ಬೆಂಗಳೂರು: ಡಿಸೆಂಬರ್31 ರ ರಾತ್ರಿ ಹೊಸ ವರ್ಷಾಚರಣೆ ವೇಳೆ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ಕೋರಿ ಸನ್ನಿ ನೈಟ್ಸ್ ಆಯೋಜಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.
ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷಾಚರಣೆ ವೇಳೆ ಇತರ ಕಾರ್ಯಕ್ರಮಗಳಂತೆ ಸನ್ನಿ ನೈಟ್ಸ್ಗೆ ಅನುಮತಿ ಕೋರಿ ಆಯೋಜಕರು ಹೈಕೋರ್ಟ್ ಗೆ ರಿಟ್ ಸಲ್ಲಿಸಿದ್ದಾರೆ. ಹೊಸ ವರ್ಷದ ಸ್ವಾಗತಕ್ಕಾಗಿ ಡಿಸೆಂಬರ್ 31 ರ ರಾತ್ರಿ ಪ್ರತಿ ವರ್ಷ ನಡೆಯುವ ಕಾರ್ಯಕ್ರಮಗಳಂತೆ ಸನ್ನಿ ನೈಟ್ಸ್ ಕೂಡ ಒಂದಾಗಿದೆ. ಸನ್ನಿ ಲಿಯೋನ್ ಪಾರ್ನ್ ಸ್ಟಾರ್ ಎನ್ನುವ ಒಂದೇ ಕಾರಣಕ್ಕೆ ಅನುಮತಿ ನಿರಾಕರಣೆ ಮಾಡಿರುವುದು ಸರಿಯಲ್ಲ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿಗೆ ಅವಹೇಳನ ಮಾಡುವ ಉದ್ದೇಶವಿಲ್ಲ. ಅಲ್ಲದೇ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಸನ್ನಿ ನೈಟ್ಸ್ ಆಚರಣೆಗೆ ಈಗಾಗಲೇ ಹಲವು ಸಿದ್ದತೆ ನಡೆಸಿದ್ದು ಕೋಟ್ಯಾಂತರ ರೂ. ಹಣ ಖರ್ಚು ಮಾಡಲಾಗಿದೆ. ನಗರದಲ್ಲಿ ಹಲವು ಪಬ್, ಡ್ಯಾನ್ಸ್ ಬಾರ್ ಗಳು ಅಂದು ಎಂದಿಗಿಂತಲೂ ಹೆಚ್ಚಿನ ಅವಧಿ ಕಾರ್ಯನಿರ್ವಹಿಸಲಿವೆ. ಹೀಗಿರುವಾಗ ಪ್ರತಿಭಾನ್ವಿತ ನಟಿ ಶೋಗೆ ಅನುಮತಿ ನಿರಾಕರಿಸಿರುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ಸನ್ನಿ ನೈಟ್ಸ್ ಆಯೋಜಕರು ವಾದಿಸಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಹೊಸ ವರ್ಷಾಚರಣೆ ವೇಳೆ ಸನ್ನಿ ನೈಟ್ಸ್ನಲ್ಲಿ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರಕಟಿಸಿದ್ದರು. ಈ ಹಿನ್ನಲೆಯಲ್ಲಿ ಸನ್ನಿ ಕುಣಿತಕ್ಕೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅನುಮತಿ ನಿರಾಕರಿಸಿದ್ದರು. ಇದನ್ನು ವಿರೋಧಿಸಿ ಆಯೋಜಕರು ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ನಡೆಯಲಿದ್ದು, ಸನ್ನಿ ಕುಣಿತಕ್ಕೆ ಸಿಲಿಕಾನ್ ಸಿಟಿಯಲ್ಲಿ ಗ್ರೀನ್ ಲೈಟ್ ಸಿಗಲಿದೆಯೇ? ಬ್ರೇಕ್ ಬೀಳಲಿದೆಯೇ? ಎಂಬುದನ್ನು ಕೋರ್ಟ್ ತಿರ್ಮಾನಿಸಲಿದೆ.