ನಟಿ ಸೌಂದರ್ಯ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟ್ರೆಂಸ್ಟಿಂಗ್‌ ಮಾಹಿತಿ..!

ನಟಿ ಸೌಂದರ್ಯ ಹೆಸರಿಗೆ ತಕ್ಕಂತೆ ಬ್ಯೂಟಿ. ಅದ್ಭುತ ನಟನೆ, ಸೌಂದರ್ಯರ ಬಗ್ಗೆ ಹೇಳುತ್ತಾ ಹೋದ್ರೆ ಸಮಯವೇ ಸಾಲದು ಬಿಡಿ. ಸೌಂದರ್ಯ ಎಂದೇ ಖ್ಯಾತಿಯಾಗಿರುವ ಸೌಮ್ಯ ಸತ್ಯನಾರಾಯಣ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪಂಚಭಾಷಾ ನಟಿ ಮತ್ತು ನಿರ್ಮಾಪಕಿ.

Written by - YASHODHA POOJARI | Last Updated : Apr 16, 2022, 01:45 PM IST
  • ನಟಿ ಸೌಂದರ್ಯ ಬಗ್ಗೆ ಇಂಟ್ರೆಸ್ಟಿಂಗ್‌ ವಿಚಾರ
  • ಸೌಂದರ್ಯ ಸಾವನ್ನಪ್ಪಿ ಏಪ್ರಿಲ್‌ 17ಕ್ಕೆ 18 ವರ್ಷ ಪೂರ್ಣ
  • ಪಂಚಭಾಷಾ ನಟಿ ಕುರಿತ ವಿಶೇಷ ವರದಿ
ನಟಿ ಸೌಂದರ್ಯ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟ್ರೆಂಸ್ಟಿಂಗ್‌ ಮಾಹಿತಿ..!  title=
Soundarya

ನಟಿ ಸೌಂದರ್ಯ ನಮ್ಮನ್ನಗಲಿ ಏಪ್ರಿಲ್‌ 17ಕ್ಕೆ 18 ವರ್ಷ ಕಳೆದುಹೋಗುತ್ತದೆ. ಸೌಂದರ್ಯ ಬಗ್ಗೆ ಇಂಟ್ರೆಸ್ಟಿಂಗ್‌ ವಿಚಾರವನ್ನ ನಾವು ನಿಮಗೆ ತಿಳಿಸ್ತೀವಿ, ಅದೇನು ಅಂತ ತಿಳಿಯೋಕೆ ಮುಂದೆ ಓದಿ. 

ನಟಿ ಸೌಂದರ್ಯ ಹೆಸರಿಗೆ ತಕ್ಕಂತೆ ಬ್ಯೂಟಿ. ಅದ್ಭುತ ನಟನೆ, ಸೌಂದರ್ಯರ ಬಗ್ಗೆ ಹೇಳುತ್ತಾ ಹೋದ್ರೆ ಸಮಯವೇ ಸಾಲದು ಬಿಡಿ. ಸೌಂದರ್ಯ ಎಂದೇ ಖ್ಯಾತಿಯಾಗಿರುವ ಸೌಮ್ಯ ಸತ್ಯನಾರಾಯಣ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪಂಚಭಾಷಾ ನಟಿ ಮತ್ತು ನಿರ್ಮಾಪಕಿ.

ಇದನ್ನು ಓದಿ: ಕನ್ನಡ ಕಿರುತೆರೆಯ ನಗುವಿನ ಹೊಸ ಅಡ್ಡ - ಸ್ಟಾರ್ ಸುವರ್ಣ ವಾಹಿನಿಯ 'ಕಾಮಿಡಿ ಗ್ಯಾಂಗ್ಸ್'

ಪ್ರಬುದ್ಧ ನಟನೆಯಿಂದ ದಕ್ಷಿಣ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ಸೌಂದರ್ಯ, ತಮ್ಮ 27ನೇ ವಯಸ್ಸಿನಲ್ಲಿ ವಿಧಿವಶವಾಗಿದ್ದು ನಿಜಕ್ಕೂ ದೊಡ್ಡ ದುರಂತ. ಇವರು ಕನ್ನಡದಲ್ಲಿ ನಿರ್ಮಾಣ ಮಾಡಿದ್ದ `ದ್ವೀಪ' ಸಿನಿಮಾ ರಾಷ್ಟ್ರ ಪ್ರಶಸ್ತಿ ಪಡೆಯುವ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

