ಮುಂಬೈ: ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಆರೋಗ್ಯ ಸ್ಥಿತಿ ಮತ್ತೆ ಆಕಸ್ಮಿಕವಾಗಿ ಬಿಗಡಾಯಿಸಿದೆ. ಅವರನ್ನು ಮುಂಬೈನಲ್ಲಿರುವ ಕೋಕಿಲಾಬೆನ್ ಆಸ್ಪತ್ರೆಯ ICU ವಾರ್ಡ್ ನಲ್ಲಿ ಭರ್ತಿ ಮಾಡಲಾಗಿದೆ. ಇತ್ತೀಚೆಗಷ್ಟೇ ಇರ್ಫಾನ್ ಖಾನ್ ಅವರ ತಾಯಿ ಸಯೀದಾ ಬೇಗಂ ನಿಧನರಾಗಿದ್ದಾರೆ. ತಮ್ಮ ನಿವಾಸದಿಂದ ದೂರವಿರುವ ಕಾರಣ ಕೇವಲ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಇರ್ಫಾನ್ ತಮ್ಮ ತಾಯಿಯ ಅಂತಿಮ ದರ್ಶನ ಪಡೆದಿದ್ದರು ಎಂಬ ಸುದ್ದಿಗಳು ಪ್ರಕಟಗೊಂಡಿದ್ದವು. ಸದ್ಯ ಇರ್ಫಾನ್ ಖಾನ್ ಮುಂಬೈನಲ್ಲಿದ್ದಾರೆ.
ಎರಡು ವರ್ಷಗಳ ಹಿಂದೆ ಅಂದರೆ ಮಾರ್ಚ್ 2018 ರಲ್ಲಿ ಇರ್ಫಾನ್ ಅವರಿಗೆ ತಮ್ಮ ಕಾಯಿಲೆಯ ಕುರಿತು ತಿಳಿದಿದೆ. ಖುದ್ದು ಅವರೇ ಈ ಕುರಿತು ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು. ತಮಗಿರುವ ಕಾಯಿಲೆಯ ಕುರಿತು ಟ್ವೀಟ್ ಮಾಡಿದ್ದ ಇರ್ಫಾನ್ ಖಾನ್, "ಜೇವನದಲ್ಲಿ ನಡೆಯುವ ಕೆಲ ಆಕಸ್ಮಿಕ ಸಂಗತಿಗಳು ನಿಮ್ಮನ್ನು ಮುಂದಕ್ಕೆ ಕರೆದೊಯ್ಯುತ್ತವೆ. ನನ್ನ ಜೀವನದಲ್ಲಿಯೂ ಕೂಡ ಕಳೆದ ಕೆಲವು ದಿನಗಳಿಂದ ಇದೆ ರೀತಿ ನಡೆಯುತ್ತಿದ್ದು, ನನಗೆ ನ್ಯೂರೋ ಎಂಡೊಕ್ರೈನ್ ಟ್ಯೂಮರ್ ಹೆಸರಿನ ಕಾಯಿಲೆ ಇದೆ. ಆದರೆ, ನನ್ನ ಹತ್ತಿರದಲ್ಲಿರುವ ಜನರ ಪ್ರೀತಿ ಹಾಗೂ ಶಕ್ತಿ ನನ್ನಲ್ಲಿ ಆಶಾಭಾವ ಮೂಡಿಸಿದೆ" ಎಂದು ಹೇಳಿದ್ದರು.
