ಚತರ್ಪುರ್: ಮಧ್ಯಪ್ರದೇಶದ ಚತರ್ಪುರ್ ಪ್ರದೇಶದಲ್ಲಿ ಹೊಟ್ಟೆ ನೋವು ಎಂದು ಬಂದ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ದಂಗಾಗಿದ್ದಾರೆ. ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಯ ಹೊಟ್ಟೆಯಿಂದ ವೈದ್ಯರು ಬ್ಲೇಡ್, ಪ್ಲಾಸ್ಟಿಕ್ ಪೆನ್ ಸೇರಿದಂತೆ 33 ಚೂಪಾದ ವಸ್ತುಗಳನ್ನು ಹೊರತೆಗೆದಿದ್ದಾರೆ.
ಖಾಸಗಿ ಆಸ್ಪತ್ರೆಯನ್ನು ನಡೆಸುತ್ತಿರುವ ಡಾ. ಎಂಪಿಎನ್ ಖರೆ ಅವರು ಬುಧವಾರ ಯೋಗೇಶ್ ಎಂಬ ವ್ಯಕ್ತಿಗೆ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿದರು.
ಇಶಾನಗರ್ ಮೂಲದ 33 ವರ್ಷದ ಯೋಗೇಶ್ ಎಂಬಾತ ಹೊಟ್ಟೆ ನೋವಿನಿಂದ ವೈದ್ಯರ ಬಳಿಗೆ ಹೋದರು. ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯೋಗೇಶ್ ಅವರಿಗೆ ಕ್ಷ-ಕಿರಣ ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡಿಸಲಾಗಿದೆ.
ಕ್ಷ-ಕಿರಣದಲ್ಲಿಯೇ ಯೋಗೇಶನ ಹೊಟ್ಟೆಯೊಳಗೆ ತೀಕ್ಷ್ಣವಾದ ವಸ್ತುಗಳನ್ನು ಗಮನಿಸಲಾಯಿತು. ಆಗ ಆ ವ್ಯಕ್ತಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ತಿಳಿಸಲಾಯಿತು. ಸುಮಾರು ಎರಡು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ, ವೈದ್ಯರು ಯೋಗೇಶನ ಹೊಟ್ಟೆಯೊಳಗಿಂದ ಪೆನ್ಸಿಲ್, ಬ್ಲೇಡ್, ಲೋಹೀಯ ತಂತಿ ಮತ್ತು ಚರ್ಮದಂತಹ ಹಲವು ವಸ್ತುಗಳನ್ನು ಹೊರತೆಗೆದಿದ್ದಾರೆ.
ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಒಟ್ಟು 33 ಅಂತಹ ವಸ್ತುಗಳನ್ನು ಹೊಟ್ಟೆಯಿಂದ ಹೊರತೆಗೆಯಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
ತಿನ್ನಲಾಗದಂತಹ ವಸ್ತುಗಳನ್ನು ಸಹ ತಿನ್ನುವ ಅಭ್ಯಾಸ ಹೊಂದಿದ್ದ ಯೋಗೇಶನ ಹೊಟ್ಟೆಯೊಳಗೆ ಆ ವಸ್ತುಗಳು ಸಂಗ್ರಹವಾದ ಕಾರಣ ಆತನಿಗೆ ಆಗಾಗ ಹೊಟ್ಟೆನೋವು ಕಾಣಿಸಿಕೊಂಡಿದೆ. ಕ್ರಮೇಣ ಆ ನೋವು ಅಸಹನೀಯವಾಯಿತು ಎನ್ನಲಾಗಿದೆ.
ಶಸ್ತ್ರಚಿಕಿತ್ಸೆ ಬಳಿಕ ರೋಗಿ ಯೋಗೇಶ್ ಆರೋಗ್ಯವಾಗಿದ್ದು, ಶಸ್ತ್ರಚಿಕಿತ್ಸೆಯ ನಂತರದ ವೀಕ್ಷಣೆಗಾಗಿ ಆಸ್ಪತ್ರೆಯಲ್ಲಿಯೇ ಇರಿಸಲಾಗಿದೆ.
ಶಸ್ತ್ರಚಿಕಿತ್ಸೆ ಕಠಿಣವಾದರೂ ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಸದ್ಯ ಯೋಗೇಶ್ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.