ಕೊಡಗು: ಜಿಲ್ಲೆಯ ವಿರಾಜಪೇಟೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಕ್ಷಿಣ ಭಾರತದ ಖ್ಯಾತ ನಟಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ಐಟಿ ಅಧಿಕಾರಿಗಳ ಜೊತೆ ಇಡಿ ಅಧಿಕಾರಿಗಳೂ ಕೂಡ ದಾಳಿ ನಡೆಸಿದ್ದು, ಈ ವೇಳೆ ಮನೆಯಲ್ಲಿ ರಶ್ಮಿಕಾ ಅವರ ತಂದೆ ಮಾತ್ರ ಇದ್ದರು ಎನ್ನಲಾಗಿದೆ. ಸುಮಾರು ಹತ್ತಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದು ಮಹತ್ವದ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಏತನ್ಮಧ್ಯೆ, ನಟಿ ರಶ್ಮಿಕಾ ಮಂದಣ್ಣ ಕೂಡಲೇ ಕೊಡಗಿನ ವಿರಾಜಪೇಟೆಯಲ್ಲಿರುವ ತಮ್ಮ ನಿವಾಸಕ್ಕೆ ಬಂದು ತುರ್ತು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಕನ್ನಡ 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಸಿನಿ ಜಗತ್ತಿಗೆ ಪದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ ಅವರ ಆದಾಯದಲ್ಲಿ ದುಪ್ಪಟ್ಟಾಗಿದೆ.
ಸ್ಯಾಂಡಲ್ವುಡ್ ಮಾತ್ರವಲ್ಲದೆ ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಬಿಗ್ ಬಜೆಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ ಕೋಟಿ-ಕೋಟಿ ಸಂಭಾವನೆ ಪಡೆಯುತ್ತಿದ್ದು, ಸಂಭಾವನೆ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂಬ ಆರೋಪಗಳೂ ಕೂಡ ಕೇಳಿ ಬಂದಿವೆ. ಸ್ಟಾರ್ ನಟಿ ಸಿನಿಮಾಗಳಲ್ಲಿ ಮಾತ್ರವಲ್ಲದೆ ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ಇದರಿಂದ ಕೂಡ ಅವರ ಆದಾಯದಲ್ಲಿ ಹೆಚ್ಚಳವಾಗಿದೆ.
ಇದಲ್ಲದೆ ರಶ್ಮಿಕಾ ಷೇರು ವ್ಯವಹಾರಗಳನ್ನೂ ನಡೆಸುತ್ತಿದ್ದಾರೆ ಎಂಬ ಮಾಹಿತಿ ಆದಾಯ ತೆರಿಗೆ ಇಲಾಖೆಗೆ ಲಭ್ಯವಾಗಿದೆ ಎನ್ನಲಾಗುತ್ತಿದೆ. ರಶ್ಮಿಕಾ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ದಾಖಲೆಗಳಿಗೂ ರಶ್ಮಿಕಾ ಅವರ ಗಳಿಕೆಗೂ ಹೊಂದಾಣಿಕೆಯಾಗದಿರುವುದೇ ಈ ದಾಳಿಯ ಹಿಂದಿನ ಮುಖ್ಯ ಕಾರಣ ಎನ್ನಲಾಗಿದೆ.