ಬೆಂಗಳೂರು: ಸಾಲಗಾರರ ಕಾಟ ತಾಳಲಾರದೇ ತಾನು ಬಾಡಿಗೆಗೆ ಇದ್ದ ಮನೆಯ ಓನರ್ ವೃದ್ಧೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಯನ್ನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ.
ಕಿಶನ್ ಬಂಧಿತ ಕೊಲೆ ಆರೋಪಿ.ಈತ ಕೊಲೆ ಮಾಡಿದ್ದಲ್ಲದೇ ವೃದ್ಧೆಯ ಮೈಮೇಲಿನ ಒಡವೆ ಕದ್ದಿದ್ದ. ಬಳಿಕ ಮನೆಯವರಿಗೆ ಹಾಗೂ ಪೊಲೀಸರೊಂದಿಗೆ ಕರೆ ಮಾಡಿ ಏನು ಗೊತ್ತಿಲ್ಲದಂತೆ ನಟಿಸಿ ಚಾಣಕ್ಷ್ಯತನ ಮೆರೆದಿದ್ದ.
ವಿನಾಯಕ್ ನಗರದಲ್ಲಿ ವಾಸವಾಗಿದ್ದ ಅವಿವಾಹಿತನಾಗಿದ್ದ. ಖಾಸಗಿ ಕಂಪೆನಿಯೊಂದರಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ. ಜೊತೆಗೆ ಆನ್ ಲೈನ್ ಟ್ರೇಡಿಂಗ್ ಉದ್ಯಮಕ್ಕೆ ಕೈ ಹಾಕಿ12 ಲಕ್ಷ ಕಳೆದುಕೊಂಡಿದ್ದ. ಇತ್ತೀಚೆಗೆ ಸಾಲಗಾರರು ಈತನ ಬೆನ್ನು ಬಿದ್ದಿದ್ದರು. ಇದರಿಂದ ಬೇಸತ್ತಿದ್ದ ಆರೋಪಿ ಮನೆ ಮಾಲೀಕಾರದ ಯಶೋಧಮ್ಮ ಬಳಿ ಈ ಹಿಂದೆ 40 ಸಾವಿರ ಸಾಲ ಸಹ ಪಡೆದು ತೀರಿಸಲಿರಲಿಲ್ಲ. ಹೀಗಾಗಿ ಸಾಲ ತೀರಿಸುವಂತೆ ಯಶೋಧಮ್ಮ ಕೇಳಿದಾಗ ಇಬ್ಬರು ನಡುವೆ ಮಾತಿನ ಚಕಮಕಿ ನಡೆದಿದೆ. ಮನೆಯ ನೆಲಮಹಡಿಯ ಪ್ರತ್ಯೇಕ ಕೋಣೆಯಲ್ಲಿ ಆರು ವರ್ಷಗಳಿಂದ ಯಶೋಧಮ್ಮ ವಾಸವಿದ್ದರೆ ಈಕೆಯ ಮಗ ಹಾಗೂ ಸೊಸೆ ಮೇಲಿನ ಮಹಡಿಯಲ್ಲಿ ವಾಸವಿದ್ದರು. ಅದೇ ಬಿಲ್ಡಿಂಗ್ ನ ಎರಡನೇ ಮಹಡಿಯಲ್ಲಿ ವಾಸವಿದ್ದ ಕಿಶನ್ , ಜುಲೈ 1ರಂದು ಮನೆಗೆ ನುಗ್ಗಿ ಚಾಕುವಿನಿಂದ ಸುಮಾರು 60 ಬಾರಿ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದ. ಮಾರನೇ ದಿನ ಆರೋಪಿಯೇ ಮನೆಯವರಿಗೆ ಕರೆ ಮಾಡಿ ಕೊಲೆಯಾಗಿರುವ ವಿಷಯ ಹೇಳಿದ್ದ. ಈ ಸಂಬಂಧ ವೃದ್ಧೆಯ ಮಗ ರಾಜು ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ: Mallikarjun Kharge : 'ಚುನಾವಣೆ ಮುನ್ನವೇ ನಾನು ಸಿಎಂ, ನಾನು ಸಿಎಂ ಎನ್ನುವುದು ಸರಿಯಲ್ಲಾ'
ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಆರಂಭದಲ್ಲಿ ಆರೋಪಿ ಪತ್ತೆಮಾಡುವುದೇ ಚಾಲೆಂಜ್ ಆಗಿತ್ತು. ಕೊಲೆಯಾದ ಸ್ಥಳದಲ್ಲಿ ಯಾವುದೇ ಸುಳಿವು ಸಹ ಸಿಕ್ಕಿರಲಿಲ್ಲ. ಸಿಸಿಟಿವಿಯಲ್ಲೂ ಸಹ ಆರೋಪಿ ಸೆರೆಯಾಗಿರಲಿಲ್ಲ.ಯಾವ ಉದ್ದೇಶಕ್ಕಾಗಿ ಹಂತಕ ಕೊಲೆ ಮಾಡಿದ್ದಾನೆ ಎಂಬುದರ ಬಗ್ಗೆಯೂ ಮಾಹಿತಿ ಇರಲಿಲ್ಲ. ಸಂಬಂಧಿಕರು ಹಾಗೂ ಸ್ಥಳೀಯರನ್ನು ವಿಚಾರಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊಲೆಯಾಗಿ 20 ದಿನ ಕಳೆದರೂ ಆರೋಪಿ ಯಾರೆಂಬುದೇ ಪೊಲೀಸರಿಗೆ ಗೊತ್ತಾಗಿರಲಿಲ್ಲ.