1992ರಲ್ಲಿ ತೆರೆ ಕಂಡ ಕನ್ನಡದ `ಗಂಧರ್ವ' ಚಿತ್ರದಿಂದ ಸಿನಿ ಪಯಣ ಆರಂಭಿಸಿದರು ನಟಿ ಸೌಂದರ್ಯ. ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸೌಂದರ್ಯ  ಭರ್ಜರಿ ಯಶಸ್ಸು ಕಂಡು ಆಧುನಿಕ ಮಹಾನಟಿ ಸಾವಿತ್ರಿ ಎಂದೇ ಖ್ಯಾತಿ ಪಡೆದರು. ದಕ್ಷಿಣ ಚಿತ್ರರಂಗದ ಎಲ್ಲಾ ಟಾಪ್ ನಿರ್ದೇಶಕರೊಂದಿಗೆ ಮತ್ತು ನಟರೊಂದಿಗೆ ಕಾರ್ಯನಿರ್ವಹಿಸಿದ ಸೌಂದರ್ಯ, ತಮ್ಮ 12 ವರ್ಷದ ಸಿನಿ ಪಯಣದಲ್ಲಿ ಸುಮಾರು 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರದಿಂದ ಸಿನಿರಂಗ ಪ್ರವೇಶ ಮಾಡಿದ್ದ ಸೌಂದರ್ಯರ ಕೊನೆಯ ಚಿತ್ರ ಕನ್ನಡದ ಆಪ್ತಮಿತ್ರ. 

2004 ಏಪ್ರಿಲ್ 17ರಂದು ತೆಲಂಗಾಣದ ಕರೀಂನಗರಕ್ಕೆ ಪ್ರಚಾರಕ್ಕೆಂದು ಸೌಂದರ್ಯ ಅವರು ತಮ್ಮ ಸಹೋದರ ಅಮರನಾಥರೊಂದಿಗೆ ಬೆಂಗಳೂರಿನ ಮನೆಯಿಂದ ಹೊರಟಾಗ ವಿಮಾನ ದುರಂತದಲ್ಲಿ ಸಾವಿಗೀಡಾದರು. ಆಗ ಸೌಂದರ್ಯ ಐದು ತಿಂಗಳ ಗರ್ಭಿಣಿಯಾಗಿದ್ದರು. ಇದು ಗೊತ್ತಿರೋ ವಿಚಾರವೇ. ಈಗ ಮತ್ತೆ ಯಾಕೆ ಸೌಂದರ್ಯ ಮ್ಯಾಟರ್‌ ಅಂತ ನಿಮಿಗೆ ಅನ್ನಿಸಬಹುದು. ಸೌಂದರ್ಯ ಬಗ್ಗೆ ನಿಮಗೆ ಗೊತ್ತಿರದ ಒಂದಷ್ಟು ಇಂಟ್ರೆಸ್ಟಿಂಗ್‌ ವಿಚಾರಗಳಿವೆ.

ಇದನ್ನು ಓದಿ: 'ಕೆಜಿಎಫ್ 2 ಫೈನಲ್ ಕಲೆಕ್ಷನ್ ಬಾಲಿವುಡ್‌ನ ಮೇಲೆ ಎಸೆದ ಅಣುಬಾಂಬ್ ಆಗಿರುತ್ತದೆ'

ಇದೇ ಏಪ್ರಿಲ್‌ 17ಕ್ಕೆ ಸೌಂದರ್ಯ ವಿಧಿವಶರಾಗಿ 18 ವರ್ಷ ತುಂಬಿ ಬಿಡುತ್ತೆ. 2004ರ  ಏಪ್ರಿಲ್‌ 17ರಂದು ಸೌಂದರ್ಯ ಪ್ರಚಾರಕ್ಕೆಂದು ಆಂಧ್ರಕ್ಕೆ ತೆರಳುವ ದಿನ ತನ್ನ ಅತ್ತಿಗೆಯ ಸೀರೆಗಳನ್ನ ಹುಡುಕಿ ಅದರಲ್ಲಿ ಒಂದು ಸಾರಿಯನ್ನ ಸೆಲೆಕ್ಟ್‌ ಮಾಡಿಕೊಂಡು ಸುಂದರವಾಗಿ ರೆಡಿಯಾಗಿ ಹೊರಟಿದ್ರಂತೆ. ಮನೆಯಿಂದ ಹೊರ ನಡೆದ ಸೌಂದರ್ಯ ಆವತ್ತು ಮತ್ತೆ ಮನೆ ಒಳಗೆ ಓಡೋಡಿ ಬಂದು ಅತ್ತಿಗೆ ಕುಂಕುಮ ಕೊಡಿ ಅಂತ ಕೇಳಿ ಹಚ್ಚಿಕೊಂಡ್ರಂತೆ. ಯಾವತ್ತೂ ಇಲ್ಲದ ಕೆಲವೊಂದು ಡಿಫರೆಂಟ್‌ ವರ್ತನೆಗಳು ಅವರಲ್ಲಿ ಕಂಡು ಬಂದಿದ್ದವು ಅನ್ನೋದನ್ನ ಸೌಂದರ್ಯ ಅವರ ಅಣ್ಣನ ಪತ್ನಿ ಹೇಳಿಕೊಂಡಿದ್ದಾರೆ.

