ಬಣ್ಣಗಳ ಜೊತೆಗೆ ಬಾಂಧವ್ಯ ಬೆಸೆಯುವ ಹಬ್ಬ 'ಹೋಳಿ'

ಉತ್ತರ ಭಾರತದಲ್ಲಿ ಬಣ್ಣಗಳ ಹಬ್ಬ 'ಹೋಳಿ'ಗೆ ಹೆಚ್ಚು ಮಹತ್ವವಿದೆ. 

Last Updated : Mar 21, 2019, 09:13 AM IST
ಬಣ್ಣಗಳ ಜೊತೆಗೆ ಬಾಂಧವ್ಯ ಬೆಸೆಯುವ ಹಬ್ಬ 'ಹೋಳಿ' title=
Pic Courtesy: IANS

ಪಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಈ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ಕಾಮನಹಬ್ಬ ಎಂದೂ ಕೂಡ ಆಚರಿಸಲಾಗುತ್ತದೆ. ಹೋಳಿ ಬಣ್ಣಗಳ ಜೊತೆಗೆ ಬೆಸೆದುಕೊಂಡ ಬಾಂಧವ್ಯವನ್ನು ಬೆಸೆಯುವ ಹಬ್ಬ. ಉತ್ತರ ಭಾರತದಲ್ಲಿ ಬಣ್ಣಗಳ ಹಬ್ಬ 'ಹೋಳಿ'ಗೆ ಹೆಚ್ಚು ಮಹತ್ವವಿದೆ. 

ದೇಶದೆಲ್ಲೆಡೆ ಇಂದು ಹೋಳಿ ಹಬ್ಬದ ಸಂಭ್ರಮ. ಓಕುಳಿ ಆಡಿ, ಬಣ್ಣಗಳನ್ನು ಎರಚಿಕೊಂಡು ಖುಷಿಪಟ್ಟು ಈ ಹಬ್ಬವನ್ನಾಚರಿಸಲಾಗುತ್ತದೆ. ಈ ಹಿಂದೆ ಉತ್ತರ ಭಾರತದಲ್ಲಿ ಮಾತ್ರ ಆಚರಿಸಲಾಗುತ್ತಿದ್ದ ಹೋಳಿಯನ್ನು ಈಗ ಭಾರತದಾದ್ಯಂತ ಆಚರಿಸಲಾಗುತ್ತದೆ. 

ಸಡಗರ, ಸಂಭ್ರದದೊಂದಿಗೆ ಮನಸ್ಸಿಗೆ ಉಲ್ಲಾಸ ತುರುವ ಬಣ್ಣಗಳ ಎರಚಾಟದ ನಂತರ ಸ್ನಾನ ಮಾಡಿ ದೇವರ ಪೂಜೆ ನೆರವೇರಿಸುವುದು ಹೋಳಿ ಹಬ್ಬದ ವಿಶೇಷ. ರಂಗು ರಂಗಿನ ಬಣ್ಣಗಳ ಓಕುಳಿ ಹರಿಸಿ ಇಡಿ ವರ್ಷ ಸಂತೋಷದ ಕೋಡಿಯೇ ಹರಿಯಲಿ ಎಂದು ಹಾರೈಸುವ ರಂಗಿನ ಹಬ್ಬವೇ ಹೋಳಿ.

ಪುರಾಣಗಳಲ್ಲಿ ಉಲ್ಲೇಖವಿರುವ ಪ್ರಕಾರ,  ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರ ಪಡೆದಿದ್ದ ತಾರಕಾಸುರನೆಂಬ ರಾಕ್ಷಸನ ದುರಹಂಕಾರದಿಂದ ಮೆರೆಯುತ್ತಿದ್ದ. ಭೋಗಸಮಾಧಿಯಲ್ಲಿದ್ದ ಶಿವ, ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾದ್ಯವಿರಲಿಲ್ಲ. ತಾರಕಾಸುರನ ಉಪಟಳ ತಾಳಲಾರದೆ ದೇವತೆಗಳು ಶಿವನಿಗೆ ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮ(ಮನ್ಮಥ) ನಲ್ಲಿ ಬೇಡಿದರು. ಕಾಮ ಮತ್ತು ಅವನ ಪತ್ನಿ ರತಿದೇವಿ ಲೋಕಕಲ್ಯಾಣಕ್ಕಾಗಿ ಈ ಸತ್ಕಾರ್ಯಕ್ಕೆ ಒಪ್ಪಿ, ಭೋಗಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳನ್ನು ಬಿಟ್ಟು ಸಮಾಧಿಯಿಂದ ಎಚ್ಚರಗೊಳ್ಳುವಂತೆ ಮಾಡುತ್ತಾರೆ. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡುತ್ತಾನೆ.

