ಈ ರಾಜ್ಯದಲ್ಲಿ 1 ಸೀಟನ್ನೂ ಗೆಲ್ಲದ ಬಿಜೆಪಿ, ಪ್ರಮುಖ ವಿರೋಧ ಪಕ್ಷವಾಗಬಹುದು!

ದಕ್ಷಿಣ ಭಾರತದಲ್ಲಿ ತನ್ನ ಪಕ್ಷ ವಿಸ್ತರಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಪ್ರಸ್ತುತ ಆಂಧ್ರಪ್ರದೇಶದಲ್ಲಿಯೇ ತನ್ನ ಪಕ್ಷವನ್ನು ಬಲಪಡಿಸುವ ಪ್ರಯತ್ನದಲ್ಲಿದೆ.

Last Updated : Oct 23, 2019, 11:11 AM IST
ಈ ರಾಜ್ಯದಲ್ಲಿ 1 ಸೀಟನ್ನೂ ಗೆಲ್ಲದ ಬಿಜೆಪಿ, ಪ್ರಮುಖ ವಿರೋಧ ಪಕ್ಷವಾಗಬಹುದು! title=

ನವದೆಹಲಿ: ದಕ್ಷಿಣ ಭಾರತದಲ್ಲಿ ತನ್ನ ಪಕ್ಷ ವಿಸ್ತರಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಪ್ರಸ್ತುತ ಆಂಧ್ರಪ್ರದೇಶದಲ್ಲಿಯೇ ತನ್ನ ಪಕ್ಷವನ್ನು ಬಲಪಡಿಸುವ ಪ್ರಯತ್ನದಲ್ಲಿದೆ. ಇಲ್ಲಿನ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡು ಹತಾಶರಾಗಿರುವ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕರನ್ನು ತನ್ನತ್ತ ಸೆಳೆಯುವಲ್ಲಿ ಬಿಜೆಪಿ ನಿರತವಾಗಿದ್ದು ಟಿಡಿಪಿಯನ್ನು ಮತ್ತಷ್ಟು ದುರ್ಬಲಗೊಳಿಸುತ್ತಿದೆ. 

ಈ ಕಾರ್ಯಾಚರಣೆಯಲ್ಲಿ ಪಕ್ಷದ ರಾಜ್ಯಸಭಾ ಸಂಸದ ಜಿವಿಎಲ್ ನರಸಿಂಹ ರಾವ್, ರಾಜ್ಯ ಸಹ-ಉಸ್ತುವಾರಿ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಸುನಿಲ್ ದಿಯೋಧರ್ ಮತ್ತು ಇನ್ನೊಬ್ಬ ರಾಷ್ಟ್ರೀಯ ಕಾರ್ಯದರ್ಶಿ ಸತ್ಯ ಕುಮಾರ್ ನಿರತರಾಗಿದ್ದಾರೆ ಎನ್ನಲಾಗಿದೆ. ಇವರ ಪ್ರಯತ್ನದಿಂದಾಗಿ ಆಂಧ್ರಪ್ರದೇಶದಲ್ಲಿ ಈವರೆಗೆ 60 ಪ್ರಮುಖ ನಾಯಕರು ಬಿಜೆಪಿಗೆ ಸೇರಿದ್ದಾರೆ.

ಜೂನ್‌ನಲ್ಲಿ ಆರು ಟಿಡಿಪಿ ರಾಜ್ಯಸಭಾ ಸಂಸದರಲ್ಲಿ ನಾಲ್ವರನ್ನು ತನ್ನ ಮಡಿಲಿಗೆ ತರುವಲ್ಲಿ ಯಶಸ್ವಿಯಾದ ಬಿಜೆಪಿ, ಮಾಜಿ ಸಚಿವ ಮತ್ತು ಮೂರು ಬಾರಿ ಶಾಸಕ ಆದಿನಾರಾಯಣ್ ರೆಡ್ಡಿ ಅವರನ್ನು ತನ್ನೆಡೆ ಸೆಳೆಯಿತು. ರೆಡ್ಡಿ ಬಿಜೆಪಿಗೆ ಸೇರಿದ ನಂತರ, ಇತರ ನಾಯಕರ ಪಕ್ಷಾಂತರಗಳ ಬಗ್ಗೆ ಊಹಾಪೋಹಗಳಿವೆ. ಒಂದು ಡಜನ್ ಟಿಡಿಪಿ ಶಾಸಕರು ಈಗಾಗಲೇ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ಪಕ್ಷಾಂತರ ರಾಜಕೀಯ:
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸತ್ಯ ಕುಮಾರ್ ಅವರು ಈ ಶಾಸಕರು ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ದೃಢಪಡಿಸಿದರು. "ನಾಯ್ಡು ಅವರ ಪಕ್ಷವು ರಾಜ್ಯದಲ್ಲಿ ಚೂರುಚೂರಾಗಿದೆ. ಈಗ ಬಿಜೆಪಿಗೆ ಸಮಯ ಬಂದಿದೆ. ಅದಕ್ಕಾಗಿಯೇ ರಾಜ್ಯದ ಟಿಡಿಪಿಯ ಪ್ರತಿಯೊಬ್ಬ ನಾಯಕರು ನಾಮುಂದು ತಾಮುಂದು ಎಂದು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಆದ್ರೆ ಬಿಜೆಪಿ ಯಾರನ್ನೂ ಒಬ್ಬೊಬ್ಬರಾಗಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ" ಎಂದಿದ್ದಾರೆ.

