ಮುಚ್ಚಿದ ಕೋಣೆಯಲ್ಲಿ ತಯಾರಿಸಲಾಗಿದ್ದು, ಯಾರ ಸಂಪರ್ಕವೂ ಇಲ್ಲದ ವ್ಯಕ್ತಿಯ ಧ್ವನಿಯಾಗಿದೆಯೇ ಹೊರತು ದೇಶದ ಜನತೆಯ ಒಮ್ಮತದಿಂದ ಮೂಡಿದ್ದಲ್ಲ. ಆದರೆ, ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆ ಹಲವರೊಂದಿಗೆ ಚರ್ಚಿಸಿ ಸಿದ್ಧಪಡಿಸಲಾಗಿದ್ದು, ಒಂದು ದಶಲಕ್ಷದಷ್ಟು ಭಾರತೀಯ ಜನರ ಬುದ್ಧಿವಂತ ಮತ್ತು ಪ್ರಬಲ ಧ್ವನಿಯಾಗಿದೆ" ಎಂದಿದ್ದಾರೆ.

ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಏಪ್ರಿಲ್ 2ರಂದು ಬಿಡುಗಡೆ ಮಾಡಿದ್ದು, ರೈತರಿಗೆ ಪ್ರತ್ಯೇಕ ಬಜೆಟ್, ನ್ಯಾಯ್ ಯೋಜನೆ ಮೂಲಕ ಬಡವರ ಖಾತೆಗೆ ಮಾಸಿಕ 6000ರೂ. ವರ್ಗಾವಣೆ, 2020ರೊಳಗೆ 22 ಲಕ್ಷ ಉದ್ಯೋಗ ಸೃಷ್ಟಿ, ಶಿಕ್ಷಣ ವಲಯಕ್ಕೆ ಬಜೆಟ್ ನಲ್ಲಿ ಶೇ.6 ರಷ್ಟು ಮೀಸಲು ಸೇರಿದಂತೆ ಹಲವು ಯೋಜನೆಗಳ ಭರವಸೆ ನೀಡಿದೆ. 

ಮತ್ತೊಂದೆಡೆ 2019 ರ ಲೋಕಸಭೆ ಚುನಾವಣೆಗೆ ನಾಲ್ಕು ದಿನಗಳಿಗೂ ಮುನ್ನ ಸೋಮವಾರ ಬಿಜೆಪಿ ತನ್ನ 'ಸಂಕಲ್ಪ ಪತ್ರ'ವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸಶಸ್ತ್ರ ಪಡೆಗಳನ್ನು ಬಲಪಡಿಸುವುದಕ್ಕಾಗಿ, ಅತ್ಯುತ್ತಮ ರಕ್ಷಣಾ ಸಲಕರಣೆಗಳನ್ನು ಖರೀದಿಸಲು ಕ್ರಮ,  ಉಗ್ರವಾದದ ವಿರುದ್ಧ 'ಝೀರೋ ಟಾಲರೆನ್ಸ್' , ಜಮ್ಮು ಮತ್ತು ಕಾಶ್ಮೀರ ನಾಗರಿಕರಿಗೆ ವಿಶೇಷ ಅಧಿಕಾರ ನೀಡುವ ಕಾಲಂ 35 ಎ ರದ್ದು, ಕೃಷಿಕರ ಆದಾಯ ದ್ವಿಗುಣಗೊಳಿಸಲು ರೈತರಿಗೆ ಪ್ರೋತ್ಸಾಹ ಸೇರಿದಂತೆ ಅನೇಕ ಯೋಜನೆಗಳ ಭರವಸೆ ನೀಡಿದೆ.

Trending News