ಯಶೋಧಮ್ಮನನ್ನ ಕೊಲೆ ಮಾಡಿ ಮೈಮೇಲಿದ್ದ ಚಿನ್ನದ ಸರ ಹಾಗೂ ಎರಡು ಚಿನ್ನದ ಬಳೆಯನ್ನು ಕಳ್ಳತನ ಮಾಡಿದ್ದ. ಮತ್ತೊಂದೆಡೆ ಆರೋಪಿ ಕಿಶನ್ ಸಹ ಯಾರಿಗೂ ಸಹ ತಾನು ಮಾಡಿರುವ ಕೊಲೆಯ ಬಗ್ಗೆ ಅನುಮಾನ ಬರದಂತೆ ನಟಿಸಿದ್ದ. ಮನೆಯವರೊಂದಿಗೆ ಇದ್ದು ವೃದ್ಧೆಯ ಅಂತ್ಯಸಂಸ್ಕಾರದಲ್ಲೂ ಭಾಗಿಯಾಗಿದ್ದ. ಅಲ್ಲದೇ ಪೊಲೀಸರ ತನಿಖೆಗೂ ಸಹಕರಿಸಿದ್ದ. ಹೀಗಾಗಿ ಪೊಲೀಸರಿಗೆ ಈತನ ಮೇಲೆ ಸಂಶಯ ಬಂದಿರಲಿಲ್ಲ.
ಇದನ್ನೂ ಓದಿ: BY Vijayendra : ಪಿಎಸ್ಐ ಹಗರಣ ಕಾಂಗ್ರೆಸ್ ಪಕ್ಷದ ಕೂಸು : ಬಿವೈ ವಿಜಯೇಂದ್ರ
ತನಿಖೆ ವೇಳೆ ಕದ್ದ ಚಿನ್ನಾಭರಣವನ್ನ ಗಿರವಿ ಅಂಗಡಿಯೊಂದರಲ್ಲಿ ಅಡ ಇಟ್ಟಿದ್ದರ ಬಗ್ಗೆ ಪೊಲೀಸರಿಗೆ ಸಣ್ಣ ಕ್ಲ್ಯೂ ಸಿಕ್ಕಿತ್ತು. ತನಿಖೆ ಚುರುಕುಗೊಳಿಸಿದಾಗ ಕಿಶನ್ ಎಂಬಾತನೇ ಅಡ ಇಟ್ಟಿದ್ದ ಎಂಬ ಸಂಗತಿ ಗೊತ್ತಾಗಿದೆ.ಅನುಮಾನದ ಮೇರೆಗೆ ವಶಕ್ಕೆ ಪಡೆದುಕೊಂಡು ಪೊಲೀಸ್ ಸ್ಟೈಲ್ ನಲ್ಲಿ ಪ್ರಶ್ನಿಸಿದಾಗ ಸತ್ಯ ಕಕ್ಕಿದ್ದಾನೆ. ಸಾಲ ತೀರಿಸಲು ವೃದ್ದೆಯನ್ನ ಹತ್ಯೆ ನಾನೇ ಮಾಡಿದ್ದು ಎಂದು ಒಪ್ಪಿಕೊಂಡಿದ್ದಾನೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.