ವಾಸ್ತವವಾಗಿ, ಒಂದು ಪಕ್ಷದ ಮೂರನೇ ಎರಡರಷ್ಟು ಸಂಸದರು ಅಥವಾ ಶಾಸಕರು ಏಕಕಾಲದಲ್ಲಿ ಬೇರೆ ಪಕ್ಷಕ್ಕೆ ಹೋದರೆ, ಪಕ್ಷಾಂತರ ವಿರೋಧಿ ಕಾನೂನು ಅವರಿಗೆ ಅನ್ವಯಿಸುವುದಿಲ್ಲ. ಇದೀಗ ಒಂದು ಡಜನ್ ಟಿಡಿಪಿ ಶಾಸಕರು ಪಕ್ಷಾಂತರಕ್ಕೆ ಸಿದ್ಧರಾಗಿರುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ. 16 ಟಿಡಿಪಿ ಶಾಸಕರು ಒಟ್ಟಿಗೆ ಬಿಜೆಪಿಗೆ ಸೇರಲು ಸಿದ್ಧರಿದ್ದರೆ, ಖಂಡಿತವಾಗಿ ಪರಿಗಣಿಸಬಹುದು ಎಂದು ಮೂಲಗಳು ತಿಳಿಸಿವೆ.

16 ಶಾಸಕರು ಒಟ್ಟಿಗೆ ಸೇರುವುದರಿಂದ ಅವರ ಸದಸ್ಯತ್ವಕ್ಕೆ ಯಾವುದೇ ಬೆದರಿಕೆ ಇರುವುದಿಲ್ಲ ಮತ್ತು ಅವರು ಬಿಜೆಪಿ ಶಾಸಕರಾಗುತ್ತಾರೆ ಎಂದು ಮೂಲಗಳು ತಿಳಿಸಿವೆ. ಜೂನ್‌ನಲ್ಲೂ ಬಿಜೆಪಿ ಆರು ಟಿಡಿಪಿ ರಾಜ್ಯಸಭಾ ಸಂಸದರಲ್ಲಿ ನಾಲ್ವರನ್ನು ಒಂದೇ ಕಾರ್ಯತಂತ್ರದಲ್ಲಿ ಸೇರಿಸಿಕೊಂಡಿತ್ತು. ಮೂರನೇ ಎರಡರಷ್ಟು ಸಂಖ್ಯೆಯಾಗಿರುವುದರಿಂದ, ಪಕ್ಷಾಂತರ ವಿರೋಧಿ ಕಾನೂನನ್ನು ಅವರಿಗೆ ಅನ್ವಯಿಸಲಾಗಿಲ್ಲ.

ವಿಧಾನಸಭೆ ಚುನಾವಣೆ:
ಈ ವರ್ಷ ಆಂಧ್ರ ಪ್ರದೇಶದಲ್ಲಿ ಲೋಕಸಭೆಯೊಂದಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ಪಕ್ಷವು 175 ಸದಸ್ಯರ ವಿಧಾನಸಭೆಯಲ್ಲಿ 151 ಸ್ಥಾನಗಳನ್ನು ಗೆದ್ದಿದೆ. ಆದರೆ 2014 ರಲ್ಲಿ 103 ಸ್ಥಾನಗಳನ್ನು ಗೆದ್ದಿದ್ದ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಕೇವಲ 23 ಸ್ಥಾನಗಳೊಂದಿಗೆ ಎರಡನೇ ಸ್ಥಾನಕ್ಕೆ ಇಳಿಯಬೇಕಾಯಿತು. ಕಳೆದ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಖಾತೆ ಕೂಡ ತೆರೆಯಲಿಲ್ಲ.

ಆದರೀಗ 16 ಟಿಡಿಪಿ ಶಾಸಕರನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾದರೆ, ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲದಿದ್ದರೂ ಅದು ನೇರವಾಗಿ ಪ್ರಮುಖ ವಿರೋಧ ಪಕ್ಷವಾಗಲಿದೆ ಎಂದು ಮೂಲಗಳು ಬಹಿರಂಗಪಡಿಸಿವೆ.

(ಇನ್ಪುಟ್: ಏಜೆನ್ಸಿ ಐಎಎನ್ಎಸ್)

Trending News