"ನನಗಿರುವ ಕಾಯಿಲೆಯ ಚಿಕಿತ್ಸೆಗಾಗಿ ನಾನು ವಿದೇಶಕ್ಕೆ ತೆರಳುತ್ತಿದ್ದೇನೆ, ನನಗಾಗಿ ಎಲ್ಲರು ಪ್ರಾರ್ಥಿಸಿ ಎಂದು ನಾನು ಕೇಳಿಕೊಳ್ಳುತ್ತೇನೆ. ನನ್ನ ಕಾಯಿಲೆಯ ಕುರಿತು ನ್ಯೂರೋಗೆ ಸಂಬಂಧಿಸಿದಂತೆ ಕೆಲ ವದಂತಿಗಳನ್ನು ಹಬ್ಬಿಸಲಾಗುತ್ತಿದ್ದು, ಈ ಕಾಯಿಲೆ ಯಾವಾಗಲು ಮೆದುಳಿಗೆ ಸಂಬಂಧಿಸಿದ್ದಾಗಿದೆ ಎಂದು ತಿಳಿಯುವುದು ಸರಿಯಲ್ಲ. ನನ್ನ ಹೇಳಿಕೆಗಾಗಿ ಕಾಯ್ದ ನಿಮಗೆಲ್ಲರಿಗೋಸ್ಕರ ಮತ್ತೆ ನಾನು ಕಥೆಗಳನ್ನು ಹೊತ್ತು ವಾಪಸ್ ಬರಲಿದ್ದೇನೆ" ಎಂದು ಇರ್ಫಾನ್ ಹೇಳಿದ್ದರು.
ಕಾಯಿಲೆಯನ್ನು ಸೋಲಿಸಿ ಮರಳಿದ ಬಳಿಕ ಈ ಚಿತ್ರದಲ್ಲಿ ಇರ್ಫಾನ್ ಕಾಣಿಸಿಕೊಂಡಿದ್ದರು
54 ವರ್ಷ ವಯಸ್ಸಿನ ಇರ್ಫಾನ್ ಖಾನ್ ಲಂಡನ್ ನಲ್ಲಿ ತಮ್ಮ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಈ ಅವಧಿಯಲ್ಲಿ ಅವರು ಬಾಲಿವುಡ್ ನಿಂದ ದೂರ ಉಳಿದಿದ್ದರು. ದೀರ್ಘ ಕಾಲದವರೆಗೆ ತಮ್ಮ ಕಾಯಿಲೆಯ ವಿರುದ್ಧ ಹೋರಾಟ ನಡೆಸಿದ್ದ ಅವರು, ಬಳಿಕ ಗುಣಮುಖರಾಗಿ ಬಾಲಿವುಡ್ ಮರಳಿದ್ದರು. ಕಳೆದ ವರ್ಷ ಸೆಪ್ಟೆಂಬರ್ 2019ರಂದು ಅವರು ಭಾರತಕ್ಕೆ ಮರಳಿದ್ದರು. ವೀಲ್ ಚೇರ್ ಮೇಲೆ ಕುಳಿತಿದ್ದ ಅವರನ್ನು ಏರ್ ಪೋರ್ಟ್ ವೊಂದರಲ್ಲಿ ನೋಡಲಾಗಿತ್ತು. ಭಾರತೆಕ್ಕೆ ವಾಪಸ್ ಬಂದ ಬಳಿಕ ಅವರು, 'ಅಂಗ್ರೆಜಿ ಮೀಡಿಯಂ' ಹೆಸರಿನ ಹಿಂದಿ ಚಿತ್ರದ ಶೂಟಿಂಗ್ ನಲ್ಲಿ ತೊಡಗಿದ್ದರು. ಕಾಯಿಲೆಯ ಬಳಿಕ ಭಾರತಕ್ಕೆ ಮರಳಿದ ಬಳಿಕ ಇದು ಅವರ ಮೊದಲನೆಯ ಚಿತ್ರವಾಗಿತ್ತು. ಆದರೆ, ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಉದ್ಭವಿಸಿರುವ ಪರಿಸ್ಥಿತಿಯ ಕಾರಣ ಅವರ ಚಿತ್ರ ಕಮರ್ಶಿಯಲಿ ಹಿಟ್ ಆಗಲಿಲ್ಲ.
ಮುಂಬೈನಲ್ಲಿ ಇರ್ಫಾನ್ ತಮ್ಮ ಪತ್ನಿ ಸುತಾಪಾ ಸಿಕದರ್ ಜೊತೆ ವಾಸವಾಗಿದ್ದಾರೆ. ಅವರಿಗೆ ಬಾಬಿಲ್ ಹಾಗೂ ಅಯಾನ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಸದ್ಯ ಈ ಮೂವರೂ ಕೂಡ ಇರ್ಫಾನ್ ಜೊತೆಗೆ ಆಸ್ಪತ್ರೆಗೆ ತೆರಳಿದ್ದಾರೆ.