ಸೌಂದರ್ಯ ಅವರಿಗೆ ಐಸ್‌ ಕ್ರೀಮ್‌ ಅಂದ್ರೆ ಪಂಚಪ್ರಾಣ. ಆದ್ರೆ ತಿನ್ನೋ ಹಾಗಿಲ್ಲ. ತಿಂದ್ರೆ ದಪ್ಪ ಆಗ್ತಾರೆ ಅನ್ನೋ ಕಾರಣಕ್ಕೆ ಅಣ್ಣ ಇವರನ್ನ ಕಂಟ್ರೋಲ್‌ ಮಾಡುತ್ತಿದ್ದರಂತೆ. ಆದ್ರೆ ಯಾರಿಗೂ ಕಾಣದಂತೆ ಅತ್ತಿಗೆ, ನಾದಿನಿ ಹೊರಗಡೆ ಹೋದಾಗ ಚೆನ್ನಾಗಿ ತಿನ್ಕೊಂಡು ಬರ್ತಾ ಇದ್ವಿ ಅನ್ನೋದನ್ನ ಹೇಳಿಕೊಂಡಿದ್ದಾರೆ. ಒಮ್ಮೆ ಫ್ಯಾಮಿಲಿ ಸಮೇತ ಸ್ನೋ ಸಿಟಿಗೆ ಹೋದಾಗ ಫ್ಯಾನ್ಸ್‌ ತೊಂದರೆ ಕೊಡ್ತಾರೆ ಅನ್ನೋ ಕಾರಣಕ್ಕೆ ಬುರ್ಕಾ ಧರಿಸಿದ್ದರಂತೆ. ಅಲ್ಲಿ ತೂಗು ಉಯ್ಯಾಲೆಯಲ್ಲಿ ಆಡುತ್ತಿರುವಾಗ ಅವರು ಹಾಕಿಕೊಂಡ ಸ್ಕಾರ್ಪ್‌ ಗಾಳಿಗೆ ಹಾರಿ ಅವರ ಮುಖವನ್ನ ಅಲ್ಲಿದ್ದ ಜನ್ರು ನೋಡಿ ಹೇ ಸೌಂದರ್ಯ ಅಂತ ಗುಂಪುಗೂಡಿದ್ದರಂತೆ. ಆ ಸಂದರ್ಭದಲ್ಲಿ ಅಲ್ಲಿದ್ದ ಜನರಿಂದ ತಪ್ಪಿಸಿಕೊಳ್ಳಲು ಪಟ್ಟ ಕಷ್ಟದ ಬಗ್ಗೆಯೂ ಹೇಳಿಕೊಂಡಿದ್ದಾರೆ ಸೌಂದರ್ಯ ಅವರ ಅತ್ತಿಗೆ.

ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಹೋದಾಗಲೂ ಯಾರಿಗೂ ಕಾಣದಂತೆ ಮುಖವನ್ನ ಕವರ್‌ ಮಾಡಿಕೊಂಡೇ ತೆರಳುತ್ತಿದ್ದರು ಸೌಂದರ್ಯ. ಸೌಂದರ್ಯ ತಾನು ದೊಡ್ಡ ನಟಿ ಅನ್ನೋ ಥರ ಬಿಹೇವ್‌ ಮಾಡ್ತಾನೇ ಇರಲಿಲ್ಲ. ಮನೆಯಲ್ಲಿ ಮಗಳೊಬ್ಬಳು ಹೇಗಿರಬೇಕೋ ಹಾಗಿರುತ್ತಿದ್ದರಂತೆ. ಏನೇ ಆಗಲಿ ಅದ್ಭುತ ನಟಿಯೊಬ್ಬರನ್ನ ಕಳೆದುಕೊಂಡ ಚಿತ್ರರಂಗ ಅವರ ಸಾವಿನಿಂದ ಬಡವಾಗಿದ್ದು ಮಾತ್ರ ಅಷ್ಟೇ ಸತ್ಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News