ಬಳಿಕ ರತಿದೇವಿ ದುಃಖದಿಂದ ಶಿವನಲ್ಲಿ ಪತಿಭಿಕ್ಷೆ ಬೇಡುತ್ತಾಳೆ. ಶಾಂತಗೊಂಡು ಶಿವನು, ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ಮನ್ಮಥನಿಗೆ ವರ ನೀಡುತ್ತಾನೆ. ಮನ್ಮಥನ ಇನ್ನೊಂದು ಹೆಸರು 'ಕಾಮ'. ಈ ಘಟನೆ ನಡೆದದ್ದು ಫಾಲ್ಗುಣ ಮಾಸದ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು "ಕಾಮನ ಹುಣ್ಣಿಮೆ" ಎಂದು ಆಚರಿಸುತ್ತಾರೆ.

ಹೋಳಿ ಆಚರಣೆ ಹಿಂದಿರುವ ಮತ್ತೊಂದು ಕಥೆ ಪ್ರಹ್ಲಾದ ಮತ್ತು ಹಿರಣ್ಯಕಶಿಪುವಿಗೆ ಸಂಬಂಧಿಸಿದ್ದು. ಶ್ರೀಹರಿಯನ್ನೇ ತನ್ನ ಪರಮ ವೈರಿ ಎಂಬುವವನಿಗೆ ಜನಿಸಿದ ಮಗ ಪ್ರಹ್ಲಾದ ಹರಿಭಕ್ತ. ಹರಿಭಕ್ತನಾದ ಮಗನ ಮನವೊಲಿಸಲು ಸೋತ ಹಿರಣ್ಯಕಶಿಪು ಕೊನೆಗೆ ಪುತ್ರ ಸಂಹಾರ ಮಾಡಲು ನಿರ್ಧರಿಸುತ್ತಾನೆ. ಆದರೆ ಪ್ರಹ್ಲಾದನನ್ನು ಕೊಲ್ಲುವ ಆತನ ಪ್ರಯತ್ನಗಳೆಲ್ಲವೂ ವಿಫಲವಾಗುತ್ತವೆ. ಪ್ರಹ್ಲಾದನನ್ನು ಕೊಲ್ಲಲು ಹಿರಣ್ಯಕಶಿಪು ತನ್ನ ಸಹೋದರಿ ಹೋಳಿಕಾಳ ಮೊರೆ ಹೋಗುತ್ತಾನೆ. ಸಹೋದರನ ಆಜ್ಞೆ ಮೇರೆಗೆ ಅಗ್ನಿನಿರೋಧವುಳ್ಳ ವಸ್ತ್ರ ತೊಟ್ಟು ಬಾಲ ಪ್ರಹ್ಲಾದನನ್ನು ಹೊತ್ತುಕೊಂಡ ಹೋಳಿಕಾ, ಅಗ್ನಿಕುಂಡ ಪ್ರವೇಶಿಸುತ್ತಾಳೆ. ಆಗ ವಸ್ತ್ರವು ಹಾರಿಹೋಗಿ ಹೋಳಿಕಾಳ ದಹನವಾಗುತ್ತದೆ. ವಿಷ್ಣುಭಕ್ತನಾದ ಪ್ರಹ್ಲಾದ ಬದುಕುಳಿಯುತ್ತಾನೆ.

ಕೆಡುಕು ಮಾಡುವವರಿಗೆ ಸೋಲು ಎಂಬುದು ಎಂದಿಗೂ ಕಟ್ಟಿಟ್ಟ ಬುತ್ತಿ. ದುಷ್ಟಶಕ್ತಿ ವಿರುದ್ಧ ಒಳ್ಳೆಯ ತನದ ಜಯ ನಿಶ್ಚಿತ ಎಂಬ ಸಂದೇಶ ಸಾರುವ ಸಲುವಾಗಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ.
 

Trending News